ಹಮಾಲಿ ಕಾರ್ಮಿಕರಿಗೆ ಭವಿಷ್ಯನಿಧಿ ಯೋಜನೆ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಷನ್ ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಷನ್ ಹಾವೇರಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಹಮಾಲಿ ಕಾರ್ಮಿಕರು ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಹಮಾಲಿ ಕಾರ್ಮಿಕ ಸಂಘಟನೆಯ ಜಿಲ್ಲಾ ಸಮಿತಿ ಪದಾಧಿಕಾರಿ ಬಸವರಾಜ ಪೂಜಾರ ಮಾತನಾಡಿ, “ಅಸಂಘಟಿತ ಕಾರ್ಮಿಕರಲ್ಲಿಯೇ ಅತ್ಯಂತ ಶ್ರಮದಾಯಕ ಕೆಲಸ ಮಾಡುವ, ವ್ಯಾಪಾರ ವಹಿವಾಟಿನಲ್ಲಿ ಹಾಗೂ ಸರಕು ಸಾಗಾಣಿಕೆಯಲ್ಲಿ ಮಹತ್ವದ ಪಾತ್ರ ವಹಿಸುವ ಶ್ರಮಜೀವಿಗಳಾದ ಹಮಾಲಿ ಕಾರ್ಮಿಕರಿಗೆ ಪಿಂಚಣಿ, ವೇತನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆ” ಎಂದು ಆಗ್ರಹಿಸಿದರು.
“ಕರ್ನಾಟಕ ಅಸಂಘಟಿತ ಕಾರ್ಮಿಕರ ಭವಿಷ್ಯನಿಧಿ ಯೋಜನೆಯನ್ನು ಜಾರಿ ಮಾಡಬೇಕು ಹಾಗೂ ಸೂಕ್ತ ಪಿಂಚಣಿ ಯೋಜನೆ ಜಾರಿಗೊಳಿಸಬೇಕು. ಎಪಿಎಂಸಿ ಹಮಾಲಿ ಕಾರ್ಮಿಕರಿಗೆ ಈ ಹಿಂದೆ ಪ್ರಾರಂಭಿಸಲಾದ ಕಾಯಕನಿಧಿ ಯೋಜನೆಯಡಿ ವೈದ್ಯಕೀಯ ಮರುಪಾವತಿ ಪದ್ಧತಿ ಮುಂದುವರೆಸಬೇಕು. 60 ವರ್ಷವಾದ ಹಮಾಲಿ ಕಾರ್ಮಿಕರಿಗೆ ಒಂದು ಬಾರಿ ಕನಿಷ್ಠ ಒಂದು ಲಕ್ಷ ರೂಪಾಯಿ ನಿವೃತ್ತಿ ಪರಿಹಾರ(ಗ್ರ್ಯಾಚೂಟಿ) ನೀಡಬೇಕು. ಕನಿಷ್ಠ ಎರಡು ಲಕ್ಷ ರೂಪಾಯಿಗಳಿಗೆ ಮರಣ ಪರಿಹಾರ ಹೆಚ್ಚಿಸಬೇಕು” ಎಂದು ಒತ್ತಾಯಿಸಿದರು.
“ಮಿಲ್-ಗೋಡೌನ್-ವೇರಹೌಸ್‌ಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಭವಿಷ್ಯನಿಧಿ, ವಿಮಾ ಸೌಲಭ್ಯ, ಬೋನಸ್ ಸೇರಿದಂತೆ ಅಗತ್ಯ ಕಾರ್ಮಿಕ ಕಾಯಿದೆಗಳ ಜಾರಿಯಿಂದ ವಂಚಿತರಾಗಿದ್ದಾರೆ. ಈ ಎಲ್ಲ ಕಾರ್ಮಿಕರಿಗೆ ಕಡ್ಡಾಯವಾಗಿ ಕಾರ್ಮಿಕ ಕಾನೂನುಗಳು ಅನ್ವಯಿಸಬೇಕು. ಎಲ್ಲ ವಿಭಾಗದ ಹಮಾಲರಿಗೆ ಕನಿಷ್ಠ ವೇತನ ಜಾರಿ ಮಾಡಲು ಮುತುವರ್ಜಿ ವಹಿಸಬೇಕು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ ಜಿಲ್ಲೆ ಸೂಫಿ ಸಂತ ಶರಣರ ನಾಡಾಗಿದೆ: ಜಿಲ್ಲಾಧಿಕಾರಿ ಟಿ ಭೂಬಾಲನ್
“ಎಲ್ಲ ವಸತಿರಹಿತ ಹಮಾಲಿ ಕಾರ್ಮಿಕರಿಗೆ ರಾಜ್ಯ, ಕೇಂದ್ರ ಸರ್ಕಾರಗಳ ವಿವಿಧ ವಸತಿ ಯೋಜನೆಗಳನ್ನು ಬಳಸಿಕೊಂಡು ಯೋಗ್ಯವಾದ ವಸತಿ ಯೋಜನೆಯನ್ನು ಜಾರಿ ಮಾಡಬೇಕು” ಎಂದು ಆಗ್ರಹಿಸಿದರು.
ಮಲ್ಲೇಶಪ್ಪ ಮದ್ಲೇರ, ಹನುಮಂತಪ್ಪ ಕನಕಾಪೂರ, ಹುಸೇನಸಾಬ ಏರಿಮನಿ, ಬಸವಣ್ಣೆಪ್ಪ ಕರೆಬಸಪ್ಪನವರ, ಭೀಮಣ್ಣ ಕನವಳ್ಳಿ, ಈರಪ್ಪ ವಡ್ಡರ, ರಾಜು ಮಾಳಮ್ಮನವರ, ಮೆಹಬೂಬ್ ಅಲಿ ಬಡಿಗೇರ, ಬಸವರಾಜ ಬೂದಿಹಾಳ, ರುದ್ರಪ್ಪ ಹುಬ್ಬಳ್ಳಿ, ಬೀರಪ್ಪ ಡಿಳ್ಳೆಪ್ಪನವರ, ಶಿವಪ್ಪ ಕೋಡಿಹಳ್ಳಿ, ನಿಸಾರ್ ಅಹಮದ್ ಮುಳಗುಂದ, ನಾಗಪ್ಪ ಧಾರವಾಡ, ಕುಮಾರ ದಿಂಡಿಮನಿ, ರೇವಣೆಪ್ಪ ಬರಡಿ ಸೇರಿದಂತೆ ಇತರರು ಇದ್ದರು.