ರಾಜ್ಯ ಸರಕಾರದ ವಾರ್ತಾ ಮತ್ತು ಪ್ರಚಾರ ಇಲಾಖೆ ಕೊಡುವ 2020ನೇ ಸಾಲಿನ ‘ಪರಿಸರ ಪತ್ರಿಕೋದ್ಯಮ’ ಪ್ರಶಸ್ತಿ ಭಾಜನರಾಗಿರುವ, ಹಾವೇರಿಯ ಹಿರಿಯ ಪತ್ರಕರ್ತರು ಹಾಗೂ ವನ್ಯಜೀವಿ ವಿಶಿಷ್ಟ ಛಾಯಾಗ್ರಾಹಕ ಮಾಲತೇಶ ಅಂಗೂರ ಅವರಿಗೆ ಸಮಾನ ಮನಸ್ಕ ಸಂಘಟನೆಗಳ ವತಿಯಿಂದ ಹಾವೇರಿ ಪಟ್ಟಣದ ಸ್ವಗೃಹದಲ್ಲಿ ಅಭಿನಂದಿಸಲಾಯಿತು.
ಅಭಿನಂದಿಸಿ ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, “ಮಾಲತೇಶ ಅಂಗೂರ ಅವರು ಪತ್ರಿಕಾ ರಂಗದಲ್ಲಿ ಎರಡು ದಶಕಗಳಿಗೂ ಹೆಚ್ಚು ಕೆಲಸ ಮಾಡುತ್ತಿರುವ ಮಾಲತೇಶ ಅಂಗೂರ ಅವರು ಅತ್ಯಂತ ಅನುಭವಿ ಹಾಗೂ ಸಂವೇದನಾ ಶೀಲ ಪತ್ರಕರ್ತರಾಗಿರುವ ಜೊತೆಯಲ್ಲಿ ಲೇಖಕರೂ ಹೌದು. ಅವರು ಹಲವಾರು ಪುಸ್ತಕಗಳನ್ನು ಕೂಡ ಬರೆದಿದ್ದಾರೆ” ಎಂದರು.
“ವನ್ಯಜೀವಿಗಳ ಛಾಯಾಚಿತ್ರ ಸೆರೆಹಿಡಿಯುವಲ್ಲಿ ವಿಶಿಷ್ಠ ಸಾಧನೆ ಮಾಡಿರುವ ಅಂಗೂರ ಅವರು ನಿರಂತರವಾಗಿ ಕಾಡು, ಕೆರೆಗಳಲ್ಲಿ ಸಂಚರಿಸಿ ಪ್ರಾಣಿ -ಪಕ್ಷಿಗಳು ಹಾಗೂ ಜಲಚರಗಳ ಅಪರೂಪದ ಚಿತ್ರಗಳನ್ನು ಸೆರೆ ಹಿಡಿದ ಚಿತ್ರಗಳು ರಾಜ್ಯಾದ್ಯಂತ ಜನಮನ ಸೂರೆಗೊಂಡಿವೆ” ಎಂದು ಹೇಳಿದರು.
“ದೇಶ ವಿದೇಶದಿಂದ ಆಗಮಿಸುವ ಪ್ರಾಣಿ-ಪಕ್ಷಿಗಳ ಛಾಯಾಚಿತ್ರಗಳನ್ನು ತೆಗೆದು ಅವುಗಳ ಬಗ್ಗೆ ಮಾಹಿತಿ ಕಲೆಹಾಕಿ ಸಾರ್ವಜನಿಕರಿಗೆ ತಿಳಿಸುವರು. ಅದರಲ್ಲೂ ವಿಶೇಷವಾಗಿ ಮುಂದಿನ ಪೀಳಿಗೆಗಾಗಿ ದಾಖಲಿಸುವ ಮಹದುದ್ದೇಶದ್ದಿಂದ ವನ್ಯಜೀವಿ ಛಾಯಾಚಿತ್ರ ತೆಗೆಯುತ್ತಿರುವ ಅಪಾರ ಮಾನವೀಯ ಕಾಳಜೀಯ ಅಂಗೂರ ಅವರು ಹಲವಾರು ಸಲ ಹುಲಿ, ಕರಡಿ ಸೇರಿದಂತೆ ಕಾಡು ಪ್ರಾಣಿಗಳಿಂದ ಆಗುವ ಅಪಾಯದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ” ಎಂದು ಬಸವರಾಜ್ ಪೂಜಾರ್ ಹೇಳಿದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು l ಹೊರಗುತ್ತಿಗೆ ನೌಕರರ ಪ್ರತಿಭಟನೆ; ಜಿಲ್ಲಾಧಿಕಾರಿಗೆ ಮನವಿ
ಈ ಸಂದರ್ಭದಲ್ಲಿ ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಕಾರ್ಯದರ್ಶಿ ಗಂಗಯ್ಯ ಕುಲಕರ್ಣಿ, ಅಮ್ಮ ಸಂಸ್ಥೆಯ ಸಂಸ್ಥಾಪಕ ನಿಂಗಪ್ಪ ಆರೇರ, ಅರೆ ಅಲೆಮಾರಿ ಸಮುದಾಯ ಸಂಘಟನೆಯ ಜಿಲ್ಲಾಧ್ಯಕ್ಷ ಶೆಟ್ಟಿ ವಿಭೂತಿ ನಾಯಕ, ಯುವ ನ್ಯಾಯವಾದಿ ನಾರಾಯಣ ಕಾಳೆ, ಬಿಎಸ್ಪಿ ಜಿಲ್ಲಾಧ್ಯಕ್ಷ ಎಂ.ಕೆ ಮಕಬುಲ್ ಇದ್ದರು.