ಬೆಳೆ ವೈಫಲ್ಯ ಮತ್ತು ಸಾಲಬಾಧೆ ತಾಳದೆ ಮನನೊಂದು ರೈತರೊಬ್ಬರು ತಮ್ಮ ಹೊಲದಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾವೇರಿ ತಾಲೂಕಿನ ತಿಮ್ಮೇನಹಳ್ಳಿ ಗ್ರಾಮದಲ್ಲಿ ಜರುಗಿದೆ.
ಹಾವೇರಿ ತಾಲೂಕಿನ ತಿಮ್ಮೇನಹಳ್ಳಿ ಗ್ರಾಮದ ರೈತ ಸೋಮನಗೌಡ ನಿಂಗನಗೌಡ ಮುದಿಗೌಡ್ರ(42) ಮೃತ ರೈತ. ಇವರಿಗೆ ಸುಮಾರು 11.5 ಎಕರೆ ಕೃಷಿ ಜಮೀನು ಇದ್ದು, ಕೃಷಿ ಚಟುವಟಿಕೆಗಾಗಿ ಗ್ರಾಮೀಣ ಬ್ಯಾಂಕ್‌ನಲ್ಲಿ ₹6 ಲಕ್ಷ ಹಾಗೂ ಖಾಸಗಿ ಮೂಲಗಳಿಂದ ಪಡೆದ ಸಾಲ ಸೇರಿ ₹8 ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.
ಈ ಬಾರಿ ಮಳೆಯ ಕೊರತೆಯಿಂದ ಬೆಳೆ ಕೈಕೊಟ್ಟ ಪರಿಣಾಮ ಸಾಲ ತೀರಿಸಲು ಸಾಧ್ಯವಾಗದೆ ಮಾನಸಿಕವಾಗಿ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆಂದು ತಿಳಿದುಬಂದಿದೆ. ಈ ಕುರಿತು ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೊಡಿಹಳ್ಳಿ ಚಂದ್ರಶೇಖರ ಅವರು ಮೃತ ರೈತನ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಸರ್ಕಾರ ರೈತನ ಸಾವನ್ನು ಗಂಭೀರವಾಗಿ ಪರಿಗಣಿಸಿ, ಕುಟುಂಬಕ್ಕೆ ₹50 ಲಕ್ಷ ಪರಿಹಾರ, ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ಹಾಗೂ ಎಲ್ಲ ಸಾಲಗಳನ್ನು ಮನ್ನಾ ಮಾಡುವಂತೆ ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರಕ್ಕೆ ಖಂಡನೆ; ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹ
ಈ ವೇಳೆ ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಸಂಘಟನಾ ಕಾರ್ಯದರ್ಶಿ ಟಿ ಡಿ ಬಸವರಾಜ, ಜಿಲ್ಲಾ ಅಧ್ಯಕ್ಷ ಅನಿಲ್ ಡೊಳ್ಳಿನ ಸೇರಿದಂತೆ ಹಲವರು ಇದ್ದರು.






