“ನಾವ್ ಇಪ್ಪತ್ತೈದು ವರ್ಷದ ಮ್ಯಾಲ ಆತ್ರಿ.. ಮೊದ್ಲು ಅಶ್ವಿನಿ ಆಸ್ಪತ್ರಿ ಕಡೆ ಇದ್ವಿ, ಆಮ್ಯಾಗ್ ದಾನೇಶ್ವರಿ ನಗರದಲ್ಲಿದ್ವಿ, ಅಲ್ಲಿ ಎಲ್ಲಾ ಕಡೆ ಕಿತ್ತಿಸಿ, ಗೌರ್ಮೆಂಟನವರ್ ಬಂದ್ ಇಲ್ಲಿ ಜಾಗ ತೋರಿಸಿ ಇಲ್ಲಿರಿ ಅಂದ್ರು. ಇಲ್ಬಂದು ಇದಿವಿ. ಇಲ್ಲಿ ಹಾವು ಚೇಳು ಇದ್ವು. ನಮ್ಮ ಸಣ್ಣ ಸಣ್ಣ ಮಕ್ಳು ಇದ್ವು, ಅದರಲ್ಲಿ ಪ್ರಗ್ನೆಂಟ್ ಇದ್ದೋರು ಇದ್ರು, ನಮ್ಮ ಚಿಕ್ಕಪ್ಪನ ಮಗ ಹಾವು ಕಡಿದು ಸತ್ತ. ಒಂದ್ ಕರೆಂಟು ಇಲ್ಲ, ಕುಡಿಯಾಕ್ ನೀರಿಲ್ಲ, ನಮ್ಮ ಗೋಳ ಕೇಳೋರ್ ಒಬ್ರೂ ಇಲ್ದಂಗ್ ಆಗ್ಯಾರ. ಕರ್ನಾಟಕದಾಗ ನಾವ್ ಯಾಕ್ ಅದೀವಿ ಅನಸುತ್ತ. ಹಂಗ ನಮ್ಮ ಪರಿಸ್ಥಿತಿ ಐತ್ರಿ. ಗುಡುಸ್ಲು ಕೀಳ್ರಿ ನಿಮ್ಗ ಮನಿ ಕೊಡ್ತೀವಿ ಅಂದ್ರು, ಎಲ್ಲಿಗೆ ಹೋಗುದು ತಿಳಿದ, ಅವರನ್ನ ಇವರನ್ನ ಕೇಳಿ ಈ ಜಾಗದಾಗ್ ಗುಡಿಸ್ಲಾ ಹಾಕ್ಕೊಂಡು ಜೀವನ ನಡೀಸಾಕ್ಕಿಂತಿವಿ. ನನ್ನ ಗಂಡಗ ರಾತ್ರಿ ಹೊತ್ತು ಹೊಟ್ಟಿ ನೋವಾಕಿಂತು, ದವಾಖಾನಿಗೆ ಕರ್ಕೊಂಡು ಹೋಗಾಕ್ ಆಗ್ಲಿಲ್ಲ, ಸತ್ತೋದ. ಹಿಂಗ ಮೂರು ವರ್ಷ್ದಾಗ ನಮ್ಮನಿಲಿ ಆರ್ ಮಂದಿ ಸತ್ರು. ನಮ್ಗ ಮನಿ, ಬೆಳಕು, ಮಕ್ಕಳಿಗೆ ಶಿಕ್ಷಣ ಕೊಟ್ರ್ ಹ್ಯಾಂಗಾರ ಮಾಡಿ ಜೀವ ಉಳಿಸಿಕೊಳ್ತಿದ್ವಿ” ಹೀಗಂತ ನೋವು ತೋಡಿಕೊಂಡಿದ್ದು ಅಲೆಮಾರಿ ಸಮುದಾಯದ ಸಾವಿತ್ರಮ್ಮ ಫಕೀರಪ್ಪ ಬರಗಿ.
ಹಾವೇರಿ ಪಟ್ಟಣದ ಗಣಜೂರು ರಸ್ತೆಯಲ್ಲಿರುವ ಶಾಂತಿನಗರದಲ್ಲಿ ಇರುವ ಅಲೆಮಾರಿ ಸಮುದಾಯಗಳ ಪರಿಸ್ಥಿತಿ ನೋಡಿದವರ ಕರಳು ಚುರ್ ಎನ್ನದೇ ಇರಲು ಸಾಧ್ಯವಿಲ್ಲ.

ಸುಮಾರು ಐವತ್ತು ಅರವತ್ತು ವರ್ಷಗಳಿಂದ ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳು ಹಾವೇರಿ ಪಟ್ಟಣದ ಬೇರೆ ಬೇರೆ ಸ್ಥಳಗಳಲ್ಲಿ ನಿಟ್ಟುಸಿರು ಬಿಟ್ಟು ಇನ್ನೇನು ತಾತ್ಕಾಲಿಕ ಜೀವನ ಕಟ್ಟಿಕೊಳ್ಳುತ್ತಿದ್ದಂತೆ ಜಾಗ ಖಾಲಿ ಮಾಡಿಸಿ ಮತ್ತಿನ್ಯಾರೋ ಜಾಗ ಕೇಳಿ ಅಲ್ಲೊಂದಷ್ಟು ವರ್ಷ.. ಇಲ್ಲೊಂದಷ್ಟು ವರ್ಷ ಜೀವನ ಸಾಗಿಸ್ತಾ ನೆಲೆ ಕಾಣದ ಅಲೆಮಾರಿಗಳಗಿಯೇ ಉಳಿದುಬಿಟ್ಟಿದ್ದಾರೆ.
ಶಾಂತಿ ನಗರದಲ್ಲಿ ಮೂವತ್ತು ಗುಡಿಸಲುಗಳು, ಎರಡು ನೂರಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಹರಿದ ಸೀರೆ, ಪ್ಲಾಸ್ಟಿಕ್ ಹಾಳೆ, ತುಂಡು ತುಂಡು ಬಟ್ಟೆಗಳನ್ನೇ ಗುಡಿಸಲುಗಳಿಗೆ ಹೊದಿಕೆ ಹೊಚ್ಚಿ, ಬದುಕು ಕಟ್ಟಿಕೊಂಡಿದ್ದಾರೆ. ಒಂದೊಂದು ಗುಡಿಸಲಿನಲ್ಲಿ ಎರಡರಿಂದ ಮೂರು ಕುಟುಂಬಗಳು ವಾಸ ಮಾಡುತ್ತವೆ. ಇಲ್ಲಿರುವ ಅಲೆಮಾರಿ ಸಮುದಾಯಗಳಿಗೆ ಮೂಲ ಸೌಕರ್ಯಗಳು ಮರೀಚಿಕೆಯಾಗಿವೆ. ಇವರ ಕಷ್ಟ ಕೇಳೋಕೂ ಒಬ್ಬರಿಲ್ಲ.

ಈಗ ಶಾಂತಿ ನಗರದ ಸರ್ಕಾರಿ ಜಾಗದಲ್ಲಿ ಹದಿನೇಳು ವರ್ಷದಿಂದ ಇದ್ದರು. ಮೂರು ವರ್ಷಗಳ ಹಿಂದೆ ಈ ಜಾಗದಲ್ಲೇ ನಿಮಗೆ ಮನಿ ಕಟ್ಟಿಸಿ ಕೊಡಲಾಗುತ್ತೆ ಅನ್ನೋ ಇನ್ನೊಂದು ಭರವಸೆ ಕೊಟ್ಟು ಜಾಗ ಖಾಲಿ ಮಾಡಿಸಿದ್ರು. ಈ ಸುಡುಗಾಡು ಸಿದ್ದ ಸಮುದಾಯದ ಜನ ಗುಡಿಸಲು ಕಿತ್ತುಕೊಂಡು ಖಾಸಗಿ ಜಾಗದಲ್ಲಿ ಕಾಡಿಬೇಡಿಕೊಂಡು ಗುಡಿಸಲು ಕಟ್ಟಿಕೊಂಡಿದ್ದಾರೆ. ಹೇಗೂ ಕಣ್ಣ ಮುಂದೆಯೇ ಆಮೇಗತಿಯಲ್ಲಿ ಸಾಗುತ್ತಿರುವ ಮನೆಗಳ ಕಾಮಗಾರಿ ನೋಡುತ್ತಾ, ನಮಗೂ ಇಂದಲ್ಲ ನಾಳೆ ಮನೆ ಸಿಗುತ್ತೆ ಅನ್ನೋ ಕನಸು ಕಟ್ಟಿಕೊಂಡು ದಿನ ದೂಡುತ್ತಿದ್ದಾರೆ.
ಹೊಟ್ಟೆಪಾಡಿಗಾಗಿ ಕೂಲಿ ಕೆಲಸ, ಜೋಗ್ಯಾರ ಸಾಮಾನುಗಳನ್ನು ಊರು ಊರು ಸುತ್ತಿ ಮಾರಿ, ಜೀವನ ನಡೆಸುತ್ತಿದ್ದಾರೆ.
ಖಾಸಗಿ ಜಾಗದಲ್ಲಿರುವ ಗುಡಿಸಲುಗಳ ಸುತ್ತಲೂ ಕಸ ಕಡ್ಡಿಯದ್ದೇ ರಾಜ್ಯಭಾರ. ಸುತ್ತಲೂ ಜಾಲಿಕಂಟಿ ಬೆಳೆದಿದೆ. ಇದರಿಂದ ಹಾವು, ಮುಂಗುಸಿ, ಚೇಳು ತಮ್ಮದೇ ವಾಸಸ್ಥಾನ ಎನ್ನುವಂತೆ ಒಳ ಬರುತ್ತವೆ. ಹಾವು ಕಚ್ಚಿ ಸತ್ತಿರುವ ಉದಾಹರಣೆಗಳೂ ಇವೆ ಎಂದು ಆ ಅಲೆಮಾರಿ ಹೇಳುತ್ತಾರೆ. ಇದರಿಂದ ಇಲ್ಲಿಯ ಜನರು ಅನಾರೋಗ್ಯ, ಜೀವ ಭಯದಲ್ಲಿಯೇ ಬದುಕು ಸಾಗಿಸುತ್ತಿದ್ದಾರೆ. ಎಲ್ಲಿಂದ ವಿಷಜಂತು ಬರುತ್ತೋ.. ನಾವು ಯಾವಾಗ ಸಾಯ್ತೀವೋ ಅನ್ನೋ ಭಯದಲ್ಲೇ ಅರ್ಧ ಆಯಸ್ಸು ಕಳೆದಿದ್ದಾರೆ.
ಮಳೆಗಾಲದಲ್ಲಿ ಈ ಸಮುದಾಯದ ಜನರ ಕಷ್ಟ ಹೇಳತೀರದು. ಹರಿದ ಸೀರೆ, ಪ್ಲಾಸ್ಟಿಕ್ ಹಾಳೆಯಿಂದ ಹೊದಿಸಿದ ಗುಡಿಸಲುಗಳು ಮಳೆಯಿಂದ ಸೋರಿ ಗುಡಿಸಲು ತುಂಬೆಲ್ಲ ನೀರು ನಿಂತಿರುತ್ತದೆ. ಮಳೆಗಾಲ ಮುಗಿಯುವವರೆಗೂ ಅರೆಬರೆ ನಿದ್ದೆ ಮಾಡಿ, ಅರ್ಧ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ.

ಇನ್ನು ಕುಡಿಯುವ ನೀರಿನ ವ್ಯವಸ್ಥೆ ಅಯೋಮಯ. ಗುಡಿಸಲಲ್ಲಿ ವಾಸಿಸುವ ಜನರಿಗೆ ಕುಡಿಯಲ್ಲಿಕ್ಕೂ ಸರಿಯಾಗಿ ನೀರು ಸಿಗುತ್ತಿಲ್ಲ ಅಂದರೆ ಎಂಥವರೂ ನಂಬಲೇಬೇಕು. ಅವರು ಇವರನ್ನು ಬೇಡಿ, ಕೊಡಗಳಲ್ಲಿ ನೀರು ತುಂಬಿಸಿಕೊಳ್ಳಬೇಕು. ಅವರು ಇಲ್ಲ ಅಂದ್ರೆ ದಿನನಿತ್ಯ ನಾಗೇಂದ್ರಮಟ್ಟಿ ಗ್ರಾಮಕ್ಕೆ ಎರಡು ಮೂರು ಕಿಮೀ ನಡೆದುಕೊಂಡು ಹೋಗಿ ನೀರು ತುಂಬಿಸಿ ಹೊತ್ತಿಕೊಂಡು ಬರಬೇಕು. ಬಿಸಿಲು, ಮಳೆ ಎಂದರೆ ಕುಡಿಯೋಕೆ ನೀರಿರುವುದಿಲ್ಲ.
ಅಲ್ಲಿನ ಬಹುತೇಕ ಕುಟುಂಬದ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ, ವಂಚಿತರಾಗುತ್ತಿದ್ದಾರೆ. ಜೀವನ ನಿರ್ವಹಣೆ ಕಷ್ಟವಾದಂತೆ ಬೇರೆ ದಾರಿ ಕಾಣದೆ ಪೋಷಕರು ಮಕ್ಕಳನ್ನು ಅರ್ಧಕ್ಕೆ ಶಾಲೆ ಬಿಡಿಸಿ ದುಡಿಯಲು ಕಳಿಸುತ್ತಾರೆ. ಪವಾಡವೆಂಬಂತೆ ಬೆರಳೆಣಿಕೆಯಷ್ಟು ಮಕ್ಕಳು ಪಿಯುಸಿ, ಡಿಗ್ರಿ ಓದುವವರು ಸಿಗುತ್ತಾರೆ ಅಷ್ಟೆ. ಉಳಿದ ಮಕ್ಕಳು ಶಿಕ್ಷಣ ವಂಚಿತರಾಗುತ್ತಿದ್ದಾರೆ.
ಈದಿನ.ಕಾಮ್ ನೊಂದಿಗೆ ಸಾವಿತ್ರಮ್ಮ ಬರಗಿ ಮಾತನಾಡಿ, “ಇರಾಕ್ ಮನಿಯಿಲ್ಲ. ಕರೆಂಟ್ ಇಲ್ಲ. ಕಸ ಕಂಟಿ ನಡುವೆ ಗುಡಿಸಲಾಕ್ಕೊಂಡು ಅದೀವಿ. ಕುಡಿಯಾಕ್ ನೀರಿಲ್ಲ, ಮೂರು ವರ್ಷದಿಂದ ಮನಿ ಕಟ್ಟುತ್ತಿದ್ದಾರೆ. ಯಾವಾಗ ಮುಗಿಸ್ತಾರೋ, ನಮಗ ಮನಿ ಯಾವಾಗ್ ಕೊಡ್ತಾರೋ ಗೊತ್ತಿಲ್ಲ. ಇಷ್ಟು ಸಮಸ್ಯೆ ಅದಾವ್ ರೀ.. ನಮಗ ಇರಾಕ್ ಒಂದ್ ನೆಳ್, ಕುಡಿಯಾಕ್ ನೀರು, ಬೆಳಕು, ನಮ್ಮಕ್ಕಳಿಗೆ ಶಿಕ್ಷಣ ಕೊಟ್ರ್ ಸಾಕು.. ” ಎಂದರು.
ಸುಡುಗಾಡು ಸಿದ್ದ ಸಮುದಾಯದ ಫಕೀರಪ್ಪ ಬಾಡಗಿ ಮಾತನಾಡಿ, “ನಮ್ಮ ಗುಡಿಸಲ ಕೀಳಿಸಿ, ಮನಿ ಕೊಡ್ತಿವಿ ಅಂತ ಹೇಳಿ, ಮನಿ ಕಟ್ಟಿಸಾಕಿಂತರ.. ಯಾವಾಗ ಕೊಡತಾರೋ ಗೊತ್ತಿಲ್ಲ. ಇಷ್ಟಿಷ್ಟ ರೊಕ್ಕಾ ಕೊಡ್ಬೇಕು ಅಂತ ಹೇಳಿದ್ರು. ನಮಗೆಲ್ಲಿ ರೊಕ್ಕಾ ಕೊಡಾಕ ಆಗತ್ರಿ. ಲಮಾಣಿ ಸಾಹೇಬ್ರು ಎಲ್ಲ ಅನುಕೂಲ ಮಾಡಿ ಕೊಡ್ತಿವಿ ಅಂತ ಹೇಳ್ಯಾರ, ನಮಗ್ ಮನಿ ಕೊಟ್ರ್ ಸಾಕು. ಹ್ಯಾಂಗರ್ ನೆಳ್ಳಾಗ ಬದುಕ್ತಿವಿ” ಎಂದು ಹೇಳಿದರು.

ಸಾಮಾಜಿಕ ಹೋರಾಟಗಾರ ಕರಿಬಸಪ್ಪ ಮಾತನಾಡಿ, “ಹಾವೇರಿ ಪಟ್ಟಣದಲ್ಲಿ ಐವತ್ತು ಅರವತ್ತು ವರ್ಷಗಳಿಂದ ವಾಸ ಮಾಡುತ್ತಿರುವ ಅಲೆಮಾರಿ ಸಮುದಾಯದ ಜನರಿಗೆ ಮೂಲ ಸೌಲಭ್ಯಗಳಿಲ್ಲ. ಗೌರವಯುತವಾಗಿ ಬದುಕಲು ಮನೆ ಇಲ್ಲ. ರಸ್ತೆ ಇಲ್ಲ. ಕುಡಿಯೋಕೆ ನೀರು ಇಲ್ಲ. ಮಕ್ಕಳಿಗೆ ಶಿಕ್ಷಣ ಇಲ್ಲ. ಇದು ಅನ್ಯಾಯ. ಸರ್ಕಾರ ಕೂಡಲೇ ಎಚ್ಚೆತ್ತು ಶಾಶ್ವತ ಮನೆ, ಮೂಲ ಸೌಲಭ್ಯಗಳನ್ನು ಒದಗಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ?: ಹಾವೇರಿ | ರಾಜ್ಯ ಸರಕಾರ ಹಾವೇರಿ ವಿಶ್ವವಿದ್ಯಾಲಯ ಮುಚ್ಚುವ ತೀರ್ಮಾನ ರದ್ದುಗೊಳಿಸಲು ಎಸ್ಎಫ್ಐ, ಡಿವೈಎಫ್ಐ ಆಗ್ರಹ
ಅಲೆಮಾರಿ-ಅರೆ ಅಲೆಮಾರಿ ಸಮುದಾಯಗಳ ಜನರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಸಬಲರಾಗಿ ಗೌರವಯುತ ಬದುಕನ್ನು ಸಾಗಿಸಲು ಇಂದಿಗೂ ಕಷ್ಟಪಡುತ್ತಿದ್ದಾರೆ. ಇವರ ಏಳ್ಗೆಗಾಗಿ ಸರ್ಕಾರ ಅಲೆಮಾರಿ, ಅರೆ ಅಲೆಮಾರಿ ಮಂಡಳಿ ನಿರ್ಮಾಣ ಮಾಡಿದ್ದು ಹೆಸರಿಗಷ್ಟೇ ಸೀಮಿತವಾಗಿದೆ. ಈಗಲಾದರೂ ಸರ್ಕಾರ, ಮಂಡಳಿ ಎಚ್ಚೆತ್ತು ಬಡಪಾಯಿ ಅಲೆಮಾರಿ ಸಮುದಾಯದ ಜನರಿಗೆ ಮೂಲ ಸೌಲಭ್ಯಗಳನ್ನು ಒದಗಿಸುತ್ತವೆಯೇ ಕಾದು ನೋಡಬೇಕು.

ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.