ವಸತಿ ನಿಲಯದಲ್ಲಿ ಹಾಸ್ಟೆಲ್ ವಾರ್ಡನ್ ಹಾಗೂ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ವಿದ್ಯಾರ್ಥಿಗಳಿಗೆ ಫಂಗಸ್ ಸೋಂಕು ತಗುಲಿ ಅನಾರೋಗ್ಯದಿಂದ ನರಳುತ್ತಿದ್ದಾರೆ. ಉತ್ತಮ ಆಹಾರ, ಆರೋಗ್ಯ, ಶಿಕ್ಷಣ ಸಿಗುತ್ತದೆಂಬ ಕನಸು ಹೊತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಸಮುದಾಯದ ಜನರು ತಮ್ಮ ಮಕ್ಕಳನ್ನು ವಸತಿ ಶಾಲೆಗಳಿಗೆ ಕಳಿಸುತ್ತಾರೆ. ಆದರೆ ಸಿಬ್ಬಂದಿಗಳ ಬೇಜವಾಬ್ದಾರಿತನ ಹೇಳತೀರದಾಗಿದೆ.
ಹಾವೇರಿ ತಾಲೂಕಿನ ಕಬ್ಬೂರ ಗ್ರಾಮದ ಡಾ. ಬಿ ಆರ್ ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಫಂಗಸ್ ಸೋಂಕು ತಗುಲಿ ವಿದ್ಯಾರ್ಥಿಗಳು ಅನಾರೋಗ್ಯಕ್ಕೆ ತುತ್ತಾಗಿರುವುದು ಕಂಡುಬಂದಿದೆ. ವಸತಿ ನಿಲಯದಲ್ಲಿ ಬಹುತೇಕ ವಿದ್ಯಾರ್ಥಿಗಳ ಮೈಮೇಲೆ, ಕೈ ಕಾಲು ಸಂದುಗಳಲ್ಲಿ ಕೆರೆತ ಉಂಟಾಗಿ ಕೀವುಗುಳ್ಳೆಗಳಿಂದ ಬಳಲುತ್ತಿದ್ದಾರೆ.
ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಬಹುತೇಕ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಅವರು ಕಡು ಬಡಕುಟುಂಬದವರಾಗಿದ್ದಾರೆ. ಈ ವಿದ್ಯಾರ್ಥಿಗಳಿಗೆ ಫಂಗಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಎಲ್ಲ ವಿದ್ಯಾರ್ಥಿಗಳಿಗೂ ಸೋಂಕು ಹರಡುತ್ತಿದ್ದರೂ ನಿಲಯ ಪಾಲಕರು ಮತ್ತು ಸಿಬ್ಬಂದಿಯವರು ನಿರ್ಲಕ್ಷ್ಯ ತೋರಿದ್ದಾರೆ. ದಿನೇದಿನೆ ಎಲ್ಲ ವಿದ್ಯಾರ್ಥಿಗಳಿಗೆ ಹರಡುತ್ತಿರುವುದರಿಂದ ರಾತ್ರಿ ಇಡೀ ನಿದ್ದೆ ಮಾಡಲಾಗುತ್ತಿಲ್ಲ. ಮೈಕೈ ಮತ್ತು ಮರ್ಮಾಂಗದಲ್ಲಿ ಹುಣ್ಣುಗಳಾಗಿ ಕೀವಾಗಿ ಒಡೆದು ಮೈಯಲ್ಲಾ ಹರಡಿದೆ ಎಂದು ವಿದ್ಯಾರ್ಥಿಗಳು ಹೇಳುತ್ತಿದ್ದಾರೆ.
ಈ ವಸತಿ ನಿಲಯದಲ್ಲಿ ಒಟ್ಟು ಮೂರು ಕೊಠಡಿಗಳಿದ್ದು, ಸುಮಾರು 140 ಮಂದಿ ವಿದ್ಯಾರ್ಥಿಗಳು ಇರುವುದು ಕಂಡುಬಂದಿದೆ. ಒಂದು ಕಾಟ್‌ನಲ್ಲಿ ಸುಮಾರು ನಾಲ್ಕುರಿಂದ ಐದು ಮಂದಿ ವಿದ್ಯಾರ್ಥಿಗಳನ್ನು ಮಲಗಿಸುತ್ತಾರೆ. ಇದರಿಂದ ಒಬ್ಬರಿಗೊಬ್ಬರ ಮೈ ತಾಕಿ ಸುಮಾರು ಇಪ್ಪತ್ತಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಸೋಂಕು ತಗಲಿದೆ. ಇದರಿಂದ ವಿದ್ಯಾರ್ಥಿಗಳು ತಮ್ಮ ಪಾಲಕರಿಗೆ ಫೋನ್ ಮಾಡಿ ಅಳುತ್ತಿದ್ದಾರೆ.

ವಿದ್ಯಾರ್ಥಿಗಳು ಬಟ್ಟೆ ತೊಳೆದ ನಂತರ ಬಟ್ಟೆ ಒಣಗಿಸಲು ಸರಿಯಾದ ವ್ಯವಸ್ಥೆಯೂ ಇಲ್ಲ. ಎಲ್ಲ ಬಟ್ಟೆಗಳನ್ನು ಒಂದೇ ಕಡೆ ಹಾಕುವುದರಿಂದ ರೋಗ ಉಲ್ಬಣಗೊಂಡು ವಿದ್ಯಾರ್ಥಿಗಳು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ನಡುವೆ ವಿದ್ಯಾರ್ಥಿಗಳಿಗೆ ಚಿಕಿತ್ಸೆ ಕೊಡಿಸಲು ಪೋಷಕರಿಗೂ ಕೂಡಾ ಆರ್ಥಿಕವಾಗಿ ತುಂಬಾ ಕಷ್ಟವಾಗಿರುತ್ತದೆ. ಇದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೂ ಸಹ ತುಂಬಾ ತೊಂದರೆಯಾಗುತ್ತಿದೆ.
ವಿದ್ಯಾರ್ಥಿಯ ತಂದೆ ಶಿವಣ್ಣ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ನಮ್ಮ ಮಗ ನಮಗೆ ಫೋನ್ ಮಾಡಿ, ಅಳುತ್ತ ‘ನನ್ನ ಮೈಯ್ಯಲ್ಲೆಲ್ಲ ಕೀವುಗಟ್ಟಿದ ಗುಳ್ಳೆಗಳಾಗಿವೆ. ಬಾ ಎಂದು ಹೇಳಿದ ಮೇಲೆ, ಹಾಸ್ಟೆಲ್‌ಗೆ ಹೋಗಿ ನೋಡಿದರೆ ಸಿಬ್ಬಂದಿಗಳು ಬೇಜವಾಬ್ದಾರಿ ಮಾತುಗಳನ್ನಾಡುತ್ತಾರೆ. ಬಹುತೇಕ ವಿದ್ಯಾರ್ಥಿಗಳಿಗೆ ಕೀವು ಗುಳ್ಳೆಗಳಾಗಿ ಬಳಲುತ್ತಿದ್ದಾರೆ” ಎಂದು ಹೇಳಿದರು.
ವಾರ್ಡನ್ ಗಂಗಮ್ಮ ಕಾರಿಕಾಂಟಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಕೇವಲ ಮೂರು ಕೊಠಡಿಗಳಿವೆ. ಹೆಚ್ಚು ವಿದ್ಯಾರ್ಥಿಗಳು ಇರುವುದರಿಂದ ಹಾಗಾಗಿ ಒತ್ತೋಟ್ಟಿಗೆ ಇರಿಸುತ್ತಿದ್ದೇವೆ. ಈಗ ಪಂಗಸ್ ತಗುಲಿದ ವಿದ್ಯಾರ್ಥಿಗಳಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ತುಮಕೂರು | ಸಿಎಂ ಸಿದ್ದರಾಮಯ್ಯ ಪರ ಬೀದಿಗಿಳಿದ ಕುರುಬ ಸಮುದಾಯ: ರಾಜ್ಯಪಾಲರ ನಡೆಗೆ ಆಕ್ರೋಶ
ಡಿಎಸ್‌ಎಸ್ ರಾಜ್ಯ ಸಮಿತಿ ಸದಸ್ಯ ಉಡಚಪ್ಪ ಮಾಳಗಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ವಿದ್ಯಾರ್ಥಿನಿಲಯದಲ್ಲಿ ವಾರ್ಡನ್ ಹಾಗೂ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಫಂಗಸ್ ಸಾಂಕ್ರಾಮಿಕ ರೋಗದಿಂದ ವಿದ್ಯಾರ್ಥಿಗಳು ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಈ ಪರಿಸ್ಥಿತಿಯನ್ನು ಜಿಲ್ಲಾಧಿಕಾರಿಯವರು ಖುದ್ದಾಗಿ ಪರಿಶೀಲನೆ ಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಇಲ್ಲದೇ ಹೋದಲ್ಲಿ ಜಿಲ್ಲೆಯಾದ್ಯಂತ ಈ ಕಾಯಿಲೆ ಹರಡುವುದರಲ್ಲಿ ಸಂದೇಹವಿಲ್ಲ. ಕೂಡಲೇ ಕ್ರಮಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ.

ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.