“ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕು ಚನ್ನರಾಯಪಟ್ಟಣ ಹೋಬಳಿ ಹದಿಮೂರು ಗ್ರಾಮಗಳ ಸುಮಾರು 1,777 ಎಕರೆ ಪೂರ್ಣ ಭೂ ಸ್ವಾಧೀನ ದಿಂದ ಕೈ ಬಿಡಬೇಕು ಎಂದು ಒತ್ತಾಯಿಸಿ, ಸಂಯುಕ್ತ ಹೋರಾಟ ಕರ್ನಾಟಕ ಹಾಗೂ ಚನ್ನರಾಯಪಟ್ಟಣ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿಯ ನೇತೃತ್ವದಲ್ಲಿ ದೇವನಹಳ್ಳಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರನ್ನು ದೌರ್ಜನ್ಯದಿಂದ ಬಂಧಿಸಿದ ರಾಜ್ಯ ಕಾಂಗ್ರೇಸ್ ಸರಕಾರದ ಪ್ರಜಾಪ್ರಭುತ್ವ ವಿರೋಧಿ ನಡೆಯನ್ನು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ರಾಜ್ಯ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ” ಎಂದು ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಹೇಳಿದರು.
ಹಾವೇರಿ ಪಟ್ಟಣದಲ್ಲಿ ಪತ್ರಿಕಾ ಹೇಳಿಕೆ ನೀಡಿದ ಅವರು “ಚನ್ನರಾಯಪಟ್ಟಣ ಹೋಬಳಿಯ ಭೂ ಸ್ವಾಧೀನವು ಕರಾಳ ಕೆಎಐಡಿಬಿ ಭೂ ಸ್ವಾಧೀನ ಪ್ರಕಾರ ನಡೆಸಲಾಗುತ್ತಿದೆ. ಈ ಅನ್ಯಾಯದ ಭೂ ಸ್ವಾಧೀನ ಕ್ರಮವು, ಭೂ ಸ್ವಾಧೀನ ಕಾಯ್ದೆ 2013 ರ ಕಾಯ್ದೆಗೆ ವಿರುದ್ದವಾಗಿದೆ. ಕರಾಳ ಕೆಎಐಡಿಬಿ ಭೂ ಸ್ವಾಧೀನ ಕಾಯ್ದೆ ಪ್ರಕಾರ ಹಿಂದಿನ ಬಿಜೆಪಿ ಸರ್ಕಾರ ರೈತರ ವಿರೋಧ ಧಿಕ್ಕರಿಸಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. ಇದನ್ನು ವಿರೋಧಿಸಿ ರೈತರು ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಅನಿರ್ದಿಷ್ಟವಾಧಿ ಹೋರಾಟ ನಡೆಸುತ್ತಾ ಬಂದಿದ್ದಾರೆ” ಎಂದರು.
“ಈ ಹಿಂದೆ ವಿರೋಧ ಪಕ್ಷದ ನಾಯಕರಾಗಿ ಧರಣಿ ಸ್ಥಳಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ತಾನು ಅಧಿಕಾರಕ್ಕೆ ಬಂದರೆ ಬಿಜೆಪಿ ಸರ್ಕಾರದ ಭೂ ಸ್ವಾಧೀನ ಪ್ರಕಟಣೆ ರದ್ದುಪಡಿಸುತ್ತೇವೆ ಎಂದು ಭರವಸೆ ನೀಡಿದ್ದರು. ತಮ್ಮ ಮಾತಿನಂತೆ ಭೂಸ್ವಾಧೀನ ಪ್ರಕ್ರಿಯೆ ರದ್ದುಪಡಿಸಿ ಸಿದ್ದರಾಮಯ್ಯ ಸರಕಾರ ಬದ್ಧತೆ ಮೆರೆಯಬೇಕಿತ್ತು. ಆದರೆ ಇದೀಗ ಭೂ ಸ್ವಾಧೀನಕ್ಕೆ ತಾವು ಕೊಟ್ಟ ಮಾತಿನಂತೆ ನಡೆದುಕೊಳ್ಳದೇ ವಚನ ಭ್ರಷ್ಟರಾಗುವ ಜೊತೆಯಲ್ಲಿ ಹಠಮಾರಿ ಧೋರಣೆ ಅನುಸರಿಸಿ, ಜನರನ್ನು ಒಡೆದಾಳುವ ಕುಟೀಲ ತಂತ್ರವನ್ನು ಅನುಸರಿಸುತ್ತಿರುವುದು ನಾಚಿಕೆಗೇಡಿನ ಸಂಗತಿ” ಎಂದರು.
“ಕುಟಿಲ ತಂತ್ರಗಳಿಂದ ಹಾಗೂ ಪ್ರತಿಭಟನಾಕಾರರನ್ನು ದೌರ್ಜನ್ಯದಿಂದ ಬಂಧಿಸುವುದರಿಂದ ರೈತ ಹೋರಾಟವನ್ನು ಬಗ್ಗು ಬಡಿಯಲು ಸಾಧ್ಯವಿಲ್ಲ ಎಂಬುದನ್ನು ರಾಜ್ಯ ಕಾಂಗ್ರೇಸ್ ಅರಿಯಬೇಕು. ರೈತರಿಗೆ ವಿದ್ರೋಹ ಬಗೆದ ಸರಕಾರಗಳು ಆಡಳಿತ ಕಳೆದುಕೊಂಡಿರುವ ಇತಿಹಾಸವನ್ನು ರಾಜ್ಯ ಸರಕಾರ ನೆನಪಿನಲ್ಲಿಟ್ಟುಕೊಳ್ಳಬೇಕಿದೆ” ಕಿಡಿಕಾರಿದರು.
“ಶೇಕಡಾ 90ಕ್ಕಿಂತ ಹೆಚ್ಚು ರೈತರು ವಿರೋಧಿಸುತ್ತಿರುವ ಈ ಅನ್ಯಾಯದ ಹಾಗೂ ಬಲವಂತದ ಭೂ ಸ್ವಾಧೀನ ಮಾಡಿಕೊಳ್ಳಲು ಯಾವುದೇ ಕಾರಣಕ್ಕೂ ರೈತರು ಅವಕಾಶ ನೀಡುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಚನ ಭ್ರಷ್ಠರಾಗದೇ ತಾವು ಕೊಟ್ಟ ಭರವಸೆಯಂತೆ ಈ ಭೂಸ್ವಾದೀನ ಪ್ರಕ್ರಿಯೆಯನ್ನು ರದ್ದುಪಡಿಸಬೇಕು” ಒತ್ತಾಯಿಸಿದರು.
“ಕೂಡಲೇ ರಾಜ್ಯ ಸರಕಾರ ಬಲವಂತವಾಗಿ ರೈತರಿಂದ ಭೂಮಿಯನ್ನು ವಶಪಡಿಸಿಕೊಳ್ಳುವುದನ್ನು ಕೈಬಿಡಬೇಕು ಹಾಗೂ ತಮ್ಮ ಭೂಮಿಯ ಉಳಿವಿಗಾಗಿ ಪ್ರಜಾಸತ್ತಾತ್ಮಕ ನೆಲೆಯಲ್ಲಿ ಪ್ರತಿಭಟಿಸುತ್ತಿರುವ ರೈತರು ಹಾಗೂ ಪ್ರತಿಭಟನಾಕಾರರನ್ನು ಬಂಧಿಸಿದ್ದು, ಕೂಡಲೇ ಬಂಧಿಸಿದ ಎಲ್ಲ ಪ್ರತಿಭಟನಾಕಾರರನ್ನು ಭೇಷರತ್ ಆಗಿ ಬಿಡುಗಡೆ ಮಾಡಬೇಕೆಂದು ಒತ್ತಾಯಿಸುತ್ತದೆ. ಇಲ್ಲವಾದಲ್ಲಿ ರಾಜ್ಯವ್ಯಾಪಿ ತೀವ್ರ ತೆರನಾದ ಹೋರಾಟವನ್ನು ನಡೆಸಬೇಕಾಗುತ್ತದೆ” ಎಂದು ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದರು.