“ಎಂ.ಇ.ಎಸ್ ಪದೆ ಪದೆ ಕನ್ನಡಿಗರನ್ನು ಕೆಣಕಿ ತಾಳ್ಮೆಯನ್ನು ಪರೀಕ್ಷಿಸಬೇಡಿ. ನಾವು ಕನ್ನಡಿಗರು ಮನಸ್ಸು ಮಾಡಿದರೆ ಅವರನ್ನು ಗಂಟು-ಮುಟೆ ಕಟ್ಟಿಕೊಂಡು ಮಹಾರಾಷ್ಟ್ರಕ್ಕೆ ಹೋಗುವವರೆಗೂ ಬೀಡುವುದಿಲ್ಲ. ರಾಜ್ಯ ಸರ್ಕಾರ ಗಡಿ ಭಾಗದ ಕನ್ನಡಿಗರ ಪರ ನಿಂತು ಎಂ.ಇ.ಎಸ್. ಗುಂಡಾಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್ ಓಲೇಕಾರ್ ಕಿಡಿಕಾರಿದರು.
ಹಾವೇರಿ ಪಟ್ಟಣದ ಜಿಲ್ಲಾಧಿಕಾರಿ ಕಛೇರಿ ಎದುರಿಗೆ ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆ ಸಂಘಟನೆ ವತಿಯಿಂದ ಬೆಳಗಾವಿಯ ಬಾಳೆಕುಂದ್ರಿಯಲ್ಲಿ ಕನ್ನಡದಲ್ಲಿ ಮಾತನಾಡು ಎಂದಿದ್ದಕ್ಕೆ ಬೆಲಗಾವಿ ಭಾಗದ ಮರಾಠಿಗರು ಬಸ್ ನಿರ್ವಾಹಕನ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಮಾತನಾಡಿದರು.
“ಮಹಾರಾಷ್ಟ್ರದಲ್ಲಿಯೂ ಲಕ್ಷಾಂತರ ಜನ ಕನ್ನಡಿಗರು ತಮ್ಮ ಬದುಕನ್ನು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದಾರೆ. ‘ನಮ್ಮ ಸಿಟ್ಟು ಅಲ್ಲಿಯ ಕನ್ನಡಿಗರ ಬದುಕನ್ನು ಕಸಿದುಕೊಳ್ಳಬಾರದು’ ಎಂಬ ಉದ್ದೇಶ ನಮ್ಮದಾಗಿದೆ. ಅಲ್ಲಿಯ ಕನ್ನಡಿಗರು ಅಲ್ಲಿಯ ಸಂಸ್ಕೃತಿಯನ್ನು ಒಪ್ಪಿಕೊಂಡು ಅಲ್ಲಿಯ ಭಾಷಾಯಾಭಿಮಾನಕ್ಕೆ ಬದ್ದರಾಗಿದ್ದಾರೆ. ಆದರೆ ಬೆಳಗಾವಿ ಭಾಗದ ಮರಾಠಿ ಪುಂಡರು ತಮ್ಮ ಬೇಳೆ ಬೇಯಿಸಿಕೊಳ್ಳಲು ಪದೆ ಪದೆ ನಮ್ಮ ಮೇಲೆ ಆಕ್ರಮಿಸುತ್ತಿದ್ದಾರೆ. ತಮ್ಮ ರಾಜಕೀಯ ತೆವಲಿಗೋಸ್ಕರ ಈ ಹಿಂದೆ ಮರಾಠಿಗರನ್ನು ಎತ್ತಿ ಕಟ್ಟುತ್ತಿದ್ದರು. ಅದನ್ನು ನಾವು ಕನ್ನಡಿಗರು ಬಗ್ಗು ಬಡೆದಿದ್ದೇವೆ” ಎಂದು ಹೇಳಿದರು.
“ಮಹಾರಾಷ್ಟ್ರದ ರಾಜಕಾರಣಿಗಳು ಬೆಳಗಾವಿ ಭಾಗವನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳುವ ಉದ್ದೇಶ ಹೊಂದಿರುವುದನ್ನು ಕೈಬೀಡಬೇಕು. ಇಲ್ಲಿರುವ ಮರಾಠಿಗರು ಮತ್ತು ಕನ್ನಡಿಗರು ಅಣ್ಣ-ತಮ್ಮಂದಿರಂತೆ ಬದುಕುವ ತಾವರಣ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಹಾಗೂ ರಾಜಕೀಯ ಪಕ್ಷಗಳು ಪ್ರಯತ್ನ ಮಾಡಬೇಕು. ಎಂದು ಹೇಳುದರು.
“ನಿನ್ನೆಯ ದಿನ ಸೊಲ್ಲಾಪುರದ ಸಾಥಾ ರಸ್ತೆಯಲ್ಲಿ ಶಿವಸೇನೆ ಪುಂಡರು ಕರ್ನಾಟಕದ ಬಸ್ಸನ್ನು ತಡೆದು ಚಾಲಕನಿಗೆ ಕೇಸರಿ ಬಣ್ಣ ಹಾಗೂ ಹೂವಿನ ಮಾಲೆ ಹಾಕಿ,ಅವನ ಬಾಯಿಯಿಂದ ಜೈ ಮಹಾರಾಷ್ಟ್ರ, ಜೈ ಶಿವಾಜಿ ಎಂದು ಘೋಷಣೆ ಕೂಗಿಸಿ ತಮ್ಮ ಉದ್ದಟತನವನ್ನು ಮೇರೆದಿದ್ದಾರೆ. ಅಲ್ಲದೇ ಬೆಳಗಾವಿ ಜಿಲ್ಲೆಯ ಖಾನಾಪುರ ನಗರದಲ್ಲಿ ಕನ್ನಡ ಪರ ಹೋರಾಟಗಾರನ ಮೇಲೆ ಹಲ್ಲೆ ಮಾಡಿದ್ದಾರೆ. ಇಷ್ಟೇಲ್ಲ ನಡೆದರು ಕರ್ನಾಟಕ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ನಾಚಿಕೆಗೇಡಿನ ಸಂಗತಿ” ಎಂದು ಟೀಕಿಸಿದರು.
ಈ ಸುದ್ದಿ ಓದಿದ್ದೀರಾ? ಗದಗ | ಮಾರ್ಚ್ 3ರಂದು ಫ್ರೀಡಂ ಪಾರ್ಕ್ನಲ್ಲಿ ಅಹೋರಾತ್ರಿ ಧರಣಿ
“ಕೂಡಲೇ ರಾಜ್ಯ ಸರ್ಕಾರ ಗಡಿ ಭಾಗದ ಕನ್ನಡಿಗರ ಪರ ನಿಂತು ಎಂ.ಇ.ಎಸ್. ಗುಂಡಾಗಳ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆ ಆಗ್ರಹಿಸುತ್ತವೆ” ಎಂದು ಮಂಜುನಾಥ ಓಲೇಕಾರ್ ಒತ್ತಾಯಿಸಿದರು.
ಮನವಿ ಸಂದರ್ಭದಲ್ಲಿ ಕರವೇ ಗಜಸೇನೆ ಕಾರ್ಯಕರ್ತರು ಉಪಸ್ಥಿತರಿದ್ದರು.
