ಹಾಸ್ಟೆಲ್ ಪ್ರವೇಶ ಅರ್ಜಿ ಆಹ್ವಾನಿಸುವಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ ವಿಳಂಬ ಮಾಡುತ್ತಿದ್ದು, ಇಲಾಖೆಗಳ ಧೋರಣೆ ಖಂಡಿಸಿ ಎಸ್‌ಎಫ್‌ಐ ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಪಟ್ಟಣದಲ್ಲಿ ಪ್ರತಿಭಟನೆ ನಡೆಸಿರುವ ಪ್ರತಿಭಟನಾಕಾರರು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಗರೀಶ್ ಹೊಸಮತಿ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಪ್ರಸಾದ್ ಆಲದಕಟ್ಟಿ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ. ಕೂಡಲೇ ಅರ್ಜಿ ಆಹ್ವಾನಿಸಿ, ಆಯ್ಕೆ ಪಟ್ಟಿ ಬಿಡುಗಡೆ ಮಾಡಬೇಕು. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹಾಸ್ಟೆಲ್‌ಗಳನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ ಎಸ್ಎಫ್ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಎಸ್ ಮಾತನಾಡಿ, “ರಾಜ್ಯದಲ್ಲಿ ಶಾಲಾ ಕಾಲೇಜುಗಳು ಪ್ರಾರಂಭವಾಗಿ ಸುಮಾರು 20 ದಿನಗಳಾಗುತ್ತಿವೆ. ಆದರೂ, ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗಳ ಮೂಲಕ ನಡೆಯುತ್ತಿರುವ ಮೆಟ್ರಿಕ್ ಪೂರ್ವ ಬಾಲಕ/ಬಾಲಕಿಯರು ವಸತಿ ನಿಲಯಗಳಲ್ಲಿ ಅರ್ಜಿ ಆಹ್ವಾನ ಮಾಡಲಾಗಿಲ್ಲ. ಕೂಡಲೇ ಅರ್ಜಿ ಆಹ್ವಾನಿಸಬೇಕು” ಎಂದು ಆಗ್ರಹಿಸಿದ್ದಾರೆ.
“ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ ಮುಗಿಸಿಕೊಂಡು ಈಗಾಗಲೇ ಮುಂದಿನ ಶಿಕ್ಷಣಕ್ಕೆ ಹೋಗಿರುತ್ತಾರೆ. ಹೊಸ ವಿದ್ಯಾರ್ಥಿಗಳು ಮುಂದಿನ ವರ್ಷದ ತರಗತಿಗಳಿಗೆ ದಾಖಲಾತಿ ಮಾಡಿಸಿದ್ದಾರೆ. ರಾಜ್ಯದ ಮತ್ತು ಜಿಲ್ಲೆಯಲ್ಲಿ ಬಹುತೇಕ ಶಾಲಾ-ಕಾಲೇಜುಗಳಲ್ಲಿ ತರಗತಿಗಳು ಪ್ರಾರಂಭವಾಗಿವೆ. ಹಲವಾರು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ತಮ್ಮ ಮುಂದಿನ ಶಿಕ್ಷಣದ ವಸತಿಗಾಗಿ ಹಾಸ್ಟೆಲ್ ಮೇಲೆ ಅವಲಂಬಿತರಾಗಿದ್ದಾರೆ. ಆದರೆ, ಹಾಸ್ಟೆಲ್‌ಗಳು ಅರ್ಜಿ ಆಹ್ವಾನ ಮಾಡದೇ ಇರುವುದರಿಂದ ಅವರು ಪ್ರಯಾಣಕ್ಕಾಗಿ ಸಂಕಷ್ಟ ಎದುರಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.
“ಕಳೆದ ವರ್ಷ ಮೆಟ್ರಿಕ್ ಪೂರ್ವ ವಸತಿ ನಿಲಯಗಳಿಗೆ ಮೇ ತಿಂಗಳಲ್ಲಿ ಅರ್ಜಿ ಆಹ್ವಾನ ಮಾಡಿ, ಜೂನ್ ತಿಂಗಳ 10ನೇ ದಿನಾಂಕದ ಒಳಗಡೆ ಅರ್ಜಿ ಪ್ರಕ್ರಿಯೆ ಮುಗಿಸಿದ್ದರು. ಆದರೆ, ಈ ಶೈಕ್ಷಣಿಕ ವರ್ಷ ಜೂನ್ 18 ಮುಗಿದರು ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ಗೆ ಹೊಸ ಪ್ರವೇಶಕ್ಕೆ ಅರ್ಜಿ ಆಹ್ವಾನಿಸದೆ ನಿರ್ಲಕ್ಷ್ಯ ಮಾಡಲಾಗುತ್ತಿದೆ. ಸರ್ಕಾರ ಗ್ರಾಮೀಣ ಪ್ರದೇಶದ ಬಡ, ದಲಿತ, ಹಿಂದುಳಿದ, ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಆದ್ಯತೆ ನೀಡದೆ ಇರವುದನ್ನು ಎಸ್‌ಎಫ್‌ಐ ತೀವ್ರವಾಗಿ ಖಂಡಿಸುತ್ತದೆ” ಎಂದಿದ್ದಾರೆ.
ಪ್ರತಿಭಟನೆಯಲ್ಲಿ ಎಸ್ಎಫ್ಐ ತಾಲೂಕು ಅಧ್ಯಕ್ಷ ಶ್ರೀಧರ ಸಿ, ಉಪಾಧ್ಯಕ್ಷ ನೇಹಾಲ್ ಖಾನ್ ಗಂಗಾವತಿ, ಮುಖಂಡರಾದ ಗೌತಮ್ ಸಾವಕ್ಕನವರ, ಅಭಿಶೇಕ್ ಕುಸಗೂರ, ಪವಿತ್ರ ಎಚ್ ಕೆ, ನಾಗರತ್ನ ಬಿ ಎಸ್, ಭವ್ಯ ಆರ್ ಕೆ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.