ಬಹಳ ದಿನಗಳ ಬಳಿಕ ಹಾವೇರಿ ಜಿಲ್ಲೆಯಲ್ಲಿ ಕಬ್ಬಿಗೆ ಬೇಡಿಕೆ ಹೆಚ್ಚಾಗಿದೆ. ಕಬ್ಬು ಬೆಳೆಗಾರರು ಉತ್ತಮ ಬೆಲೆ ಮತ್ತು ಸಮಯಕ್ಕೆ ಸರಿಯಾಗಿ ನಗದು ಪಾವತಿಸುವಂತೆ ಒತ್ತಾಯಿಸುತ್ತಿದ್ದಾರೆ.
ಕಬ್ಬು ಬೆಳೆಗಾರರು ಈ ಹಿಂದೆ ಜಿಲ್ಲೆಯ ಸಂಗೂರಿನ ಜಿಎಂ ಶುಗರ್ಸ್ ಮೇಲೆ ಅವಲಂಬಿತರಾಗಿದ್ದರು. ಆದರೆ, ಈ ವರ್ಷ ಶಿಗ್ಗಾವಿ ತಾಲೂಕಿನ ಕೋಣನಕುಂಟೆಯಲ್ಲಿ ಒಂದು ಮತ್ತು ರಟ್ಟೀಹಳ್ಳಿ ತಾಲೂಕಿನಲ್ಲಿ ಮತ್ತೊಂದು ಎಥೆನಾಲ್ ಘಟಕಗಳು ಪ್ರಾರಂಭವಾಗಿವೆ. ಈ ಎರಡೂ ಕಾರ್ಖಾನೆಗಳಿಗೆ ಕಬ್ಬನ್ನು ಅರೆಯಬೇಕಾದ ಅಗತ್ಯವಿದೆ. ಹಾಗಾಗಿ ಕಬ್ಬಿನ ಬೇಡಿಕೆ ಹೆಚ್ಚಾಗಿದ್ದು, ಮೂರೂ ಕಾರ್ಖಾನೆಗಳು ಕಬ್ಬು ಪೂರೈಸುವಂತೆ ರೈತರನ್ನು ಸಂಪರ್ಕಿಸುತ್ತಿವೆ.
ನೆರೆಯ ಜಿಲ್ಲೆಗಳಾದ ಬಳ್ಳಾರಿ, ಗದಗ ಮತ್ತು ದಾವಣಗೆರೆಯ ಕಾರ್ಖಾನೆಗಳಿಂದಲೂ ಕಬ್ಬು ಪೂರೈಸುವಂತೆ ಬೇಡಿಕೆ ಇದೆ.
ಕಬ್ಬು ಬೇಡಿಕೆ ಕುರಿತು ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಮುತ್ತಣ್ಣ ಗುಡಗೇರಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಹಿಂದಿನ ವರ್ಷಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ಈ ಬಾರಿ ಕಬ್ಬಿನ ಬೆಳೆ ಇಳುವರಿ ಕಡಿಮೆಯಾಗಿದೆ. 2022-23ರಲ್ಲಿ 10,540 ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆದಿದ್ದರೆ, ಈ ಹಣಕಾಸು ವರ್ಷದಲ್ಲಿ (2023-24) ಹಾವೇರಿ ಜಿಲ್ಲೆಯಲ್ಲಿ 9,331 ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದೆ. ಆದರೂ ಈ ವರ್ಷ ತೀವ್ರ ಬರಗಾಲ ಇರುವುದರಿಂದ ಕಬ್ಬಿನ ಇಳುವರಿಯ ಮೇಲೆ ಪರಿಣಾಮ ಬೀರಿದೆ” ಎಂದು ತಿಳಿಸಿದರು.
“ಒಂದು ಟನ್ ಕಬ್ಬಿಗೆ ₹3,400ರಂತೆ ನಾವು ಬೇಡಿಕೆ ಇಟ್ಟಿದ್ದು, ಅವರದೇ ವಾಹನ ತಂದು ಕಬ್ಬು ಕಟಾವು ಮಾಡಿಕೊಂಡು ಹೋಗಬೇಕು. ಕಬ್ಬು ಕಟಾವಾಗುತ್ತಿದ್ದಂತೆ ಹಣ ಪಾವತಿಸಬೇಕೆಂದು ಒತ್ತಾಯಿಸುತ್ತಿದ್ದೇವೆ. ನೋಡಬೇಕು ಏನಾಗುತ್ತದೆಂದು. ದಸರಾ ಮುಗಿದ ಬಳಿಕ ರೈತರೆಲ್ಲರೂ ಒಗ್ಗೂಡಿ ಒಮ್ಮತದ ಬೇಡಿಕೆಗೆ ತೀರ್ಮಾನಿಸಿ ನಂತರ ಕಬ್ಬು ನೀಡಲು ಮುಂದಾಗುತ್ತೇವೆ” ಎಂದು ತಿಳಿಸಿದರು.
“ಕಳೆದ ವರ್ಷ ಕಾರ್ಖಾನೆ ಮಾಲೀಕರು ತಮ್ಮ ಮನವಿಗೆ ಸ್ಪಂದಿಸದ ಕಾರಣ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಕಾರ್ಖಾನೆಯ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಕಾರ್ಮಿಕರನ್ನಾಗಲಿ, ಯಂತ್ರಗಳನ್ನಾಗಲಿ ಕೃಷಿಗೆ ಕಳುಹಿಸಲಿಲ್ಲ. ಜತೆಗೆ ಕಬ್ಬು ಬೆಳೆಗಾರರಿಗೆ ತಮ್ಮ ಬೆಳೆಗಳಿಗೆ ಹಣ ಸಿಕ್ಕಿಲ್ಲ. ಆದರೂ, ಈ ವರ್ಷ ಕಾರ್ಖಾನೆಯ ಅಧಿಕಾರಿಗಳು ಕಬ್ಬು ಬೆಳೆಗಾರರನ್ನು ಭೇಟಿ ಮಾಡುತ್ತಿದ್ದಾರೆ. ಇಳುವರಿ ಕಡಿಮೆ ಇರುವ ಕಾರಣ ರೈತರಿಗೆ ಸೌಲಭ್ಯಗಳು ಮತ್ತು ಪಾವತಿಯ ಭರವಸೆ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರೈತರು ಈ ವರ್ಷ ತಮ್ಮ ಕಬ್ಬನ್ನು ಪೂರೈಸಲು ಷರತ್ತುಗಳನ್ನು ಹಾಕುತ್ತಿದ್ದಾರೆ” ಎಂದು ಕೊರಡೂರು ಗ್ರಾಮದ ಕಬ್ಬು ಬೆಳೆಗಾರ ಸಿದ್ದಲಿಂಗಪ್ಪ ಕಲ್ಕೋಟಿ ಸ್ಪಷ್ಟಪಡಿಸಿದರು.
“ಇಳುವರಿ ಕಡಿಮೆಯಾದ ಪರಿಣಾಮ ಕಾರ್ಖಾನೆಗಳಲ್ಲಿ ಕಬ್ಬಿನ ಕೊರತೆಗೆ ಉಂಟಾಗಿದೆ. ಸಂಗೂರಿನ ಜಿಎಂ ಶುಗರ್ಸ್ ಜಿಲ್ಲೆಯ ಸಕ್ಕರೆ ಉತ್ಪಾದಿಸುವ ಅತಿದೊಡ್ಡ ಕಾರ್ಖಾನೆಗಳಲ್ಲಿ ಒಂದಾಗಿದೆ. ಕಳೆದ ವರ್ಷ 5,26,831 ಟನ್ ಕಬ್ಬನ್ನು ಅರೆದಿದೆ. ಆದರೆ, ಈ ವರ್ಷ ಶೇ.50ರಷ್ಟು ಕಬ್ಬು ಪಡೆಯುವ ವಿಶ್ವಾಸ ಆಡಳಿತ ಮಂಡಳಿಗೆ ಇಲ್ಲ” ಎಂಬುದು ಕೆಲವು ರೈತರ ವಾದ.
“ಸಂಗೂರಿನ ಜಿಎಂ ಶುಗರ್ಸ್ ಹಾವೇರಿ ಜಿಲ್ಲೆಯ ಪ್ರಮುಖ ಕಬ್ಬು ಅರೆಯುವ ಘಟಕವಾಗಿದೆ. ಈ ವರ್ಷ ರಟ್ಟೀಹಳ್ಳಿಯಲ್ಲಿ ಪ್ರಾಯೋಗಿಕವಾಗಿ ಜಿಎಂ ಶುಗರ್ಸ್ ಮತ್ತು ಕಳೆದ ವರ್ಷ ಕೆಎಲ್‌ಪಿಡಿ ಎಥೆನಾಲ್ ಹಾಗೂ ವಿಐಪಿಎನ್ ಡಿಸ್ಟಿಲರೀಸ್ ಘಟಕಗಳನ್ನು ತೆರೆಯಲಾಗಿದೆ. ಆದರೆ, ಈ ವರ್ಷ ಜಿಲ್ಲೆಯಲ್ಲಿ ಕಬ್ಬು ಇಳುವರಿ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ನೆರೆಯ ಜಿಲ್ಲೆಗಳ ಇತರ ಕಾರ್ಖಾನೆಗಳಿಗೆ ಕಬ್ಬು ಪೂರೈಸದಂತೆ ನಾವು ರೈತರಿಗೆ ಮನವಿ ಮಾಡುತ್ತಿದ್ದೇವೆ” ಎಂದು ಜಿಎಂ ಶುಗರ್ಸ್ ಕ್ಷೇತ್ರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಏಷ್ಯಾದ 2ನೇ ದೊಡ್ಡ ‘ಸೂಳೆಕೆರೆ’ ನೀರು ಕುಡಿಯಲು ಯೋಗ್ಯವಲ್ಲ
ವಿಎನ್‌ಪಿ ಶುಗರ್ ಕಂಪೆನಿಯ ಸಹಾಯಕರು ಈ ದಿನ.ಕಾಮ್‌ನೊಂದಿಗೆ ಮಾತಮಾಡಿ “ಹಾವೇರಿ ಭಾಗದಲ್ಲಿ ಈ ಬಾರಿ ಕಬ್ಬು ಇಳುವರಿ ಕಡಿಮೆಯಾಗಿದೆ. ವಿಎನ್‌ಪಿ ಶುಗರ್ಸ್ ಹೊಸ ಕಂಪನಿ. ಹಾಗಾಗಿ ಈ ಬಾರಿ ಎಷ್ಟು ಕಬ್ಬು ಬರುತ್ತದೆಂಬ ಅಂದಾಜಿಲ್ಲ. ಕಳೆದ ವರ್ಷ 5 ಲಕ್ಷ ಟನ್ ಕಬ್ಬು ಅರೆದಿದ್ದೆವು. ಈ ಬಾರಿ ನೋಡಬೇಕು” ಎಂದು ತಿಳಿಸಿದರು.
“ಕಬ್ಬು ಬೆಳೆಗಾರರಿಗೆ ನಾವು ನಮ್ಮ ಕಂಪೆನಿಗೇ ಕೊಡಿ ಎಂದು ಒತ್ತಾಯ ಮಾಡಲು ಆಗುವುದಿಲ್ಲ. ಅವರ ಬೆಳೆ ಅವರು ಎಲ್ಲಿಯಾದರೂ ಮಾರಾಟ ಮಾಡಿಕೊಳ್ಳುತ್ತಾರೆ. ನಮ್ಮ ಕಂಪೆನಿಗೆ ಬಂದ ಕಬ್ಬಿಗೆ ಸರ್ಕಾರದ ದರ ಏನಿದೆ ಅದರಂತೆ ನಿಗದಿಪಡಿಸಿ ಕೊಡುತ್ತೇವೆ” ಎಂದು ಹೇಳಿದರು.