“ಹಂಸಭಾವಿಯ ಪ್ರಾಥಮಿಕ ಆರೋಗ್ಯ ಕೇಂದ್ರವು ಹೋಬಳಿ ಮಟ್ಟದಿಂದ ಕೂಡಿದ್ದು ಅಕ್ಕಪಕ್ಕದ ಸುಮಾರು ಹಳ್ಳಿಗಳಿಂದ ಬರುವ ರೋಗಿಗಳು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ಬಂದರೆ ಚಿಕಿತ್ಸೆಗೆ ಸಂಬಂಧ ಪಟ್ಟ ಕೆಲವೊಂದು ವೈದ್ಯರು ಲಭ್ಯವಿರದೇ ಇರುವುದರಿಂದ ರೋಗಿಗಳು ಬೇರೆ ತಾಲ್ಲೂಕುಗಳಾದ ಶಿಕಾರಿಪುರ ಮತ್ತು ರಾಣೆಬೆನ್ನೂರಿಗೆ ಹೆಚ್ಚಿನ ಚಿಕಿತ್ಸೆಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಕರವೇ ಸ್ವಾಭಿಮಾನಿ ಬಣ ಜಿಲ್ಲಾಧ್ಯಕ್ಷ ಯಲ್ಲಪ್ಪ ಮರಾಠೆ ಹೇಳಿದರು.
ಹಾವೇರಿ ಜಿಲ್ಲೆಯ ಹಿರೇಕೆರೂರ ತಾಲ್ಲೂಕಿನ ಹಂಸಭಾವಿ ಹೋಬಳಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಖಾಲಿ ಇರುವ ವೈದ್ಯರು ಮತ್ತು ಇತರೆ ಸಿಬ್ಬಂದಿ ನೇಮಕಾತಿ ಮಾಡುವಂತೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ವತಿಯಿಂದ ಉಪತಹಶೀಲ್ದಾರರಿಗೆ ಮನವಿ ಸಲ್ಲಿಸಿ ಮಾತನಾಡಿದರು.
“ಪ್ರಾಥಮಿಕ ಅರೋಗ್ಯ ಆಸ್ಪತ್ರೆಯಲ್ಲಿ ಡಿ. ದರ್ಜೆ ನೌಕರರು ಮತ್ತು ಮೂಲ ಸೌಕರ್ಯದ ಕೊರತೆ ಇರುವುದರಿಂದ ಇಲ್ಲಿಗೆ ಬರುವ ಗರ್ಭಿಣಿಯರಿಗೆ, ಬಾಣಂತಿಯರಿಗೆ ಮತ್ತು ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿದೆ. ಹಾಗೂ ಆಸ್ಪತ್ರೆಯು ಸರ್ಕಾರದ ನಿಯಮದ ಪ್ರಕಾರ 24 ಗಂಟೆ ಕಾರ್ಯನಿರ್ವಹಿಸಬೇಕು. ಆದರೆ ಆಸ್ಪತ್ರೆಯಲ್ಲಿರುವ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಸಮಯ ಪಾಲನೆ ಮಾಡದೇ ತಮಗೆ ಮನ ಬಂದಂತೆ ಕರ್ತವ್ಯ ನಿರ್ವಹಿಸುತ್ತಾರೆ. ಹಾಗಾಗಿ ಕೂಡಲೇ ಈ ಮನವಿಯನ್ನು ಸಂಬಂಧ ಪಟ್ಟ ಅಧಿಕಾರಿಗಳಿಗೆ ರವಾನೆ ಮಾಡಬೇಕು. ಇಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ಬಗೆ ಹರಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಗದಗ | ಶಾಲೆಯ ಮೇಲ್ಛಾವಣಿ ಕುಸಿತ; ಶಿಕ್ಷಕ, ಮಕ್ಕಳಿಗೆ ಗಾಯ
“ಸಮಸ್ಯೆಗಳನ್ನು ಬಗೆಹರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಅಹೋರಾತ್ರಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಮನವಿ ಸಂದರ್ಭದಲ್ಲಿ ಕರವೇ ಸ್ವಾಭಿಮಾನಿ ಬಣ ಜಿಲ್ಲಾ ಉಪಾಧ್ಯಕ್ಷರು ಯೊಸುಫ್ ಸೈಕಲಗಾರ, ಮುಖಂಡರು ಖಲಂದರ್ ಎಲೆದಹಳ್ಳಿ, ಪ್ರಕಾಶ ಡಂಬರ, ದಾದಾಪೀರ ಮಲ್ಲಾಡದ, ಸಂಜೀವ ಜಕ್ಕೂರ, ಮಹ್ಮದ್ ಇಸ್ಮಾಯಿಲ್, ಸುನೀಲ್ ಬಳ್ಳಾರಿ, ಸುನೀಲ್ ಬ್ಯಾಡಗಿ, ದೇವರಾಜ್ ಇಳಗೇರ, ಸಾಹೀಲ್ ಬ್ಯಾಡಗಿ, ಪುಟ್ಟೇಶ ಇಳಗೇರ, ಸೈಜಾದ ಜಮಖಂಡಿ, ಮಾಲತೇಶ ಇಳಗೇರ, ಸಹಬಾಜ್ ಹಿತ್ತಲಮನಿ, ವಿನಾಯಕ ತಳವಾರ, ಆಜಂ ಎಲೆದಹಳ್ಳಿ, ಹನುಮಂತ ತಳವಾರ, ನವೀನ ತಳವಾರ ಇನ್ನೂ ಅನೇಕರು ಉಪಸ್ಥಿತರಿದ್ದರು,