ಹಾವೇರಿ ಜಿಲ್ಲೆಯ ಎಸ್‌ಪಿಬಿ ಶ್ರೀಕಂಠಪ್ಪ ಬಡಾವಣೆಯಲ್ಲಿ ಅಪೂರ್ಣಗೊಂಡ ಚರಂಡಿ, ರಸ್ತೆ ಕಾಮಗಾರಿಯಿಂದಾಗಿ ಇಲ್ಲಿನ ನಿವಾಸಿಗಳು ತೊಂದರೆ ಎದುರಿಸುತ್ತಿದ್ದಾರೆ. ಕಾಲವಿಳಂಬ ಮಾಡದೇ ಕಾಮಗಾರಿಯನ್ನು ಪೂರ್ಣಗೊಳಿಸಿ ಅನುಕೂಲ ಕಲ್ಪಿಸಬೇಕು ಹಾಗೂ ಹೊಳೆ ನೀರಿನ ಸೌಲಭ್ಯ ಒದಗಿಸಬೇಕು ಎಂದು ಬಡಾವಣೆಯ ನಿವಾಸಿಗಳು ಒತ್ತಾಯಿಸಿದರು.
ಹಾವೇರಿ ಪಟ್ಟಣದ ನಗರಭೆ ಕಚೇರಿಯಲ್ಲಿ ಶ್ರೀಕಂಠಪ್ಪ ಬಡಾವಣೆಯ ನಿವಾಸಿಗಳು ಹಾಗೂ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಸಂಘಟನೆ ವತಿಯಿಂದ ಎಸ್‌ಪಿಬಿ ಶ್ರೀಕಂಠಪ್ಪ ಬಡಾವಣೆಯಲ್ಲಿ ರಸ್ತೆ ಚರಂಡಿ ಸರಿಪಡಿಸುವಂತೆ ನಗರಸಭೆ ಆಯುಕ್ತ ಗಂಗಾಧರ ಬೆಲ್ಲದ ಅವರಿಗೆ ಮನವಿ ಸಲ್ಲಿಸಲಾಯಿತು.
“ನಗರಸಭೆಯ 31ನೇ ವಾರ್ಡ್ ವ್ಯಾಪ್ತಿಯಲ್ಲಿರುವ ಶ್ರೀಕಂಠಪ್ಪ ಬಡಾವಣೆಯಲ್ಲಿ ಎರಡು ಕಾಲೇಜು ಹಾಸ್ಟೆಲ್ ಹಾಗೂ ಒಂದು ಶಾಲೆ ಇದೆ. ಇಲ್ಲಿ ವಾಸ ಮಾಡುತ್ತಿರುವ ನಿವಾಸಿಗಳು ಚರಂಡಿ ಹಾಗೂ ರಸ್ತೆ ಸಮಸ್ಯೆಗಳನ್ನು ಅನುಭವಿಸುತ್ತಿದ್ದು, ಈ ಸಮಸ್ಯೆ ಪರಿಹರಿಸುವಂತೆ ಕಳೆದ ಹತ್ತಾರು ವರ್ಷಗಳಿಂದ ಮನವಿ ಮಾಡುತ್ತಲೇ ಬಂದಿದ್ದಾರೆ. ಅದಕ್ಕಾಗಿ ಶಾಸಕರು, ನಗರಸಭೆ, ಲೋಕಾಯುಕ್ತರು, ಮಾನವ ಹಕ್ಕುಗಳ ಆಯೋಗದ ಗಮನಕ್ಕೂ ತರಲಾಗಿದೆ. ಆದರೂ ಯಾವುದೇ ಕ್ರಮ ಆಗಿಲ್ಲ” ಎಂದರು.
ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, “ನಗರೋತ್ಥಾನ ಯೋಜನೆಯಡಿ ಕೆಲ ತಿಂಗಳುಗಳ ಹಿಂದೆ ಚರಂಡಿ ದುರಸ್ತಿ ಹಾಗೂ ಸಿ.ಸಿ ರಸ್ತೆ ನಿರ್ಮಾಣ ಕಾಮಗಾರಿ ಆರಂಭವಾಗಿತ್ತು. ಇದೀಗ ಇದ್ದಕ್ಕಿದ್ದಂತೆ ಕಾಮಗಾರಿ ಅರ್ಧಕ್ಕೆ ನಿಂತಿದೆ. ಚರಂಡಿ ತ್ಯಾಜ್ಯದ ನೀರು ಮುಂದಕ್ಕೆ ಹೋಗದೇ ಇರುವುದರಿಂದಾಗಿ ವಿಪರೀತ ಹೊಲಸು ವಾಸನೆಯಿಂದಾಗಿ ಜನರು ಬದುಕುವುದು ಅಸಹನೀಯವಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಚರಂಡಿಯಲ್ಲಿ ಹರಿದು ಹೋಗದೇ ನಿಂತಿರುವ ಕೊಳಚೆ ನೀರಿನಿಂದಾಗಿ ಒಂದೆಡೆ ಸಹಿಸಲು ಆಗದಷ್ಟು ಹೊಲಸು ವಾಸನೆ ಬೀರುತ್ತಿದೆ. ಇನ್ನೊಂದೆಡೆ ಸೊಳ್ಳೆಗಳು ವಿಪರೀತವಾಗಿ ಹೆಚ್ಚಾಗಿ ಡೆಂಗ್ಯೂ, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳಿಗೆ ನಿವಾಸಿಗಳು ಬಲಿಯಾಗುವ ಗಂಭೀರ ಅಪಾಯ ಬಂದೊದಗಿದೆ. ಇನ್ನು ರಸ್ತೆಯ ಸಮಸ್ಯೆಯಂತೂ ಈ ಮಳೆಗಾಲದಲ್ಲಿ ಕೆಸರು ಗದ್ದೆಯಂತಾಗಿರುವ ಪರಿಣಾಮ ಶಾಲೆಗೆ ಹೋಗುವ ಮಕ್ಕಳು, ಜನರು ಹಾಗೂ ಬೈಕ್ ಸವಾರರು ಕೈಯಲ್ಲಿ ಜೀವ ಹಿಡಿದುಕೊಂಡು ಓಡಾಡುವಂತಾಗಿದೆ. ಈ ಅರ್ದಂಬರ್ಧ ಕಾಮಗಾರಿಗೆ ಜನತೆ ಹಿಡಿಶಾಪ ಹಾಕುವಂತಾಗಿದೆ” ಎಂದರು.
ಇದನ್ನೂ ಓದಿ: ಹಾವೇರಿ | ಸರ್ಕಾರಿ ಶಾಲೆಗೆ 1 ಲಕ್ಷ 12 ಸಾವಿರ ಸಾಮಗ್ರಿಗಳು ವಿತರಣೆ
“ಈ ಅಪೂರ್ಣಗೊಂಡ ಕಾಮಗಾರಿಯಿಂದುಂಟಾದ ಸಮಸ್ಯೆಯ ಕುರಿತು ಈಗಾಗಲೇ ನಗರಸಭೆಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಚರಂಡಿ ನೀರು ರಾಜಕಾಲುವೆಗೆ ಸೇರುವಂತಾಗಲು ರಾಜ್ಯ ಹೆದ್ದಾರಿ ಪಕ್ಕದ ದೊಡ್ಡ ಚರಂಡಿಯನ್ನು ದುರಸ್ತಿ ಮಾಡಿಸುವುದು ಹಾಗೂ ಅಪೂರ್ಣವಾಗಿರುವ ಕೆಲಸಗಳನ್ನು ಒಂದು ವಾರದೊಳಗೆ ಪೂರ್ಣಗೊಳಿಸಬೇಕು. ಇಲ್ಲವಾದಲ್ಲಿ ಅನಿವಾರ್ಯವಾಗಿ ನಿವಾಸಿಗಳು ತೀವ್ರ ತೆರನಾದ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ” ಎಂದು ಆಯುಕ್ತರ ಗಮನಕ್ಕೆ ತಂದರು.
ಆಯುಕ್ತ ಗಂಗಾಧರ ಬೆಲ್ಲದ ಮನವಿ ಸ್ವೀಕರಿಸಿ, “ಕೂಡಲೇ ಚರಂಡಿ ನೀರು ಸರಾಗವಾಗಿ ಹರಿದುಹೋಗುವಂತೆ ಜೆಸಿಬಿಯಿಂದ ಕೆಲಸ ಮಾಡಿಸಲಾಗುವುದು ಎಂದು ಭರವಸೆ ನೀಡಿದರು. ಅಪೂರ್ಣಗೊಂಡ ಕಾಮಗಾರಿಯನ್ನು ಪೂರ್ಣಗೊಳಿಸಲು ಹಾಗೂ ಹೊಳೆ ನೀರಿನ ಸೌಲಭ್ಯವನ್ನು ಒದಗಿಸಲು ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಸವರಾಜ ಪೂಜಾರ, ಶಂಕ್ರಣ್ಣ ಮಾಳಮ್ಮನವರ, ಲಕ್ಷ್ಮೀಪ್ರಭ ಎಸ್. ಹುಲ್ಲೂರು, ಅನಿತಾ ಬಿ. ಸೂರಣಗಿ, ಸುರೇಶ ದು. ವಡ್ಡರ, ವಿವೇಕ ಎಸ್ ಹುಲ್ಲೂರು ಇದ್ದರು.