ಮದುವೆಯಾಗಲು ಕನ್ಯೆ ಸಿಗದ ಪರಿಣಾಮ ಮನನೊಂದ ರೈತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮಾಸಣಗಿ ಗ್ರಾಮದಲ್ಲಿ ನಡೆದಿದೆ.
ರೈತರಾಗಿರುವ ಕಾರಣ ನಮಗೆ ಯಾರೂ ಹೆಣ್ಣು ಕೊಡುತ್ತಿಲ್ಲ ಎಂದು ಅವಿವಾಹಿತ ರೈತ ಯುವಕರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದು, ರಾಜ್ಯದಲ್ಲಿ ರೈತರಿಗೆ ಹೆಣ್ಣು ಸಿಗದಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಹಿನ್ನೆಲೆಯಲ್ಲಿ ಕನ್ಯೆ ಸಿಗದಿದ್ದಕ್ಕೆ ಮನನೊಂದ ರೈತ ಮಂಜುನಾಥ ನಾಗನೂರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಾಸಣಗಿ ಗ್ರಾಮದಲ್ಲಿ ನಡೆದಿದೆ.
ಮೃತಪಟ್ಟ ರೈತನಿಗೆ ಕಳೆದ ಏಳೆಂಟು ವರ್ಷಗಳಿಂದ ಕನ್ಯೆ ಹುಡುಕುತ್ತಿದ್ದರೂ, ಕಂಕಣ ಭಾಗ್ಯ ಕೂಡಿಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಮನನೊಂದ ಯುವಕ ʼನನ್ನಿಂದ ತಂದೆ ತಾಯಿಗೆ ತೊಂದರೆಯಾಗಿದೆʼ ಎಂದು ಜೀವನದಲ್ಲಿ ಜಿಗುಪ್ಸೆಗೊಂಡು ಜೂನ್ 15 ರಂದು ಜಮೀನಿನಲ್ಲಿ ವಿಷ ಸೇವಿಸಿದ್ದ ಎಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ವೈದ್ಯರ ನಿರ್ಲಕ್ಷ್ಯ ಆರೋಪ; ಹೊಟ್ಟೆ ನೋವೆಂದು ಆಸ್ಪತ್ರೆಗೆ ಹೋದ ಯುವತಿ ಸಾವು
ಸುದ್ದಿ ತಿಳಿದ ಕೂಡಲೇ ಪೋಷಕರು ಹಾಗೂ ಗ್ರಾಮಸ್ಥರು ಬ್ಯಾಡಗಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್‌ಗೆ ದಾಖಲಿಸಿದ್ದರು. ಚಿಕಿತ್ಸೆ ಫಲಿಸದೆ ಯುವಕ ಮೃತಪಟ್ಟಿದ್ದು, ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.