ಹಾವೇರಿಯಲ್ಲಿ ಸಂಚಾರಿ ಕ್ಯಾಂಟೀನ್‌ಗಳು ಹೆಚ್ಚಾಗಿದ್ದು ಸಂಚಾರ ದಟ್ಟಣೆ ಮತ್ತು ಪಾರ್ಕಿಗ್ ಸಮಸ್ಯೆಯಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಹಾವೇರಿಯ ಕೆಲವು ರಸ್ತೆಗಳಲ್ಲಿ ದಿನದಿಂದ ದಿನಕ್ಕೆ ಜನ ದಟ್ಟಣೆ ಹೆಚ್ಚುತ್ತಿದೆ. ಹೆಚ್ಚುತ್ತಿರುವ ಬೇಡಿಕೆಗೆ ಅನುಗುಣವಾಗಿ ಬಹುತೇಕ ರಸ್ತೆಗಳಲ್ಲಿ ಬೀದಿ ಬದಿ ಕ್ಯಾಂಟೀನ್‌ಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡಿದ್ದು, ಬೆಳಗ್ಗೆಯಿಂದ ರಾತ್ರಿಯವರೆಗೆ ಕಾರ್ಯನಿರ್ವಹಿಸುತ್ತಿವೆ.
ಎನ್‌ಎಚ್ 48, ಮುನ್ಸಿಪಲ್ ಹೈಸ್ಕೂಲ್ ರಸ್ತೆ, ಜಿಲ್ಲಾಧಿಕಾರಿ ಕಛೇರಿ ರಸ್ತೆ, ಗುತ್ತಲ್ ರಸ್ತೆ ಹಾಗೂ ಇತರ ಒಳ ರಸ್ತೆಗಳನ್ನು ಈ ಸಂಚಾರಿ ಕ್ಯಾಂಟೀನ್ಗಳು ಆಕ್ರಮಿಸಿಕೊಂಡಿವೆ. ಪಾರ್ಕಿಗ್‌ಗೆ ಮೀಸಲಿರುವ ಜಾಗದಲ್ಲಿ ಈ ಕ್ಯಾಂಟೀನ್‌ಗಳಿದ್ದು, ಟ್ರಾಫಿಕ್ ಸಮಸ್ಯೆಯಾಗುತ್ತಿದೆ ಎನ್ನುವುದು ಸ್ಥಳೀಯರ ದೂರು.
ಅಲ್ಲದೆ, ರಸ್ತೆ ಬದಿಯಲ್ಲಿ ತಿನಿಸುಗಳನ್ನು ಮಾರಿ, ಕಸವನ್ನು ರಸ್ತೆಯ ಮೇಲೆ ಎಸೆಯುತ್ತಾರೆ. ಅಡುಗೆ ಹೊಗೆ ಉಂಟಾಗುತ್ತದೆ, ಆಹಾರವನ್ನು ಬೇಯಿಸುವಾಗ ಮತ್ತು ಪಾತ್ರೆಗಳನ್ನು ತೊಳೆಯುವಾಗ ನಿರಂತರ ಶಬ್ದ ಉಂಟಾಗುವುದು ಇಲ್ಲಿನ ಅಂಗಡಿಗಳು ಮತ್ತು ನಿವಾಸಿಗಳಿಗೆ ಸಮಸ್ಯೆಯಾಗಿದೆ.
ಇಲ್ಲಿನ ಅಂಗಡಿಯವರು ಮತ್ತು ನಿವಾಸಿಗಳು ಎದುರಿಸುತ್ತಿರುವ ದೊಡ್ಡ ಸಮಸ್ಯೆ ಪಾರ್ಕಿಕ್ ಸಮಸ್ಯೆ. ಎನ್‌ಎಚ್-48 ಬಳಿ ಬಸ್ ಟರ್ಮಿನಲ್, ವಾಣಿಜ್ಯ ಪ್ರದೇಶ ಇರುವುದರಿಂದ, ದ್ವಿಚಕ್ರ ವಾಹನ ಮತ್ತು ನಾಲ್ಕು ಚಕ್ರವಾಹನಗಳನ್ನು ಮುಖ್ಯ ರಸ್ತೆಗಳಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲಿಸುತ್ತಾರೆ. ಇದರಿಂದ ಟ್ರಾಫಿಕ್ ಉಂಟಾಗುತ್ತಿದೆ.
ಇನ್ನು, ಮುನ್ಸಿಪಲ್ ಹೈಸ್ಕೂಲ್ ರಸ್ತೆಯಲ್ಲಿ ಮಾಂಸಹಾರ ತಿಂಡಿ ತಿನಿಸುಗಳನ್ನು ಮಾರುವವರು ಸ್ವಚ್ಛತೆಗೆ ಆದ್ಯತೆ ನೀಡುತ್ತಿಲ್ಲ. ಉಳಿದ ಮಾಂಸಾಹಾರ ಮತ್ತು ತ್ಯಾಜ್ಯವನ್ನು ಸಾಮಾನ್ಯವಾಗಿ ರಸ್ತೆಗಳಲ್ಲಿ ಎಸೆಯುತ್ತಾರೆ. ಈ ಮಾಂಸಕ್ಕಾಗಿ ಬೀದಿ ನಾಯಿಗಳು ಜಗಳವಾಡುತ್ತವೆ. ಇದು ಇಲ್ಲಿ ಓಡಾಡುವ ಜನರಿಗೆ ಮತ್ತು ಮಕ್ಕಳಿಗೆ ಅಪಾಯ ತರಬಹುದು ಎನ್ನುತ್ತಾರೆ ಸ್ಥಳೀಯರು.
ಒಟ್ಟಿನಲ್ಲಿ ಜನರಿಗೆ ಅನುಕೂಲವಾಗಲಿ ಎಂದು ತಲೆ ಎತ್ತಿರುವ ಈ ಸಂಚಾರಿ ಕ್ಯಾಂಟೀನ್‌ಗಳಿಂದ ಸ್ಥಳೀಯ ಅಂಗಡಿ ಮಾಲೀಕರು ಮತ್ತು ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದು ಜಿಲ್ಲಾಡಳಿತ ಆದಷ್ಟುಬೇಗ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸುತ್ತಿದ್ದಾರೆ.