ಸಮಾಜದಲ್ಲಿ ಭಾರತ ರತ್ನ ಡಾ. ಬಿ ಆರ್ ಅಂಬೇಡ್ಕರ್ ಅಂತಹ ದೊಡ್ಡ ವ್ಯಕ್ತಿಗಳ ಸಾಲಿಗೆ ನಿಲ್ಲಲು ಜ್ಞಾನ, ಜಾಣ್ಮೆ, ತಾಳ್ಮೆ, ಬುದ್ಧಿವಂತಿಕೆ ಹಾಗೂ ಶಿಕ್ಷಣ ಎಂಬ ಪಂಚ ಜ್ಞಾನಗಳ ಅರ್ಜನೆ ಬಹಳ ಮುಖ್ಯ ಎಂದು ಹಾವೇರಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅನ್ನಪೂರ್ಣ ಸಂಗಳದ ಅಭಿಪ್ರಾಯಪಟ್ಟರು.
ಹಾವೇರಿ ನಗರದ ಶ್ರೀಶಕ್ತಿ ತೆರೆದ ತಂಗುದಾಣದಲ್ಲಿ ಏರ್ಪಡಿಸಿದ್ದ 75ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, “ಜ್ಞಾನಾರ್ಜನೆಗೆ ತ್ಯಾಗ ಮಾಡಬೇಕು. ಆಶ್ರಮಗಳಲ್ಲಿ ಕಲಿತು ಉನ್ನತ ಹುದ್ದೆಗಳನ್ನು ಪಡೆದುಕೊಳ್ಳಬೇಕು. ಉನ್ನತ ಭವಿಷ್ಯ ರೂಪಿಸಿಕೊಳ್ಳಬೇಕು” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯ ಮಹಾಂತೇಶ್ ಮೂಲಿಮನಿ ಮಾತನಾಡಿ, “ಜೀವನದಲ್ಲಿ ಯಶಸ್ಸು ಕಾಣಲು ಪ್ರತಿಯೊಬ್ಬರು ಮಹಾತ್ಮ ಗಾಂಧೀಜಿ ಅವರಂತೆ ಸತ್ಯದ ಮಾರ್ಗದಲ್ಲಿ ನಡೆಯಬೇಕು. ಸದಾಕಾಲವೂ ನಿಮ್ಮ ಜೀವನ ಹಸನ್ಮುಖವಾಗಿರಲಿ, ಭವಿಷ್ಯದಲ್ಲಿ ಉನ್ನತ ಮಟ್ಟಕ್ಕೆ ಸಾಗುವಂತಾಗಲಿ” ಎಂದು ಶುಭ ಹಾರೈಸಿದರು.

ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಮಾತನಾಡಿ, “ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನೇತೃತ್ವದ ಸಂವಿಧಾನವು ನೀಡಿರುವ ಮಕ್ಕಳ ಹಕ್ಕುಗಳನ್ನು ಕಾಪಾಡಿಕೊಳ್ಳಬೇಕು. ಶಿಕ್ಷಣ, ಉದ್ಯೋಗಗಳು ಮೂಲಭೂತ ಹಕ್ಕಾಗಬೇಕು. ಶಿಕ್ಷಣ ಎಂಬುದು ಹುಲಿಯ ಹಾಲಿದ್ದಂತೆ. ಅದನ್ನು ಕುಡಿದವರು ಘರ್ಜಿಸಲೇಬೇಕು ಎಂದು ಹೇಳಿದ ಅಂಬೇಡ್ಕರ್ ಅವರ ಈ ಸಂದೇಶವನ್ನು ಅಳವಡಿಸಕೊಳ್ಳಬೇಕು. ಶಿಕ್ಷಣ ಹಕ್ಕು ಕಾಯಿದೆ ( Right To Education 2009) ಸಮರ್ಪಕವಾಗಿ ಜಾರಿಯಾಗಬೇಕು. ಶಿಕ್ಷಣದಿಂದ ವಂಚಿತರಾದ ಮಕ್ಕಳಿಗೆ ಉಚಿತ ಶಿಕ್ಷಣ, ಸಮಾನಾಂತರ ಶಿಕ್ಷಣ ಸಿಗಬೇಕು. ಆ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸಂವಿಧಾನ ಆಶಯಗಳನ್ನು ಈಡೇರಿಸಲು ಮುಂದಾಗಬೇಕು” ಎಂದು ಒತ್ತಾಯಿಸಿದರು.
ತಂಗುದಾಣದ ವಿದ್ಯಾರ್ಥಿಗಳಿಂದ ಅಂಬೇಡ್ಕರ್ ಅವರ ಜೀವನ ಚರಿತ್ರೆ ಹಾಡುಗಳನ್ನು ಹಾಗೂ ದೇಶ, ಕನ್ನಡಾಭಿಮಾನದ ವಿವಿಧ ನೃತ್ಯ, ನಾಟಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಈ ಸುದ್ದಿ ಓದಿದ್ದೀರಾ?: ಹಾವೇರಿ | ವಿದ್ಯಾರ್ಥಿನಿಗೆ ಅಸ್ಪೃಶ್ಯತೆ ಆಚರಣೆ: ತಪ್ಪಿತಸ್ತರಿಗೆ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯ
ಕಾರ್ಯಕ್ರಮದಲ್ಲಿ ಮಹೇಶ್ ಹೆಡಿಯಾಲ್, ಸಂಸ್ಥೆಯ ಸಿಬ್ಬಂದಿ ಪಾರ್ವತಿ ಎಲ್, ಲಕ್ಷ್ಮಿ ಸಿಂಗಣ್ಣನವರ, ದೀಪಾ ಪಿ ಹೆಚ್, ಉಮಾ ವಾಯ ಹೆಚ್, ಪವಿತ್ರಾ ವಿ ವಿ, ವಿದ್ಯಾರ್ಥಿಗಳಾದ ರಾಜು ಕುಂಚಿಕೊರವರ, ಗಣೇಶ ಕುರಿ, ಅಣ್ಣಪ್ಪ ಹುಲ್ಮನಿ, ಆಕಾಶ ಕೆ, ಲಿಂಗರಾಜ ಗುಡ್ಡದಮತ್ತಿಹಳ್ಳಿ, ಮನೋಜ್ ಯರೇಶಿಮಿ, ಚಂದ್ರು ಜಾಡರ, ವಿನಾಯಕ ಮಾನ್ವಿ, ಶಿವಪ್ಪ ದುರಮುರುಗಿ, ರಾಜೇಶ್ ಬಾದಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
