ರಾಜ್ಯ ಮಾತ್ರವಲ್ಲ ದೇಶದಲ್ಲಿಯೇ ಟೊಮೆಟೊ ಬೆಲೆ ಗಗನಕ್ಕೇರಿದೆ. ರಾಜ್ಯದ ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ ಟೊಮೆಟೊ ಬೆಲೆ 130 ರೂಪಾಯಿಯ ಗಡಿ ದಾಟಿದೆ. ಸಂತೆಯಲ್ಲಿ ಟೊಮೆಟೊ ಕಳುವಾಗುವ ಭೀತಿ ಮಾರಾಟಗಾರರಿಗೆ ಎದುರಾಗಿದೆ. ಹೀಗಾಗಿ, ರೈತರೊಬ್ಬರು ಸಂತೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿಕೊಂಡು ಟೊಮೆಟೊ ವ್ಯಾಪಾರ ಮಾಡುತ್ತಿರುವುದು ಕಂಡುಬಂದಿದೆ.
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಅಕ್ಕಿ ಆಲೂರು ಗ್ರಾಮದ ಸಂತೆಯಲ್ಲಿ ಘಟನೆ ನಡೆದಿದೆ. ರೈತ ಮಲ್ಲಪ್ಪ ತಾನು ಬೆಳೆದಿದ್ದ ಟೊಮೆಟೊವನ್ನು ಸಂತೆಯಲ್ಲಿ ರಕ್ಷಿಸಿಕೊಂಡು ಮಾರಾಟ ಮಾಡಲು, ತನ್ನ ಮಳಿಗೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ್ದರು ಎಂದು ತಿಳಿದುಬಂದಿದೆ.
ಅವರು ತಮ್ಮ ಪರಿಚಿತರಿಂದ ಸಿಸಿ ಕ್ಯಾಮೆರಾ ಪಡೆದುಕೊಂಡು ಬಂದು ತಮ್ಮ ಮಳಿಗೆಗೆ ಅಳವಡಿಸಿಕೊಂಡಿದ್ದರು. “ಹಾವೇರಿಯಲ್ಲಿ ಟೊಮೆಟೊ ಬೆಲೆ ಕೆ.ಜಿಗೆ 130 ರೂ. ಇದೆ. ಹೀಗಾಗಿ, ಟೊಮೆಟೊ ಕಳ್ಳರ ಹಾವಳಿ ಹೆಚ್ಚಾಗಿದೆ. ಅದಕ್ಕಾಗಿ, ಸಿಸಿ ಕ್ಯಾಮೆರಾ ಹಾಕಿದ್ದೇನೆ” ಎಂದು ಮಲ್ಲಪ್ಪ ಹೇಳಿದ್ದಾರೆ.