ಸಣ್ಣ ನೀರಾವರಿ ಇಲಾಖೆಯಿಂದ ಕೆರೆ ನಿರ್ಮಾಣ ಕಾಮಗಾರಿ ಕೈಗೊಂಡಿದ್ದ ಜಿಲ್ಲಾಡಳಿತ ಸ್ವಾಧೀನಪಡಿಸಿಕೊಂಡಿದ್ದ ರೈತರ ಜಮೀನಿಗೆ ಪರಿಹಾರ ನೀಡಲು ವಿಳಂಬ ಮಾಡಿದ್ದ ಆರೋಪದಡಿ ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ ಹಾಗೂ ಉಪ ವಿಭಾಗಾಧಿಕಾರಿ ಚನ್ನಬಸಪ್ಪ ಅವರ ಕಾರುಗಳನ್ನು ಬುಧವಾರ ಜಪ್ತಿ ಮಾಡಲಾಗಿದೆ.
ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಕೆರೂಡಿ ಗ್ರಾಮದ ರೈತ ರುದ್ರಪ್ಪ ಬಸಪ್ಪ ಗುತ್ತಲ ಎಂಬುವವರಿಗೆ ಪರಿಹಾರ ನೀಡಲು ವಿಳಂಬವಾಗಿತ್ತು. ಇದಕ್ಕೆ ಬೇಸತ್ತಿದ್ದ ಅವರ ಸಂಬಂಧಿಕರು, ಬ್ಯಾಡಗಿ ತಾಲ್ಲೂಕಿನ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ, ಕಾರುಗಳ ಜಪ್ತಿಗೆ ಆದೇಶ ಹೊರಡಿಸಿತ್ತು.
ಸಣ್ಣ ನೀರಾವರಿ ಇಲಾಖೆಯಿಂದ ಕೆರೆ ನಿರ್ಮಾಣ ಕಾಮಗಾರಿ ಕೈಗೊಂಡಿದ್ದ ಜಿಲ್ಲಾಡಳಿತ, 2 ಎಕರೆ 29 ಗುಂಟೆ ಜಮೀನನ್ನು 1970ರಂದು ಸ್ವಾಧೀನಪಡಿಸಿಕೊಂಡಿತ್ತು. ಪ್ರತಿ ಎಕರೆಗೆ ₹ 1.30 ಲಕ್ಷ ನಿಗದಿ ಮಾಡಲಾಗಿತ್ತು. ಆದರೆ, ಇದುವರೆಗೂ ಪರಿಹಾರ ನೀಡಿರಲಿಲ್ಲ. ಬೇಸತ್ತ ರೈತನ ಸಂಬಂಧಿಕರು, ನ್ಯಾಯಾಲಯದ ಮೊರೆ ಹೋಗಿದ್ದರು.
ನ್ಯಾಯಾಲಯದ ಆದೇಶ ಹಾಗೂ ವಕೀಲರ ಸಮೇತ ಕಚೇರಿಗೆ ಬಂದಿದ್ದ ರೈತರ ಸಂಬಂಧಿಕರು, ಎರಡೂ ಕಾರುಗಳನ್ನು ಜಪ್ತಿ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಸೋಯಾ ಬೆಳೆದ ರೈತರಿಗೆ ಕನಿಷ್ಠ ಬೆಂಬಲ ಬೆಲೆ ಲಾಭ ಸಿಗುತ್ತಿಲ್ಲ: ಸಂಸದ ಸಾಗರ್ ಖಂಡ್ರೆ
ಜಪ್ತಿ ಬಗ್ಗೆ ಪ್ರತಿಕ್ರಿಯಿಸಿದ ಉಪ ವಿಭಾಗಾಧಿಕಾರಿ ಚನ್ನಪ್ಪ, ‘ಸಣ್ಣ ನೀರಾವರಿ ಇಲಾಖೆಯವರಿಂದ ಕಾಮಗಾರಿ ನಡೆದಿತ್ತು. ಜಮೀನು ಸ್ವಾಧೀನಪಡಿಸಿಕೊಡುವುದು ಮಾತ್ರ ನಮ್ಮ ಕೆಲಸವಾಗಿತ್ತು. ರೈತರಿಗೆ ಪರಿಹಾರ ನೀಡುವಂತೆಯೂ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ಪತ್ರ ಬರೆಯಲಾಗಿದೆ’ ಎಂದು ಹೇಳಿದ್ದಾರೆ.
