ಕೋಲ್ಕತ್ತಾ ಕರ್ತವ್ಯನಿರತ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿ ಕ್ರೂರವಾಗಿ ಹತ್ಯೆ ಮಾಡಿರುವುದು ಖಂಡನೀಯ ಎಂದು ಎಸ್‌ಎಫ್‌ಐ ಹಾವೇರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ್ ಎಸ್ ಹೇಳಿದರು.
ಪಶ್ಚಿಮ ಬಂಗಾಳದ ಕೋಲ್ಕತ್ತಾ ಆರ್ ಜಿ ಕರ್ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯಲ್ಲಿ ಕರ್ತವ್ಯನಿರತ ವೈದ್ಯಕೀಯ ವಿದ್ಯಾರ್ಥಿನಿ ಮತ್ತು ಬಿಹಾರದ ಮುಜಾಫರ್‌ಪುರ ಜಿಲ್ಲೆಯಲ್ಲಿ 14 ವರ್ಷದ ದಲಿತ ಬಾಲಕಿಯನ್ನು ಅಪಹರಿಸಿ, ಸಾಮೂಹಿಕ ಆತ್ಯಾಚಾರ ಎಸಗಿ ಹತ್ಯೆ ಮಾಡಿರುವುದನ್ನು ಖಂಡಿಸಿ ಹಾಗೂ ಪ್ರತಿಭಟನಾ ನಿರತರ ಮೇಲಿನ ದಾಳಿ ಹಿಂಸಾತ್ಮಕ ಘಟನೆ ವಿರೋಧಿಸಿ ವಿದ್ಯಾರ್ಥಿನಿಯರಿಗೆ, ಮಹಿಳೆಯರಿಗೆ ಸೂಕ್ತ ರಕ್ಷಣೆಗಾಗಿ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್ಎಫ್ಐ) ಹಾವೇರಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದರು.
“ವೈದಕೀಯ ವಿದ್ಯಾರ್ಥಿನಿಯ ಸ್ವಂತ ಇಲಾಖೆಯಲ್ಲಿಯೇ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಯಿತು. ಬಹುಶಃ ಅವಳು ತನ್ನ ಸುರಕ್ಷಿತ ಸ್ಥಳವೆಂದು ಪರಿಗಣಿಸಿದ ಪಶ್ಚಿಮ ಬಂಗಾಳದ ಕೋಲ್ಕತ್ತಾದ ಪ್ರಮುಖ ಸರ್ಕಾರಿ ಸಂಸ್ಥೆಯಾಗಿರುವ ಆರ್ ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಈ ಘಟನೆ ನಡೆದಿರುವುದು ಘನಘೋರ ದುರಂತವಾಗಿದೆ” ಎಂದರು.
ಎಸ್ಎಫ್ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಎಸ್ ಮಾತನಾಡಿ, “ಸಿಸಿಟಿವಿ ಕ್ಯಾಮೆರಾಗಳಿಲ್ಲ, ಭದ್ರತಾ ಕ್ರಮಗಳಿಲ್ಲ ಮತ್ತು ಯಾರೂ ಹೊಣೆಗಾರರಾಗಿಲ್ಲ. ನಿರ್ಭಯಾ ಪ್ರಕರಣವನ್ನು ನೆನಪಿಸುವಂತಹ ಘೋರ ಅಪರಾಧ ಕೋಲ್ಕತ್ತಾದಲ್ಲಿ ಅಭೂತಪೂರ್ವವಾಗಿದೆ. ಆರಂಭದಲ್ಲಿ, ಘಟನೆಯನ್ನು ಆತ್ಮಹತ್ಯೆ ಎಂದು ತಪ್ಪುದಾರಿಗೆಳೆಯಲಾಯಿತು. ವಿದ್ಯಾರ್ಥಿಗಳ ಪ್ರತಿಭಟನೆಯ ನಂತರವೇ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಹೀಗಿದ್ದರೂ, ಆಡಳಿತಾರೂಢ ಟಿಎಂಸಿ ನಿಷ್ಠಾವಂತರು ಸಂತ್ರಸ್ತೆಯನ್ನು ನಾಚಿಕೆಯಿಲ್ಲದೆ ದೂಷಿಸುತ್ತಿದ್ದಾರೆ, ರಾತ್ರಿ ಸೆಮಿನಾರ್ ಹಾಲ್‌ನಲ್ಲಿ ಅಧ್ಯಯನ ಮಾಡುವುದು ಬೇಜವಾಬ್ದಾರಿಯಾಗಿದೆಯೆಂದು ಹೇಳಿದ್ದಾರೆ. ಆಡಳಿತ ಪಕ್ಷದ ಕೈಗೊಂಬೆಯಾಗಿರುವ ಪ್ರಾಂಶುಪಾಲ ಡಾ. ಸಂದೀಪ್ ಘೋಷ್ ಘಟನೆಯನ್ನು ಮುಚ್ಚಿಟ್ಟು ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕಿದ್ದು ಖಂಡನೀಯ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಕೊಲ್ಕತ್ತಾ ಪೊಲೀಸರು ಆರ್ ಜಿ ಕರ್ ಮೆಡಿಕಲ್ ಕಾಲೇಜಿನ ಮುಂದೆ ಎಸ್‌ಎಫ್‌ಐ/ಡಿವೈಎಫ್‌ಐ ಪ್ರತಿಭಟನಾಕಾರರು ಮತ್ತು ಪ್ರತಿಭಟನಾನಿರತ ವೈದ್ಯಕೀಯ ವಿದ್ಯಾರ್ಥಿಗಳ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿ ಲಾಠಿ ಚಾರ್ಜ್ ಮಾಡಿದ್ದಾರೆ. ಈ ದೌರ್ಜನ್ಯಗಳು ನಮ್ಮನ್ನು ತಡೆಯಲಾರವು. ಕೂಡಲೇ ತಪ್ಪಿತಸ್ಥ ಆರೋಪಗಳನ್ನು ಬಂಧಿಸಿ ಗಲ್ಲು ಶಿಕ್ಷೆ ವಿಧಿಸಬೇಕು” ಎಂದು ಆಗ್ರಹಿಸಿದರು.
ವೈದ್ಯಕೀಯ ವಿದ್ಯಾರ್ಥಿನಿ ಪ್ರೀತಿ ಎಂ ವೈ ಮಾತನಾಡಿ, “ಬೇಟಿ ಬಚಾವೋ, ಬೇಟಿ ಪಡಾವೋ ಎಂಬ ಹೆಸರು ‘ಹೆಣ್ಣು ಮಗುವನ್ನು ಉಳಿಸಿ, ಹೆಣ್ಣು ಮಗುವಿಗೆ ಶಿಕ್ಷಣ ನೀಡಿ’ ಎಂದು ಹೇಳುತ್ತಾರೆ. ಆದರೆ ಓದಿಸುವುದು ಅಷ್ಟೇ ಅಲ್ಲ ಕಾಪಾಡುವುದೂ ಕೂಡಾ ನಿಮ್ಮ ಜವಾಬ್ದಾರಿಯಾಗಬೇಕು. ನಿಮ್ಮ ಮನೆಯ ಹೆಣ್ಣಿನ ಸ್ಥಾನದಲ್ಲಿ ಎಲ್ಲರನ್ನೂ ನೋಡಬೇಕು. ತರಬೇತಿ ಪಡೆದು ಪರೀಕ್ಷೆ ಪಾಸಾಗಿ ಐದು ವರ್ಷಗಳ ಕಾಲ ಅಭ್ಯಾಸ ಮಾಡಿ ಸ್ನಾತಕೋತ್ತರ ಮಾಡುವವರೆಗೂ ಹಾಕಿರುವ ಶ್ರಮವು ಕಷ್ಟಕರವಾಗಿರುವಾಗ ಇಂತಹ ಅನ್ಯಾಯದಿಂದ ತಂದೆ ತಾಯಿಗಳಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಆರೋಪಿಗಳನ್ನು ಬಂಧಿಸಿ ವಿದ್ಯಾರ್ಥಿನಿಯರಿಗೆ ನ್ಯಾಯ ಒದಗಿ ಸೂಕ್ತ ರಕ್ಷಣೆ ನೀಡಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಬಿಎಸ್‌ವೈ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ಕಾಂಗ್ರೆಸ್ ಮುಖಂಡರು
ಈ ಸಂದರ್ಭದಲ್ಲಿ ಎಸ್ಎಫ್ಐ ಮುಖಂಡರಾದ ಸುಲೆಮಾನ್ ಮತ್ತಿಹಳ್ಳಿ, ವಿಜಯ ಶಿರಹಟ್ಟಿ, ಪರಶುರಾಮ ಎಂ, ವೈದ್ಯಕೀಯ ವಿದ್ಯಾರ್ಥಿಗಳಾದ ಆಕಾಶ್ ಬಳಗನೂರ, ಗೌತಮ್ ಎಸ್ ಎಂ, ತುಕಾರಾಮ್ ನಾಯಕ್, ಆಯುಷ್ ಕೆ, ವಿಕ್ಷೀತಾ ಸಿ, ಅಂಜಲಿ ಎಸ್, ಅನಿಕಿತಾ ಎಸ್ ಜಿ, ಕಿರ್ತಿ ಎನ್ ವಿ, ಮೋನಿಕಾ ಎಲ್, ತಶ್ಮಿಯಾ , ಅಭಿಷೇಕ ಬಿ, ಅಣ್ಣಪ್ಪ ಸ್ವಾಮಿ, ಸಂಜನ್ ಪಿ, ರಕ್ಷಿತಾ ಹೆಚ್, ಲಹರಿ ಎನ್, ತನುಜಾ ಹೆಚ್ ಸೇರಿದಂತೆ ನೂರಾರು ವಿದ್ಯಾರ್ಥಿಗಳು, ವೈದ್ಯರು, ಸಿಬ್ಬಂದಿಗಳು ಇದ್ದರು.