ವಿದ್ಯಾರ್ಥಿ ನಿಲಯಗಳಲ್ಲಿ ಕಳೆದ ಹತ್ತು ಹದಿನೈದು ವರ್ಷಗಳಿಂದ ಅಡುಗೆ ಸಹಾಯಕಿಯರು, ಕಾವಲುಗಾರು, ಸ್ವಚ್ಛತಾಗಾರರು, ಜವಾನರು, ನರ್ಸ್‌ಗಳು, ಡಿ.ಗ್ರೂಪ್ ನೌಕರರಿಗೆ ಸರ್ಕಾರಿ ಸೌಲಭ್ಯಗಳು ಸರಿಯಾಗಿ ಸಿಗುತ್ತಿಲ್ಲ ಎಂದು ಹೊರಗುತ್ತಿಗೆ ನೌಕರರ ಸಂಘದ ರಾಜ್ಯ ಜಂಟಿ ಕಾರ್ಯದರ್ಶಿ ಹುಲಗಪ್ಪ ಛಲವಾದಿ ಆರೋಪಿಸಿದರು.
ಹಾವೇರಿ ಪಟ್ಟಣದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಸಿಬ್ಬಂದಿಗಳು ವೇತನ ತಾರತಮ್ಯ ಖಂಡಿಸಿ, ಸಮಾನ ವೇತನಕ್ಕಾಗಿ ಧರಣಿ ನಡೆಸಿ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಕ್ಷಯ ಶ್ರೀಧರ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಈ ಹೊರಗುತ್ತಿಗೆ ಜೀತ ಪದ್ಧತಿ ತೊಲಗಬೇಕು. ಬಾಕಿ ಇರುವ ಸಂಬಳವನ್ನು ತಕ್ಷಣ ಕೊಡಬೇಕು. ಅವರ ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕಾಗಿ ಜಿಲ್ಲಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ನಾಲ್ಕು ಇಲಾಖೆ ಅಧಿಕಾರಿಗಳ ಜಂಟಿ ಸಭೆ ಕರೆದು ಹೊರಗುತ್ತಿಗೆ ನೌಕರರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸಮಿತಿ ಸದಸ್ಯೆ ಶಾಂತಕ್ಕ ಗಡ್ಡಿಯವರ ಮಾತನಾಡಿ, “ಸಿ ಮತ್ತು ಡಿ ವರ್ಗದ ಹೊರಗುತ್ತಿಗೆ ಸಿಬ್ಬಂದಿಗಳಿಗೆ ನಿವೃತ್ತಿವರೆಗೆ ಸೇವಾ ಭದ್ರತೆ ಕೊಡಬೇಕು. ನೇರವಾಗಿ ಇಲಾಖೆಯಿಂದ ಮಾಸಿಕ ವೇತನವನ್ನು ಬ್ಯಾಂಕ್ ಖಾತೆಗೆ ಹಾಕಬೇಕು. ಕಾರ್ಮಿಕ ಇಲಾಖೆಯ ಆದೇಶದಂತೆ ಕನಿಷ್ಠ ವೇತನವನ್ನು ಕೊಡಬೇಕು. ಕಾನೂನು ಪ್ರಕಾರ ವಾರದ ರಜೆ, ಹಬ್ಬಗಳ ರಜೆ, ಸಂಬಳದ ಚೀಟಿ, ಇಎಸ್ಐ ಕಾರ್ಡ್ ಒದಗಿಸಬೇಕು. ಪಿಎಫ್ಗೆ ಹಣ ತುಂಬಿದ ರಶೀದಿ ಕೊಡಬೇಕು. ಸುಪ್ರೀಂ ಕೋರ್ಟ್ ಆದೇಶದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ಕೊಡಬೇಕು ಎಂದು ಆಗ್ರಹಿಸಿದರು.
ಮನವಿ ಪತ್ರ ಸ್ವಿಕರಿಸಿ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಕ್ಷಯ ಶ್ರೀಧರ ಮಾತನಾಡಿ, “ಸಮಸ್ಯೆಗಳ ಕುರಿತು ಸಂಬಂಧಿಸಿದ ಅಧಿಕಾರಗಳ ಜೊತೆಗೆ ಚರ್ಚಿಸಿ ಸೂಕ್ತ ಕ್ರಮಕೈಗೊಳಲಾಗುವುದು” ಎಂದು ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಹಾವೇರಿ | ಶಿಗ್ಗಾಂವ್ ಬಸ್ ನಿಲ್ದಾಣದ ಸ್ವಚ್ಛತೆಗೆ ಆಗ್ರಹಿಸಿ ಕರವೇ ಗಜಪಡೆ ಪ್ರತಿಭಟನೆ
ಈ ಸಂದರ್ಭದಲ್ಲಿ ಎಸ್ಎಫ್ಐ ಹಾವೇರಿ ಜಿಲ್ಲಾಧ್ಯಕ್ಷ ಬಸವರಾಜ ಎಸ್, ಜಿಲ್ಲಾ ಮುಖಂಡರಾದ ಹೆಚ್. ಹೆಚ್. ನಾದಫ್, ಶಿವರಾಜ ಮಾರನಬೀಡಾ, ಶೋಭ ಸಿ ಡೊಳ್ಳೇಶ್ವರ, ಪ್ರಕಾಶ್ ಲಮಾಣಿ, ದ್ಯಾಮಕ್ಕ ಕೊಪ್ಪದ, ಶಂಕ್ರಮ ಲಮಾಣಿ, ಉಮೇಶ್, ಕುಮಾರ ಮನ್ನಂಗಿ, ರೇಖಾ ಮಾಳಗಿಮನಿ, ರತ್ನ ಎಸ್, ಧನುಷ್ ದೊಡ್ಡಮನಿ ಸೇರಿದಂತೆ ಅನೇಕರು ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡಿದ್ದರು.