ರಸ್ತೆಗಳ ಮಧ್ಯೆ ಡಾಂಬರ್ ಕಿತ್ತು ಹೋಗಿದ್ದು, ದೊಡ್ಡ ದೊಡ್ಡ ತಗ್ಗುಗಳು ಉಂಟಾಗಿವೆ. ಇದರಿಂದ ರಸ್ತೆ ಪೂರ್ತಿ ಹದಗೆಟ್ಟು ಕೆಸರುಮಯವಾಗಿದೆ. ರಸ್ತೆ ದುರಸ್ಥಿಯಾಗದೆ ಸುಮಾರು ವರ್ಷಗಳಾದರೂ ಇತ್ತ ತಿರುಗಿ ನೋಡುವವರಿಲ್ಲದಂತಾಗಿದೆ. ಈ ಗ್ರಾಮೀಣ ಜನರ ಗೋಳು ಕೇಳುವವರಿಲ್ಲದಂತಾಗಿದೆ. ವಾಹನ ಸವಾರರು ನಿತ್ಯವೂ ಜೀವ ಭಯದಲ್ಲಿಯೇ ಸಂಚಾರ ಮಾಡುತ್ತಿದ್ದಾರೆ. ಆದರೂ ಕ್ಯಾರೆ ಎನ್ನದ ಅಧಿಕಾರಿಗಳು ಹಾಗೂ ಜನಪ್ರತಿನಿದಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಹಾವೇರಿ ಪಟ್ಟಣದಿಂದ ಕರ್ಜಗಿ, ಅಗಸಮಟ್ಟಿ, ರಾಮಾಪುರ ತಲುಪುವ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಗ್ರಾಮೀಣ ಪ್ರದೇಶದ ಜನರು ಪ್ರತಿನಿತ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಸುಮಾರು ವರ್ಷಗಳು ಕಳೆದರೂ ಕೂಡ ದುರಸ್ಥಿಯಾಗದಿರುವುದು ದುರಂತವೇ ಸರಿ.
ಹಾವೇರಿಯಿಂದ ಕರ್ಜಗಿಗೆ ಹೋಗುವ ರಸ್ತೆಯುದ್ಧಕ್ಕೂ ತಗ್ಗು ಗುಂಡಿಗಳು ಕಂಡುಬರುತ್ತವೆ. ಈ ರಸ್ತೆಯ ದುಃಸ್ಥಿತಿಯಲ್ಲಿ ಸಂಚರಿಸುವ ಸವಾರರು ಹಿಡಿಶಾಪ ಹಾಕುತ್ತಿದ್ದಾರೆ. ಕನಿಷ್ಠ ಪಕ್ಷ ತಗ್ಗು ಗುಂಡಿಗಳಿಗೆ ಕಡಿ ಮಣ್ಣು ಹಾಕಿದರೆ ತಕ್ಕಮಟ್ಟಿಗಾದರೂ ಸುಮಗವಾಗಿ ಸಂಚಾರ ಮಾಡಬಹುದು. ಆದರೆ ತಗ್ಗು ಗುಂಡಿಗಳಿಗೆ ಕಲ್ಲು ಮಣ್ಣು ಹಾಕದೆ ವಾಹನ ಸವಾರರು ಸರ್ಕಸ್ ಮಾಡುತ್ತ ಸಂಚರಿಸುವಂತಾಗಿದೆ. ಇಂತಹ ಸಂದರ್ಭದಲ್ಲಿ ದ್ವಿಚಕ್ರ ಸವಾರರು ಬಿದ್ದು ಆಸ್ಪತ್ರೆ ಕಡೆ ಮುಖ ಮಾಡುತ್ತಿದ್ದಾರೆ.

ಕರ್ಜಗಿ ರಸ್ತೆಯಲ್ಲಿ ಪ್ರಯಾಣಿಸುವ ದ್ವಿಚಕ್ರ ವಾಹನ ಸವಾರ ಪ್ರಕಾಶ ಎನ್ ಈ ದಿನ.ಕಾಮ್ ಜೊತೆಗೆ ಮಾತನಾಡಿ, “ಕರ್ಜಗಿ ರಸ್ತೆಯಲ್ಲಿ ಬಹಳ ವರ್ಷಗಳಿಂದ ಓಡಾಡುತ್ತ ಬಂದಿದ್ದೇವೆ. ರಸ್ತೆಯ ಡಾಂಬರ್ ಕಿತ್ತುಹೋಗಿದೆ. ಅಲ್ಲಲ್ಲಿ ತಗ್ಗು ಗುಂಡಿಗಳು ತುಂಬಿಕೊಂಡಿವೆ. ಎಷ್ಟೋ ಜನರು ಇದೇ ರಸ್ತೆಯಲ್ಲಿ ಬಿದ್ದು ಎದ್ದು ಹೋಗಿದ್ದಾರೆ. ಅಪಘಾತಗಳು ಆಗುತ್ತಿವೆ. ಹಲವರು ಆಸ್ಪತ್ರೆ ಸೇರಿದ್ದಾರೆ. ಆದರೂ ಕೂಡ ಈ ಕುರಿತು ಯಾವುದೇ ಅಧಿಕಾರಿಗಳಾಗಲಿ, ಶಾಸಕರಾಗಲಿ ಈವರೆಗೆ ರಸ್ತೆ ದುರಸ್ತಿ ಕ್ರಮ ಕೈಗೊಂಡಿಲ್ಲ” ಎಂದು ಹೇಳಿದರು.

“ಕರ್ಜಗಿ ಗ್ರಾಮದಿಂದ ರಾಮಾಪುರ, ಅಗಸನಮಟ್ಟಿ ಗ್ರಾಮಕ್ಕೆ ಹೋಗುವ ರಸ್ತೆಯು ಡಾಂಬರ್ ಕಾಣದೆ ಬಹಳ ವರ್ಷಗಳೇ ಕಳೆದಿವೆ. ರಸ್ತೆಯಲ್ಲಿ ದೊಡ್ಡ ದೊಡ್ಡ ತಗ್ಗು, ಗುಂಡಿಗಳಿದ್ದು, ಈಗ ಮಳೆ ಬಂದಿರುವ ಕಾರಣ ರಸ್ತೆ ಗುಂಡಿಗಳ ತುಂಬಾ ನೀರು ಸಂಗ್ರಹವಾಗಿದೆ. ಇದರಿಂದ ರಸ್ತೆ ಕೆರೆಯಾಗಿ ಮಾರ್ಪಟ್ಟಿದೆ. ಈ ರಸ್ತೆಯ ಮೂಲಕ ಸಂಚರಿಸುವ ದ್ವಿಚಕ್ರ ಸವಾರರಂತು ಜೀವ ಕೈಯಲ್ಲಿ ಹಿಡಿದುಕೊಂಡೇ ಸಾಗುವಂತಾಗಿದೆ. ಬಸ್ಸು, ಹಾಗೂ ಬೃಹತ್ ವಾಹನಗಳಲ್ಲಿ ಪ್ರಯಾಣಿಸುವವರು ಸರ್ಕಸ್ ಮಾಡುತ್ತ ಸಾಗುವಂತಾಗಿದ್ದು, ಇಲ್ಲಿಯ ಜನರ ಗೋಳನ್ನು ಕೇಳುವವರಿಲ್ಲದಂತಾಗಿದೆ” ಎಂದರು.

“ಗರ್ಭಿಣಿಯರು ತುರ್ತು ಪರಿಸ್ಥಿತಿಯಲ್ಲಿ ಹಾವೇರಿ ಪಟ್ಟಣಕ್ಕೆ ಹೋಗಲು ತಗ್ಗು ಗುಂಡಿಗಳ ರಸ್ತೆಯಲ್ಲಿ ಸಂಚರಿಸುವುದೇ ಸವಾಲಿನದ್ದಾಗಿದೆ. ಈ ರಸ್ತೆಯಲ್ಲಿ ನಿತ್ಯ ಜನರು, ವಿದ್ಯಾರ್ಥಿಗಳು ಸಂಚರಿಸದಂತಾಗಿದ್ದು, ರೈತರು ತಮ್ಮ ಹೊಲಗಳಿಗೆ ತಿರುಗಾಡಲು ಹೈರಾಣಾಗುತ್ತಿದ್ದಾರೆ. ಹಾವೇರಿ ಪಟ್ಟಣಕ್ಕೆ ಹೋಗುವಾಗ ಈ ದಾರಿಯಲ್ಲಿ ಹೇಗೆ ಹೋಗಬೇಕು ಎಂಬ ಚಿಂತೆ ಜನರ ಮನಸಲ್ಲಿ ಕಾಡುತ್ತದೆ. ಈ ರಸ್ತೆಯ ಸಮಸ್ಯೆಯನ್ನು ಯಾವಾಗ ಬಗೆಹರಿಯುತ್ತದೆಯೋ ತಿಳಿಯದಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.

ಗ್ರಾಮೀಣ ಪ್ರದೇಶದ ಮೂಲಸೌಕರ್ಯ, ಕಾಮಗಾರಿಗಳಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಆದರೆ ‘ದೇವರು ವರ ಕೊಟ್ಟರೂ ಪೂಜಾರಿ ವರ ಕೊಡಲ್ಲ’ ಅಂದಗೆ ಇಲ್ಲಿಯ ಅಧಿಕಾರಿಗಳು ಮತ್ತು ಜನಪ್ರತಿನಿದಿಗಳ ನಿರ್ಲಕ್ಷ್ಯ ದೋರಣೆಯಿಂದ ಗ್ರಾಮೀಣ ರಸ್ತೆಗಳು ತಗ್ಗು, ಗುಂಡಿಗಳು ದೊಡ್ಡ ದೊಡ್ಡ ಹೊಂಡಗಳಾಗಿ ಮಾರ್ಪಟ್ಟಿವೆ. ಗ್ರಾಮೀಣ ಜನರ ಗೋಳು ಕೇಳುವವರಿಲ್ಲದಂತಾಗಿದೆ.
ಈ ಸುದ್ದಿ ಓದಿದ್ದೀರಾ? ಗದಗ | ರಾಜ್ಯ ಸರಕಾರ ಎಲ್ಲ ಇಲಾಖೆಯಲ್ಲೂ ಭ್ರಷ್ಟಾಚಾರ ತಾಂಡವ: ಜೆಡಿಎಸ್ ಆರೋಪ
ರಾಮಾಪುರ ಗ್ರಾಮದ ವಿದ್ಯಾರ್ಥಿ ಬಾಬುಷಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ನಮ್ಮೂರಿನ ರಸ್ತೆ ಸುಮಾರು ವರ್ಷಗಳಿಂದ ಹೀಗೆಯೇ ಇದ್ದು, ತಗ್ಗು ಗುಂಡಿಗಳಿಂದ ಕೂಡಿದೆ. ಇದೇ ನೀರು ನಿಂತ ತಗ್ಗು ಗುಂಡಿಗಳಲ್ಲಿ ನಿತ್ಯ ಕಾಲೇಜಿಗೆ ಹೋಗುತ್ತೇವೆ. ಈ ರಸ್ತೆ ಮೂಲಕ ಹೋಗುವ ಬಸ್ಸುಗಳು ಒಲಾಡಿ ಒಲಾಡಿ ಹೋಗುತ್ತ ಹೋಗುತ್ತಲೇ ಸಮಯ ಮೀರಿರುತ್ತದೆ. ಇದರಿಂದ ಸಾಕಷ್ಟು ಜನರಿಗೆ, ಮಹಿಳೆಯರಿಗೆ ಸಮಸ್ಯೆ ಆಗುತ್ತದೆ. ಇಲ್ಲಿಯ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಕಡೆ ಬಂದರೆ ಸಮಸ್ಯೆ ಗೊತ್ತಾಗುತ್ತದೆ. ಆದರೆ ಅವರು ಈ ಕಡೆಗೆ ಬರುವುದೇ ಇಲ್ಲ” ಎಂದು ಹೇಳಿದರು.

ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.