“ಬೆಳಗಾವಿ ಜಿಲ್ಲೆ ರಾಯಭಾಗ ತಾಲ್ಲೂಕಿನ ನಿಡಗುಂದಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಅತ್ಯಗತ್ಯವಾಗಿರುವ ಕೊಠಡಿಗಳನ್ನು ಕಟ್ಟಿಸಿಕೊಡಿ ಎಂದು ಪ್ರಜಾಸತ್ತಾತ್ಮಕ ನೆಲೆಯಲ್ಲಿ ಧ್ವನಿ ಎತ್ತಿದ ಮುಖ್ಯ ಶಿಕ್ಷಕ ವೀರಣ್ಣ ಮಡಿವಾಳರ ಅವರನ್ನು ಅಮಾನತು ಮಾಡಿರುವುದು ತೀವ್ರ ಖಂಡನೀಯವಾದುದು. ಕೂಡಲೇ ಅವರ ಅಮಾನತು ಆದೇಶವನ್ನು ಹಿಂಪಡೆಯಬೇಕು” ಎಂದು ಪ್ರಗತಿಪರ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟವು ರಾಜ್ಯ ಸರಕಾರವನ್ನು ಆಗ್ರಹಿಸಿದೆ.
ಹಾವೇರಿ ಪಟ್ಟಣದಲ್ಲಿ ಪ್ರಗತಿಪರ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟವು ಶಿಕ್ಷಕ ವೀರಣ್ಣ ಮಡಿವಾಳರ ಅಮಾನತು ಖಂಡಿಸಿ ತಹಶೀಲ್ದಾರರವರ ಮೂಲಕ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ನಂತರ ಬಸವರಾಜ್ ಪೂಜಾರ್ ಮಾತನಾಡಿ, “ಶಿಕ್ಷಕ ವೀರಣ್ಣ ಮಡಿವಾಳರ ತಮ್ಮ ಶಾಲೆಯ ಬಗ್ಗೆ ಅನನ್ಯ ಪ್ರೀತಿ ಇಟ್ಟುಕೊಂಡು ಕಳೆದ 10 ವರ್ಷಗಳಿಂದ ಶಾಲೆಯ ಅಭಿವೃದ್ಧಿಗಾಗಿ ಹಗಲಿರುಳು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ದಾನಿಗಳನ್ನು ಹುಡುಕಿ ಅವರ ನೆರವಿನಿಂದ ಸರಕಾರಿ ಶಾಲೆಯನ್ನು ಹೈಟೆಕ್ ಆಗಿ ಪರಿವರ್ತಿಸಿದ್ದರಿಂದ ಶಾಲೆಯ ಮಕ್ಕಳ ದಾಖಲಾತಿಯು ದಾಖಲೆ ಪ್ರಮಾಣದಲ್ಲಿ ಹೆಚ್ಚಾಗಿದೆ. ಇದರ ಹಿಂದಿನ ಪರಿಶ್ರಮ ಮುಖ್ಯ ಶಿಕ್ಷಕ ವೀರಣ್ಣ ಮಡಿವಾಳರದು ಎಂಬುದು ಹೆಮ್ಮೆಯ ಸಂಗತಿಯಾಗಿದೆ” ಎಂದು ಹೇಳಿದರು.
“ಶಿಕ್ಷಕ ವೀರಣ್ಣ ಮಡಿವಾಳರ ಅವರು ಪರಿಶ್ರಮವಹಿಸಿ ಶಾಲೆಯನ್ನು ಅಭಿವೃದ್ಧಿಪಡಿಸಿ ಶಾಲೆಗೆ ಹಲವು ಪ್ರಶಸ್ತಿ ಬರಲು ಕಾರಣರಾಗಿದ್ದಾರೆ. ಕೆಲವು ವರ್ಷಗಳ ಹಿಂದೆ 70 ವಿದ್ಯಾರ್ಥಿಗಳಿದ್ದಾಗ ಎರಡು ಕೊಠಡಿಯಲ್ಲಿ ತರಗತಿ ನಡೆಸಲಾಗುತ್ತಿತ್ತು. ಈಗ ವಿದ್ಯಾರ್ಥಿಗಳ ಸಂಖ್ಯೆ ಅದರ ಎರಡು ಪಟ್ಟು ಅಧಿಕವಾಗಿದೆ. ಅದಕ್ಕಾಗಿ ಅತ್ಯಗತ್ಯವಾಗಿರುವ ನಾಲ್ಕು ಕೊಠಡಿಗಳನ್ನು ಕಟ್ಟಿಸಿಕೊಡುವಂತೆ ಮುಖ್ಯ ಶಿಕ್ಷಕರಾಗಿರುವ ವೀರಣ್ಣ ಅವರು ಹಲವು ವರ್ಷಗಳಿಂದ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಕೊಠಡಿ ನಿರ್ಮಿಸದಿರುವುದು ದುರಂತ. ಸರಕಾರವು ಇಷ್ಟರೊಳಗೆ ಈ ಸರಕಾರಿ ಶಾಲೆಯ ಅಭಿವೃದ್ಧಿಗಾಗಿ ನಾಲ್ಕು ಕೊಠಡಿಗಳನ್ನು ನಿರ್ಮಿಸಬೇಕಿತ್ತು. ಅದರ ಬದಲಾಗಿ ಕೊಠಡಿ ಮಂಜೂರು ಮಾಡಿ ಎಂದು ಪ್ರಜಾಸತ್ತಾತ್ಮಕ ನೆಲೆಯಲ್ಲಿ ಧ್ವನಿ ಎತ್ತಿದ್ದನ್ನೇ ನಿಯಮ ಉಲ್ಲಂಘನೆ ಎಂದು ಪರಿಗಣಿಸಿ ವೀರಣ್ಣ ಮಡಿವಾಳರ ಅವರನ್ನು ಶಿಕ್ಷಣಾಧಿಕಾರಿ ಅಮಾನತು ಮಾಡಿದ್ದಾರೆ. ಇದು ಶಿಕ್ಷಣಾಧಿಕಾರಿಯ ಸರ್ವಾಧಿಕಾರಿ ಧೋರಣೆಯಾಗಿದ್ದು ಸರಕಾರ ಇಂತಹ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು.” ಎಂದು ಆಗ್ರಹಿಸಿದರುಪ್ರಗತಿಪರ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟವು.
ಅಖಿಲ ಭಾರತ ವಕೀಲರ ಒಕ್ಕೂಟದ ಮುಖಂಡರಾದ ನಾರಾಯಣ ಕಾಳೆ ಮಾತನಾಡಿ, “ಜೀವಪರ ಕಳಕಳಿಯ ಶಿಕ್ಷಕ ವೀರಣ್ಣ ಅವರನ್ನು ಅಪರಾಧಿ ರೀತಿ ನೋಡಿ, ಅಮಾನತು ಮಾಡಿರುವುದನ್ನು ಸಹಿಸಲಾಗದು. ಕೂಡಲೇ ವೀರಣ್ಣ ಮಡಿವಾಳರ ಮೇಲಿನ ಅಮಾನತು ಆದೇಶವನ್ನು ಕೂಡಲೇ ವಾಪಸ್ ಪಡೆಯಬೇಕು. ಹಾಗೂ ಅಮಾನತು ಮಾಡಿರುವ ಶಿಕ್ಷಣಾಧಿಕಾರಿಯ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಜೊತೆಗೆ ಕಾಲ ವಿಳಂಬ ಮಾಡದೇ ಶಾಲೆಗೆ ಅಗತ್ಯವಿರುವ ನಾಲ್ಕು ಕೊಠಡಿಗಳನ್ನು ನಿರ್ಮಿಸಲು ಮತ್ತು ಶಾಲೆಗೆ ಅಗತ್ಯವಿರುವ ಇತರ ಶೈಕ್ಷಣಿಕ ಪರಿಕರಗಳನ್ನು ಪೂರೈಸಲು ಕ್ರಮವಹಿಸಲು ಮುಂದಾಗಬೇಕು ಇಲ್ಲವಾದಲ್ಲಿ ತೀವ್ರವಾದ ಪ್ರತಿಭಟನೆ ನಡೆಸಬೇಕಾಗುತ್ತದೆ” ಎಂದು ಆಗ್ರಹಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಗದಗ | ಪ್ರೊ. ಬಿ. ಕೃಷ್ಣಪ್ಪ ಸಭಾಭವನ ನಿರ್ಮಿಸಲು ಸಚಿವರು ಹೆಚ್. ಕೆ. ಪಾಟೀಲರಿಗೆ ಒತ್ತಾಯ
ಈ ಸಂದರ್ಭದಲ್ಲಿ ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ, ಹಿರಿಯ ಸಾಹಿತಿಗಳಾದ ಸತೀಶ ಕುಲಕರ್ಣಿ, ನಿವೃತ್ತ ಡಿಡಿಪಿಯು ಅಧಿಕಾರಿಗಳಾದ ಎಂ. ಆಂಜನೇಯ, ಡಿಎಸ್ಎಸ್ ಜಿಲ್ಲಾಧ್ಯಕ್ಷರಾದ ಉಡಚಪ್ಪ ಮಾಳಗಿ, ರೈತ ಸಂಘಟನೆಯ ಜಿಲ್ಲಾಧ್ಯಕ್ಷರಾದ ರಾಮಣ್ಣ ಕೆಂಚಳ್ಳೇರ, ಸುರೇಶ ಛಲವಾದಿ, ಖಲಂದರ್ ಅಲ್ಲಿಗೌಡ್ರ, ರಮೇಶ ತಳವಾರ, ಶರಣು ಸಂಗನಾಳ, ಜಗದೀಶ ಹರಿಜನ ಉಪಸ್ಥಿತರಿದ್ದರು.
