ನಮ್ಮ ನಾಡುನುಡಿ ಸಂಸ್ಕೃತಿಯನ್ನು ಬಿಂಬಿಸುವಂತಹ ನಾಡಹಬ್ಬ ದಸರಾ ಕಾರ್ಯಕ್ರಮಗಳು ಪ್ರತಿ ಹಳ್ಳಿಹಳ್ಳಿ, ಗಲ್ಲಿಗಳಲ್ಲಿಯೂ ನಡೆಯಬೇಕು. ಪಾಲಕರು ತಮ್ಮ ಮಕ್ಕಳನ್ನು ಇಂತಹ ಕಾರ್ಯಕ್ರಮಗಳಿಗೆ ಕರೆದುಕೊಂಡು ಬರುವ ಮೂಲಕ ಮಕ್ಕಳಿಗೆ ನಮ್ಮ ಸಂಸ್ಕೃತಿ, ಸಂಸ್ಕಾರದ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಪತ್ರಕರ್ತ ಕರಿಯಪ್ಪ ಅರಳಿಕಟ್ಟಿ ಹೇಳಿದರು.
ಹಾವೇರಿ ಜಿಲ್ಲೆಯ ರಾಣೇಬೆನ್ನೂರ ಪಟ್ಟಣದ ಕರ್ನಾಟಕ ಸಂಘದಲ್ಲಿ 88ನೇ ವರ್ಷದ ನಾಡಹಬ್ಬದ, 5ನೇ ದಿನದ ಸಭಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.
“ವಿದ್ಯಾರ್ಥಿಗಳು ಪ್ರತಿದಿನ ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪತ್ರಿಕೆ ಓದುವುದರಿಂದ ಜ್ಞಾನವೃದ್ಧಿಯ ಜತೆಗೆ ಇತ್ತೀಚೆಗೆ ಹೆಚ್ಚುತ್ತಿರುವ ಸೈಬರ್ ಕ್ರೈಮ್ ಯಾವ ಯಾವ ರೀತಿಯಿಂದ ಮಾಡುತ್ತಾರೆ. ಅವುಗಳಿಂದ ನಾವು ಹೇಗೆ ಜಾಗೃತರಾಗಿರಬೇಕೆಂಬ ಅರಿವು ಮೂಡುತ್ತದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ನಂದಿನಿ ಉತ್ಪನ್ನಕ್ಕೆ ಶೇ.10ರಷ್ಟು ರಿಯಾಯಿತಿ: ಮೈಮುಲ್ ಅಧ್ಯಕ್ಷ ಆರ್ ಚೆಲುವರಾಜು
ರೋಟರಿ ಸಂಸ್ಥೆಯ ಅಧ್ಯಕ್ಷ ರಾಜಣ್ಣ ಮೋಟಗಿ ಅತಿಥಿ ಭಾಷಣ ಮಾಡಿ, “ದಸರಾ, ವಿಜಯದಶಮಿ ನಾಡಹಬ್ಬ. ದೇಶದ ಒಂದೊಂದು ಭಾಗದಲ್ಲಿ ಒಂದೊಂದು ಹೆಸರಿನಲ್ಲಿ ಹತ್ತು ದಿನಗಳ ಕಾಲ ಆಚರಿಸುವ ದೊಡ್ಡಹಬ್ಬವೇ ದಸರಾ, ಮಹಾನವಮಿ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸ್ನೇಹದೀಪ ಅಂಧಮಕ್ಕಳ ಶಾಲೆಯ ಮಕ್ಕಳಿಂದ ನಾಟಕ, ಭಾವಗೀತೆ, ಕರಾವೋಕೆ, ಮಿಮಿಕ್ರೀ, ನೃತ್ಯಗಳ ಸಮ್ಮಿಶ್ರ ಕಾರ್ಯಕ್ರಮ ಅದ್ಭುತವಾಗಿ ಮೂಡಿಬಂದಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀಪಾದ ಕುಲಕರ್ಣಿ, ವಿನಾಯಕ ಕೆಂಚನಗೌಡ್ರ ಇದ್ದರು.