ಹಲವು ದಿನಗಳಿಂದ ನಿರಂತರ ಮಳೆ ಸುರಿಯುತ್ತಿರುವುದರಿಂದ ಬೆಳ್ಳುಳ್ಳಿ ಬೆಳೆದ ರೈತನ ಬದುಕು ಮೂರಾಬಟ್ಟೆಯಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವೆಂಬಂತಾಗಿದೆ. ಲಕ್ಷ ಲಕ್ಷ ಹಣ ಖರ್ಚು ಮಾಡಿ ಬೆಳೆದಿದ್ದ ಬೆಳೆ ಅಧಿಕ ತೇವಾಂಶದಿಂದ ನೆಲಕಚ್ಚಿದೆ. ಇದರಿಂದ ಬೆಳ್ಳುಳ್ಳಿ ಬೆಳೆದ ರೈತರಿಗೆ ದಿಕ್ಕೇ ತೋಚದಂತಾಗಿದ್ದು, ಸರ್ಕಾರದಿಂದ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ.
ಹಾವೇರಿ ಜಿಲ್ಲೆಯಲ್ಲಿಯೇ ರಾಣೇಬೆನ್ನೂರು ತಾಲೂಕಿನಲ್ಲಿ ಹೆಚ್ಚು ಬೆಳ್ಳುಳ್ಳಿ ಬೆಳೆಗರಾರು ಇದ್ದಾರೆ. ಇಟಗಿ, ಹನುಮನಹಳ್ಳಿ, ಮುದೇನೂರ, ಮಾಗೋಡ, ಮಣಕೂರ, ಲಿಂಗದಹಳ್ಳಿ, ಅಂತರವಳ್ಳಿ, ಕೃಷ್ಣಾಪುರ, ಹಲಗೇರಿ, ಆಲದಕಟ್ಟಿ, ನಿಟ್ಟೂರ, ಕೊಣನತೆಲಿ, ಸುಣಕಲ್ಲಿಬಿದರಿ, ಚಳಗೇರಿ, ಕರೂರ, ನಾಗೇನಹಳ್ಳಿ, ಕಮದೋಡ, ಮುನ್ನೂರು, ಯರೇಕುಪ್ಪಿ, ಮೈದೂರ, ಜೋಯಿಸರ ಹರಳಹಳ್ಳಿ, ಹಿರೇಬಿದರಿ, ಆರೇಮಲ್ಲಾಪುರ, ಉಕ್ಕುಂದ, ಸರ್ವಂದ, ಅಸುಂಡಿ, ಹುಲಿಹಳ್ಳಿ, ಹೆಡಿಯಾಲ, ಬೆನಕನಕೊಂಡ ಭಾಗದ ರೈತರು ಹೆಚ್ಚಾಗಿ ಬೆಳ್ಳುಳ್ಳಿ ಬೆಳೆದಿದ್ದಾರೆ.
ಬೆಳ್ಳುಳ್ಳಿ ಬೆಳೆಯಲು ಪ್ರತಿ ಎಕರೆಗೆ ಹೊಲ ಹದಗೊಳಿಸಲು, ಬಿತ್ತನೆ ಬೀಜ, ಗೊಬ್ಬರ, ಕೂಲಿ ಕಾರ್ಮಿಕರ ಖರ್ಚು ಸೇರಿ 30 ರಿಂದ 40 ಸಾವಿರ ರೂ.ವರೆಗೆ, ಖರ್ಚು ಆಗುತ್ತದೆ. 10, 15 ಎಕರೆ ಹೊಲ ಇರುವ ಕೆಲವು ರೈತರು ಅಂದಾಜು 5 ಲಕ್ಷ ರೂಪಾಯಿವರೆಗೂ ಖರ್ಚು ಮಾಡಿದ್ದಾರೆ. ಕಳೆದ ವರ್ಷಗಳಲ್ಲಿ 700 ಹೆಕ್ಟೇರ್ ಪ್ರದೇಶದಲ್ಲಿ ಬೆಳ್ಳುಳ್ಳಿ ಬಿತ್ತನೆ ಮಾಡಲಾಗಿತ್ತು. ಈ ಮುಂಗಾರಿನಲ್ಲಿ 2,200 ಹೆಕ್ಟೇರ್‌ನಲ್ಲಿ ಬೆಳ್ಳುಳ್ಳಿ ಬೆಳೆ ಬಿತ್ತನೆಯಾಗಿದೆ. ಬಿತ್ತನೆ ಮಾಡಿದ ಬೆಳ್ಳುಳ್ಳಿ ಬೆಳೆದ ರೈತರು ಅತಿಯಾದ ಮಳೆಯಿಂದ ಬೆಳೆ ಹಾನಿ ಅನುಭವಿಸಿದ್ದಾರೆ. ರೈತರ ಖರ್ಚಿಗೆ ತಕ್ಕ ಇಳುವರಿ ಬಾರದಿರಲು ಮಳೆ ಕಾರಣವಾಗಿದೆ ಎಂದು ಬೆಳ್ಳುಳ್ಳಿ ಬೆಳೆಗಾರರು ಕಣ್ಣೀರು ಹಾಕುತ್ತಿದ್ದಾರೆ.
ಕಳೆದ ವರ್ಷ ಬೆಳ್ಳುಳ್ಳಿಗೆ ಕ್ಲಿಂಟಲ್‌ಗೆ ₹25 ಸಾವಿರದಿಂದ ₹30 ಸಾವಿರ ಬೆಲೆ ಇತ್ತು. ಈ ಬಾರಿ ವಾಡಿಕೆ ಮಳೆಗಿಂತ ಹೆಚ್ಚು ಮಳೆಯಾಗಿದೆ. ಮೇ ತಿಂಗಳಲ್ಲಿ71 ಮಿಮೀ ವಾಡಿಕೆ ಮಳೆಯಾಗಬೇಕಿದ್ದು, 133.80 ಮಿಮೀ ಮಳೆ ಸುರಿದಿದೆ. ಜುಲೈನಲ್ಲಿ163 ಮಿಮೀ ಬದಲಿಗೆ 127.40 ಮಿಮೀ, ಜೂನ್ 1ರಿಂದ ಆ.21ರವರೆಗೆ 379.80 ಮಿಮೀ ವಾಡಿಕೆ ಪೈಕಿ 339 ಮಿಮೀ ಮಳೆ ಸುರಿದಿದೆ. ಕಳೆದ ಏಳು ದಿನಗಳಲ್ಲಿ36.70 ಮಿಮೀ ಮಳೆಯಾಗಿದೆ. ಇದರಿಂದ ತೇವಾಂಶ ಹೆಚ್ಚಾದ ಹಿನ್ನೆಲೆಯಲ್ಲಿ ಬೆಳ್ಳುಳ್ಳಿ ಕೊಳೆಯುತ್ತಿದ್ದು, ರೈತರು ಸಂಕಷ್ಟ ಎದುರಿಸುತ್ತಿದ್ದಾರೆ.

ಅರ್ಧದಷ್ಟು ಜಮೀನುಗಳಲ್ಲಿ ಬೆಳ್ಳುಳ್ಳಿ ಬೆಳೆ ಕಟಾವಿಗೆ ಬಂದಿದೆ. ಆದರೆ, ತೇವಾಂಶ ಹೆಚ್ಚಾಗಿ ರೈತರಿಗೆ ತೊಂದರೆಯಾಗುತ್ತಿದೆ. ಈ ವರ್ಷ ಅವಧಿಗೂ ಮುನ್ನವೇ ಸುರಿದ ಮುಂಗಾರು ಮಳೆಯಿಂದ ರೈತರು ಜಮೀನು ಹದ ಮಾಡಿ ಬೆಳ್ಳುಳ್ಳಿ ಬಿತ್ತನೆ ಮಾಡಿದ್ದರು. ಬಿತ್ತನೆಯಾದ ಎರಡು-ಮೂರು ವಾರದ ನಂತರ ಬೆಳೆಗಳಿಗೆ ಕೀಟ ಭಾದೆ ಬಂದಿತು. ತೇವಾಂಶ ಹೆಚ್ಚಾಗಿ ಭೂಮಿ ಜವಳು ಬಂದಿದೆ. ಬೆಳೆ ಕಂದು ಬಣ್ಣಕ್ಕೆ ತಿರುಗಿ ಕೊಳೆ ರೋಗ, ಮಜ್ಜಿಗಿ ರೋಗ ಕಾಣಿಸಿಕೊಂಡಿದೆ. ಸಕಾಲಕ್ಕೆ ದೊರೆಯದ ಯೂರಿಯಾ ಗೊಬ್ಬರದಿಂದಲೂ ಬೆಳ್ಳುಳ್ಳಿ ಇಳುವರಿಯ ಮೇಲೆ ಪರಿಣಾಮ ಬೀರಿದೆ.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಹೆಣ್ಣನ್ನು ಪೂಜಿಸುವ ನಾಡಿನಲ್ಲಿ ಮಹಿಳೆಯರ ಸುರಕ್ಷತೆ ಬಹುದೊಡ್ಡ ಪ್ರಶ್ನೆಯಾಗಿದೆ: ಪ್ರೊ. ವಿಜಯಾ ಬಿ ಕೋರಿಶೆಟ್ಟಿ
ಪರಿಹಾರಕ್ಕಾಗಿ ಸರ್ಕಾರದ ಮೊರೆ: ಈ ಬಾರಿ ಬೆಳೆ ಕೂಡ ಉತ್ತಮವಾಗಿ ಬಂದಿತ್ತು. ಆದರೆ, ನಿರಂತರವಾಗಿ ಮಳೆ ಇರುವ ಹಿನ್ನೆಲೆಯಲ್ಲಿ ಬೆಳೆ ಕೊಳೆಯುವ ಸ್ಥಿತಿಯಲ್ಲಿದೆ. ಇದರಿಂದ ಕೆಲ ರೈತರು ಜಮೀನುಗಳಲ್ಲಿ ಬೆಳ್ಳುಳ್ಳಿ ಬೆಳೆಯನ್ನು ಹಾಗೆಯೇ ಬಿಟ್ಟಿದ್ದಾರೆ. ಮಳೆ ಆರ್ಭಟಕ್ಕೆ ಸಿಲುಕಿರುವ ಬೆಳ್ಳುಳ್ಳಿ ಬೆಳೆ ಅನ್ನದಾತರನ್ನು ಸಾಲದ ಸುಳಿಗೆ ಸಿಲುಕಿಸಿದೆ. ಹೀಗಾಗಿ ಸರ್ಕಾರ ಬೆಳೆಹಾನಿ ಸಮೀಕ್ಷೆ ನಡೆಸಿ, ಒಂದು ಎಕರೆಗೆ ಕನಿಷ್ಟ ಬೆಲೆಯನ್ನು ನೀಡಿ ಪರಿಹಾರ ಒದಗಿಸುವ ಮೂಲಕ ಸಂಕಷ್ಟದಿಂದ ದೂರ ಮಾಡಬೇಕು ಎಂಬುದು ಅನ್ನದಾತರ ಆಗ್ರಹವಾಗಿದೆ.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಈ ದಿನ.ಕಾಮ್ ಜತೆಗೆ ಮಾತನಾಡಿ, “ಮುಂಗಾರು ಬೆಳೆ ಬೆಳ್ಳುಳ್ಳಿ ಚೆನ್ನಾಗಿದೆ. ಉತ್ತಮ ನಿರೀಕ್ಷೆ ಇತ್ತು. ಫಲ ಬಂದಿತ್ತು. ಆದರೆ ನಿರಂತರ ಮಳೆಯಿಂದ ಬೆಳ್ಳುಳ್ಳಿ ಜಲಾವೃತವಾಗಿದೆ. ಸರ್ಕಾರ ರೈತರ ಪರವಾಗಿ ನಿಲ್ಲಬೇಕು. ನಿಜವಾಗಿ ಹಾಳಾಗಿದ್ದನ್ನು ಸಮೀಕ್ಷೆ ಮಾಡಬೇಕು. ಬೆಳ್ಳುಳ್ಳಿ ಬೆಳೆ ಹಾನಿಯಾದವರಿಗೆ ಎಕರೆಗೆ ಐವತ್ತು ಸಾವಿರ ರೂಪಾಯಿ ಪರಿಹಾರ ಕೊಡಬೇಕು” ಎಂದು ಒತ್ತಾಯಿಸಿದರು.

ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.