ರಟ್ಟಿಹಳ್ಳಿ ತಾಲೂಕಿನ ಚಿಕ್ಕಕಬ್ಬಾರ ಗ್ರಾಮದ ಜಾಮಿಯಾ ಮಸೀದಿ ಮತ್ತು ಹಜರತ್ ಮಹಬೂಬ್ ಸುಭಾನಿ ದರ್ಗಾದಲ್ಲಿ ಮುಸ್ಲಿಮರು ನಿತ್ಯ ಐದು ಬಾರಿ ಕನ್ನಡದಲ್ಲಿಯೇ ನಮಾಜ್ ಮಾಡುತ್ತಾರೆ. ಈ ಮೂಲಕ ಕನ್ನಡ ನಾಡು ನುಡಿಯ ಬಗ್ಗೆ ತಮ್ಮ ಪ್ರೀತಿ, ಗೌರವವನ್ನು ಅರ್ಪಿಸುತ್ತಿದ್ದಾರೆ. ಈ ಗ್ರಾಮದಲ್ಲಿ 450ಕ್ಕೂ ಹೆಚ್ಚು ಮುಸ್ಲಿಂ ಕುಟುಂಬಗಳಿವೆ. ಗ್ರಾಮದಲ್ಲಿ ಯುಗಾದಿ, ದೀಪಾವಳಿ, ಜಾತ್ರೆ, ಉತ್ಸವಗಳನ್ನು ಹಿಂದು-ಮುಸ್ಲಿಂ ಒಂದಾಗಿ ಆಚರಿಸುತ್ತಾರೆ.
ಗ್ರಾಮದ ವೀರನಗೌಡ ಪಾಟೀಲ್ ಅವರ ಕುಟುಂಬದ ಹಿರಿಯರು 150 ವರ್ಷಗಳ ಹಿಂದೆ, ಇಲ್ಲಿರುವ ಮುಸ್ಲಿಂ ಕುಟುಂಬಗಳ ಪ್ರಾರ್ಥನೆಗಾಗಿ ತಮ್ಮ ಮೂರುವರೆ ಗುಂಟೆ ಜಾಗವನ್ನು ದಾನವಾಗಿ ನೀಡಿದ್ದರು. ಅದೇ ಜಾಗದಲ್ಲಿ ಈ ಮಸೀದಿ ನಿರ್ಮಿಸಲಾಗಿದ್ದು, ಅಂದಿನಿಂದ ಇಂದಿನವರೆಗೂ ಇಲ್ಲಿ ನಿತ್ಯ ಕನ್ನಡದಲ್ಲಿಯೇ ನಮಾಜ್ ಪಠಿಸಲಾಗುತ್ತಿದೆ.
ಮಸೀದಿಯ ಹೊರಗೆ ಮತ್ತು ಒಳಗೆ ಕನ್ನಡದ ನಾಮಫಲಕಗಳನ್ನು ಹಾಕಲಾಗಿದೆ. ಇಲ್ಲಿ ಉರ್ದು ಶಾಲೆ ಇದ್ದರು ಮುಸ್ಲಿಂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಶಾಲೆಯಲ್ಲಿ ಓದುತ್ತಿದ್ದಾರೆ. ಈ ಹಳ್ಳಿಯ ಮುಸ್ಲಿಮರಿಗೆ ಅಷ್ಟಾಗಿ ಉರ್ದು ಮಾತನಾಡಲು ಬರುವುದಿಲ್ಲ. ಹೆಚ್ಚು ಮಂದಿ ಕೃಷಿ ಚಟುವಟಿಕೆಯನ್ನೇ ಅವಲಂಬಿಸಿದ್ದು, ಎಲ್ಲಾ ಮುಸ್ಲಿಮರು ಸ್ಪಷ್ಟ ಕನ್ನಡದಲ್ಲಿ ಮಾತನಾಡುತ್ತಾರೆ.
ಈ ಮಸೀದಿಯ ಮೌಲ್ವಿ ಮೌಲಾನ ಮಹಮ್ಮದ್ ಚಮನ್, ಇಲ್ಲಿ ಕಳೆದ ನಾಲ್ಕು ವರ್ಷಗಳಿಂದ ಮೌಲ್ವಿಯಾಗಿದ್ದಾರೆ. ಗ್ರಾಮದ ಮುಸ್ಲಿಮರ ಅಪೇಕ್ಷೆಯಂತೆ ನಿತ್ಯ ಕನ್ನಡದಲ್ಲಿ ನಮಾಜ್ ಮಾಡುತ್ತಾರೆ. ಅರೇಬಿಕ್ ಭಾಷೆಯಲ್ಲಿರುವ ಕುರಾನ್ ಅನ್ನು ಕನ್ನಡಕ್ಕೆ ಅನುವಾದಿಸಿ ಪಠಿಸುತ್ತಾರೆ. ಅಲ್ಲದೇ ಮಸೀದಿಗೆ ಬರುವ ಮುಸ್ಲಿಮರಿಗೆ ಬುದ್ಧ, ಬಸವಣ್ಣ, ಮಹಮದ್ ಪೈಗಂಬರರು ಬೋಧಿಸಿದ ತತ್ವ, ಆದರ್ಶಗಳನ್ನು, ಜೀವನ ಸಾರವನ್ನು ಕನ್ನಡದಲ್ಲಿ ತಿಳಿಸಿಕೊಡಲಾಗುತ್ತದೆ ಎನ್ನುತ್ತಾರೆ.
ಕರ್ನಾಟಕದ ಅನೇಕ ಊರುಗಳಲ್ಲಿ ಕನ್ನಡವನ್ನು ತಮ್ಮ ಬದುಕಿನ ಭಾಗದಂತೆ ಬಳಸುತ್ತಿದ್ದಾರೆ. ಅದರಲ್ಲಿ ರಟ್ಟಿಹಳ್ಳಿಯ ಮಸೀದಿಯೂ ಒಂದು. ಆ ಮಸೀದಿ ಮತ್ತು ಮುಸಲ್ಮಾನರ ಕನ್ನಡ ಕೊಡುಗೆ ಸ್ಮರಣಿಕೆಗೆ ಯೋಗ್ಯವಾದುದು. ಇದು ಎಲ್ಲರಿಗೂ ತಿಳಿಯಬೇಕಾದುದು.