ಬೇಸಿಗೆ ಕಾಲದಲ್ಲಿ ಅಂದ ಕಳೆದುಕೊಂಡ ಶಾಲೆಗೆ ಚಂದದ ಬಣ್ಣದ ಶೃಂಗಾರ ಲೇಪನ ಕಾರ್ಯ ಬರದಿಂದ ಸಾಗಿದೆ. ಇನ್ನೇನು ಇದೇ ತಿಂಗಳು ಮೇ 29ರಿಂದ ಸರ್ಕಾರಿ ಕನ್ನಡ ಶಾಲೆಗಳು ಪ್ರಾರಂಭಗೊಳ್ಳಲಿವೆ. ವಿದ್ಯಾರ್ಥಿಗಳು ರಜೆ ಮುಗಿಸಿ ಶಾಲೆಗೆ ಬಂದರೆ ಅಚ್ಚರಿ ಪಡಿಸಲು ಎನ್‌ಎಸ್‌ಎಸ್ ಶಿಬಿರಾರ್ಥಿಗಳು ಶಾಲೆಗೆ ಹೊಸ ಬಣ್ಣ ಬಳಿಯುವ ಕೆಲಸ ಭರದಿಂದ ಸಾಗಿದೆ.
ಹಾವೇರಿ ಪಟ್ಟಣದ ಗುದ್ಲೆಪ್ಪ ಹಳ್ಳಿಕೇರಿ (ಜಿಎಚ್) ಕಾಲೇಜಿನಲ್ಲಿ ಪದವಿ ಓದುತ್ತಿರುವ ವಿದ್ಯಾರ್ಥಿಗಳು, ಎನ್ಎಸ್ಎಸ್ ಯೋಜನೆಯ ಅಡಿಯಲ್ಲಿ ಸರ್ಕಾರಿ ಶಾಲೆಗಳಿಗೆ ಬಣ್ಣ ಹಚ್ಚುತ್ತಿದ್ದಾರೆ.
ಹಾವೇರಿ ತಾಲೂಕಿನ ತೋಟದಯಲ್ಲಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೀಡು ಬಿಟ್ಟಿರುವ ಎನ್ಎಸ್ಎಸ್ ಶಿಬಿರಾರ್ಥಿಗಳು ಶಾಲೆಯ ಹೊರಗಿನ ಗೋಡೆಗೆ ಬಣ್ಣ ಹಚ್ಚುತ್ತಿದ್ದಾರೆ. ಅಂದ ಕಳೆದುಕೊಂಡ ಬಣ್ಣವನ್ನು ಸ್ವಚ್ಛಗೊಳಿಸಿ, ಶಾಲೆ ಆರಂಭವಾಗುವ ಮುಂಚೆ ಶಿಬಿರಾರ್ಥಿಗಳು ಶಾಲೆಯ ಗೋಡೆಗೆ ಹೊಸಬಣ್ಣ ಬಳಿಯುತ್ತಿರುವ ಕಾರ್ಯ ನಡೆದಿದೆ.

ಶಾಲೆಗಳು ಇಂದಿನಿಂದ(ಮೇ 29) ಆರಂಭಗೊಳ್ಳಲಿದ್ದು, ವಿದ್ಯಾರ್ಥಿಗಳು ಅಂದ ಕಳೆದುಕೊಂಡ, ಬಣ್ಣ ಮಾಸಿದ ಗೋಡೆಯ ಶಾಲೆಗೆ ವಿದ್ಯಾರ್ಥಿಗಳು ಪ್ರವೇಶಿಸಲು ಸೂಕ್ತ ಅಲ್ಲದಿರುವುದರಿಂದ ಶಾಲೆಯ ಅಭಿವೃದ್ಧಿ ಮಂಡಳಿಯ ಸದಸ್ಯರು, ಶಿಕ್ಷಕರು ಚರ್ಚೆ ಮಾಡುತ್ತಿದ್ದಾರೆ. ಇವರೆಲ್ಲರ ಸಹಕಾರದಿಂದ ಎನ್ಎಸ್ಎಸ್ ಭಾಗವಾಗಿ ಶಾಲೆಗೆ ಸುಣ್ಣ-ಬಣ್ಣ ಬಳಿಯುವ ಕೆಲಸ ನಡೆದಿದೆ.

ರಾಷ್ಟೀಯ ಸೇವಾ ಯೋಜನೆ(ಎನ್‌ಎಸ್‌ಎಸ್)ಯ ಭಾಗವಾಗಿ “ಕನ್ನಡ ಶಾಲೆಗಳಗೆ ಬಣ್ಣ” ಶೀರ್ಷಿಕೆ ಅಡಿಯಲ್ಲಿ ಈಗಾಗಲೇ ಮೂರು ಸರ್ಕಾರಿ ಶಾಲೆಗಳು ಹಾವೇರಿ ಪಟ್ಟಣದ ಮುನ್ಸಿಪಲ್ ಶಾಲೆ, ಕಳ್ಳಿಹಾಳ, ತೇವರಮೆಳ್ಳಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಮಾಸಿದ ಗೋಡೆಗಳಿಗೆ ಬಣ್ಣ ಬಳಿಯಲಾಗಿದೆ. ನಾಲ್ಕನೆಯದಾಗಿ ತೋಟದಯಲ್ಲಾಪುರ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ಗೋಡೆಗೂ ಬಣ್ಣ ಬಲಿಯಾಲಾಗುತ್ತಿದೆ.

ಶಾಲೆಗೆ ಬಣ್ಣ ಬಳಿಯಲು ಹದಿನೆಂಟು ಸಾವಿರ ವೆಚ್ಚ
“ಒಂದು ಶಾಲೆಗೆ ಬಣ್ಣ ಬಳಿಯಲು ಸುಮಾರು ಹದಿನೆಂಟು ಸಾವಿರ ರೂಪಾಯಿ ವೆಚ್ಚ ಆಗಲಿದೆ. ಇದನ್ನು ನಿರ್ವಹಿಸಲು ಎನ್ಎಸ್ಎಸ್ ಯೋಜನೆಯಿಂದ ಪ್ರತಿ ತಿಂಗಳು ಆರು ಸಾವಿರ ಗೌರವ ಧನ ನೀಡುತ್ತಾರೆ. ಹಾಗೆಯೇ ದಾನಿಗಳು, ಶಿಕ್ಷಕರ ಸಹಾಯಧನವನ್ನು ಕನ್ನಡ ಶಾಲೆಗಳಿಗೆ ಬಣ್ಣ ಹಚ್ಚಲು ಬಳಸಿಕೊಳ್ಳುತ್ತೇವೆ” ಎಂದು ಎನ್‌ಎಸ್‌ಎಸ್ ಸಂಯೋಜಕರು ತಿಳಿಸಿದರು.

ವಾರ್ಲಿ ಚಿತ್ರ ಕಲೆಗಳು : ವಿದ್ಯಾರ್ಥಿಗಳನ್ನು ಆಕರ್ಷಿಸಲು ಗೋಡೆಯ ಮೇಲೆ ವಾರ್ಲಿ ಚಿತ್ರಗಳನ್ನು ಬಿಡಿಸಲಾಗುತ್ತದೆ. ಜಾನಪದ ಸಾಂಸ್ಕೃತಿಕತೆಯನ್ನು ಪ್ರತಿಬಿಂಬಿಸುವ ಚಿತ್ರಗಳನ್ನು ಬರೆಯಲಿದ್ದಾರೆ. ಹಾಗೆ ರೇಖಾಚಿತ್ರಗಳು ಗೋಡೆಯ ಮೇಲೆ ಮೂಡಲಿವೆ.
“ರಾಷ್ಟೀಯ ಸೇವಾ ಯೋಜನೆಯ(ಎನ್ಎಸ್ಎಸ್) ಮೂಲಕ ಸಾಮಾಜಮುಖಿ ಕಾರ್ಯವನ್ನು ಹೇಗೆಲ್ಲ ಮಾಡಲು ಸಾಧ್ಯ ಎಂಬುದರ ಆಲೋಚನೆಯಲ್ಲಿ ನಾವು ಕನ್ನಡ ಶಾಲೆಗಳ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಶಾಲೆಯ ಅಂದ ಚಂದವು ಮಹತ್ವದ್ದಾಗಿರುತ್ತದೆ. ಹಾಗಾಗಿ ಕನ್ನಡ ಶಾಲೆಗಳ ಮಾಸಿದ ಗೋಡೆಗಳಿಗೆ ಎನ್ಎಸ್ಎಸ್ ಮೂಲಕ ಕಾಲೇಜಿನ ವಿದ್ಯಾರ್ಥಿಗಳು ಶಿಬಿರಾರ್ಥಿಗಳಾಗಿ ಶಾಲೆಗೆ ಬಣ್ಣ ಬಳಿಯುವ ಕಾರ್ಯ ಮಾಡುತ್ತಿದ್ದಾರೆ” ಎನ್ನುತ್ತಾರೆ ಎನ್ಎಸ್ಎಸ್ ಯೋಜನಾ ಅಧಿಕಾರಿ.
ಇದನ್ನೂ ಓದಿದ್ದೀರಾ? ಬೀದರ್ | ಬಸವತತ್ವಕ್ಕೆ ಬದ್ಧರಾಗಿ ಬದುಕೋಣ : ಶಶಿಕಾಂತ ಶೆಂಬೆಳ್ಳಿ
ಈ ಕುರಿತು ಎನ್‌ಎಸ್‌ಎಸ್ ಯೋಜನಾ ಅಧಿಕಾರಿ ಡಾ. ಶಮಂತಕುಮಾರ್ ಕೆ ಎಸ್ ಈ ದಿನ.ಕಾಮ್ ಜತೆಗೆ ಮಾತನಾಡಿ, “ಖಾಸಗಿ ಶಾಲೆಗಳಿಗಿಂತ ಕನ್ನಡ ಶಾಲೆಗಳು ಮಕ್ಕಳನ್ನು ಆಕರ್ಷಿಸುವ ಉದ್ದೇಶದಿಂದ ಕನ್ನಡ ಶಾಲೆಗಳಿಗೆ ಬಣ್ಣ ಬಳಿದು ಅಂದ ಹೆಚ್ಚಿಸುತ್ತಿದ್ದೇವೆ” ಎನ್ನುತ್ತಾರೆ.

ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.