ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿರುವುದು ನಮ್ಮ ಕಾಲೇಜಿನ ಹೆಮ್ಮೆ ಕಬ್ಬೂರು ಪಿಯು ಕಾಲೇಜು ಪ್ರಾಂಶುಪಾಲ ಎ ಆರ್ ಹಂಡೆ ಹೇಳಿದರು.
ಹಾವೇರಿ ತಾಲೂಕಿನ ಕಬ್ಬೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ನಡೆದ 2024-25ನೇ ಸಾಲಿನ ಕಾಲೇಜು ಸಂಸತ್ತು, ಕ್ರೀಡಾ-ಸಾಂಸ್ಕೃತಿಕ ಚಟುವಟಿಕೆ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ಹಾವೇರಿ ಜಿಲ್ಲೆಯ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉತ್ತಮ ಬುನಾದಿ ಹಾಕಲು ಗುಣಮಟ್ಟದ ಶಿಕ್ಷಣ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಉಪನ್ಯಾಸಕರು ಸತತ ಪ್ರಯತ್ನ ಮಾಡಿರುವುದರ ಫಲವಾಗಿ ನಮ್ಮ ಕಾಲೇಜಿಗೆ ಉತ್ತಮ ಫಲಿತಾಂಶ ಬಂದಿದೆ ಎಂದರು. ಸರ್ಕಾರಿ ಕಾಲೇಜುಗಳಲ್ಲಿಯೂ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸಲು ಎಲ್ಲರ ಸಹಕಾರದೊಂದಿಗೆ ಕರ್ತವ್ಯ ನಿರ್ವಹಿಸಬೇಕು” ಎಂದು ಹೇಳಿದರು.
ಕಾಲೇಜು ಸಂಸತ್ ಉದ್ಘಾಟನೆಯನ್ನು ಕಾಲೇಜು ಅಭಿವೃದ್ಧಿ ಸಮಿತಿ(ಸಿಡಿಸಿ) ಉಪಾಧ್ಯಕ್ಷ ನವೀನ್ ಬೆಳ್ಳಕ್ಕಿ ನೆರವೇರಿಸಿದರು. ಹಾಗೆಯೇ ಕಾಲೇಜು ಸಂಸತ್‌ಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಇತಿಹಾಸ ಉಪನ್ಯಾಸಕ ಜಿ ಎಚ್ ವಾಲ್ಮೀಕಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಭೋದಿಸುವ ಮೂಲಕ ಅದರ ಕರ್ತವ್ಯಗಳ ಬಗ್ಗೆ ಮನವರಿಕೆ ಮಾಡಿದರು.
ಮುಖ್ಯ ಅತಿಥಿ ಶ್ರೀ ಮಾರುತಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲ ರವಿಕುಮಾರ್ ಎಚ್ ಇ ಮಾತನಾಡಿ, “ವಿದ್ಯಾರ್ಥಿಗಳು ನಿರಂತರವಾಗಿ ಅಧ್ಯಯನ ನಡೆಸಿದಾಗ ಮಾತ್ರ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ. ಹಾಗೆಯೇ ಗುರು-ಶಿಷ್ಯರ ನಡುವಿನ ಸಂಬಂಧ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಇರಬೇಕು. ಇಂದಿನ ಮಕ್ಕಳೇ ಮುಂದಿನ ನಾಯಕರು. ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ನಾಯಕತ್ವ ಜವಾಬ್ದಾರಿ, ನಿರ್ವಹಣಾ ಸಾಮರ್ಥ್ಯ ಅಭಿವೃದ್ಧಿಪಡಿಸುವ ಗುಣಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಲು ಕಾಲೇಜು ಸಂಸತ್ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ” ಎಂದು ತಿಳಿಸಿದರು.
ಉಪನ್ಯಾಸಕ ಎಚ್ ಡಿ ಗಂಟೇರ ಮಾತನಾಡಿ, “ವಿದ್ಯಾರ್ಥಿಗಳ ನಿರಂತರ ಪರಿಶ್ರಮವೇ ವಿದ್ಯಾರ್ಥಿಗೆ ದಾರಿದೀಪವಾಗಬೇಕು. ಗ್ರಾಮ ಪಂಚಾಯಿತಿ ಅಧ್ಯಕ್ಷ ಕರಿಬಸಣ್ಣ ಗ್ರಾಮೀಣ ಪ್ರದೇಶದ ಪ್ರತಿಯೊಬ್ಬ ವಿದ್ಯಾರ್ಥಿಯು ಉನ್ನತವಾದ ಹುದ್ದೆಯನ್ನು ಅಲಂಕರಿಸಬೇಕು. ಅದನ್ನು ನಾವು ನಮ್ಮ ಊರಿನಲ್ಲಿ ನೋಡುವಂತಾಗಬೇಕು” ಎಂದು ಆಶಯ ವ್ಯಕ್ತಪಡಿಸಿದರು.
ಸನ್ಮಾನ: 2023-24ನೇ ಸಾಲಿನಲ್ಲಿ ಅತಿಹೆಚ್ಚು ಅಂಕಪಡೆದ ಕಾಲೇಜಿನ ವಿದ್ಯಾರ್ಥಿಗಳಾದ ನಿವೇದಿತ ಬಡಿಗೇರ್, ಸಿಂಧೂ ಬೆನಕನಹಳ್ಳಿ, ಭಾಗ್ಯಲಕ್ಷ್ಮಿ ಮಾತಾಣಗಿ ಇವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಕೆ ಆರ್ ಪೇಟೆಯಲ್ಲಿ ಕಳಪೆ ಕಾಮಗಾರಿ; ಎಇಯನ್ನು ತರಾಟೆಗೆ ತೆಗೆದುಕೊಂಡ ಮುಖಂಡರು
ಪ್ರಾಸ್ತಾವಿಕ ವಾಣಿಜ್ಯಶಾಸ್ತ್ರ ಉಪನ್ಯಾಸಕ ಎಫ್ ಎಮ್ ಅನ್ಸಾರಿ ಮಾತನಾಡಿ, 2024-25ನೇ ಸಾಲಿನ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ವರದಿ ಮಂಡಿಸಿದರು.
ರವಿ ಚಿನ್ನಿಕಟ್ಟಿ, ಹಜರತ್ ಅಲಿ, ಶಿವಕುಮಾರ, ಚಿನ್ನಪ್ಪ ಮಂಜಪ್ಪ, ಕಾಲೇಜಿನ ಉಪನ್ಯಾಸಕರುಗಳಾದ ಅಶೋಕ ಕಹಾರ, ಬೀರಪ್ಪ ಕುರುಬರ, ಆರ್ ಲಮಾಣಿ ಸೇರಿದಂತೆ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.