ಶತಮಾನದಲ್ಲೇ ಕಂಡರಿಯದಂತಹ ಭೀಕರ ಬರಗಾಲಕ್ಕೆ ಬೆಳೆ ಕಳೆದುಕೊಂಡು ರೈತರು ಬೀದಿ ಪಾಲಾಗಿದ್ದಾರೆ. ಈ ವರ್ಷದ ಮುಂಗಾರು ಹಾಗೂ ಹಿಂಗಾರು ಬೆಳೆ ಸಂಪೂರ್ಣ ಕೈ ಕೊಟ್ಟಿದ್ದರಿಂದ ಬೆಳೆ ನಷ್ಟವಾಗಿದೆ. ಸರ್ಕಾರಗಳು ರೈತರಿಗೆ ನೆರವಾಗುಬೇಕು ಎಂದು ರೈತ ಸಂಘದ ಮುಖಂಡ ರಾಮಣ್ಣ ಕೆಂಚಳ್ಳಿ ಹೇಳಿದ್ದಾರೆ.
ಹಾವೇರಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಬೆಳೆ ನಷ್ಟ ಪರಿಹಾರ, ಬೆಳೆ ವಿಮಾ ತಕ್ಷಣ ಬಿಡುಗಡೆ ಮಾಡಬೇಕು. ಹೊಸ ಐಪಿ ಪಂಪ್ ಸೆಟ್ಗಳಿಗೆ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ ರೈತಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳಿ, “ರಾಜ್ಯ ಸರ್ಕಾರ ಬರಗಾಲ ಘೋಷಣೆ ಮಾಡಿ ಮೂರು ತಿಂಗಳು ಗತಿಸಿವೆ. ಆದರೂ, ಬೆಳೆ ನಷ್ಟ ಪರಿಹಾರ ಕೊಡದೆ ಕೇಂದ್ರದ ಕಡೆ ಬೊಟ್ಟು ಮಾಡುತ್ತಿದೆ. ಕೇಂದ್ರ ಸರ್ಕಾರ ರೈತರಿಗೆ ಪರಿಹಾರ ಬಿಡುಗಡೆ ಮಾಡದೆ ದ್ರೋಹವೆಸಗಿ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿ ಚುನಾವಣೆ ಗುಂಗಿನಲ್ಲಿ ಕಾಲಹರಣ ಮಾಡುತ್ತಿದೆ. 28 ಜನ ಸಂಸದರು ಕೇಂದ್ರ ಸರ್ಕಾರಕ್ಕೆ ಒತ್ತಡ ಹಾಕದೇ ಇರುವುದು ನಾಚಿಕೆಗೇಡಿನ ಸಂಗತಿ ಮುಖ್ಯಮಂತ್ರಿಗಳು ಕೇವಲ ಒಬ್ಬ ರೈತನಿಗೆ 2 ಸಾವಿರ ಬೆಳೆ ಪರಿಹಾರ ಕೊಡುವುದಾಗಿ ಹೇಳಿದ್ದಾರೆ.ಇದು ಸಂಪೂರ್ಣ ಅನ್ನದಾತರಿಗೆ ಮಾಡಿದ ಅಪಚಾರ, ರಾಜ್ಯದಲ್ಲಿ ರೈತರು ಸಂಕಷ್ಟ ಎದುರಿಸುತ್ತಿದ್ದರೂ ಬ್ಯಾಂಕುಗಳು ದಬ್ಬಾಳಿಕೆ ಸಾಲ ವಸೂಲಿ ಮಾಡುತ್ತಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, “ಹೆಸ್ಕಾಂ ಕಂಪನಿ ಹೊಸ ಪಂಪ್ ಸೆಟ್ ಗೆ ವಿದ್ಯುತ್ ಅರ್ಜಿ ಪಡೆಯುವುದನ್ನು ನಿಲ್ಲಿಸಿದ್ದು ತಕ್ಷಣ ಅರ್ಜಿ ಪಡೆಯಬೇಕು. ಬೆಳೆ ವಿಮಾದಲ್ಲಿ ತಾರತಮ್ಯ ನಡೆದಿದೆ. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ತೋಟಗಾರಿಕೆ ಹಾಗೂ ಕೃಷಿ ಇಲಾಖೆಯಲ್ಲಿ ಹನಿ ನೀರಾವರಿ ಮತ್ತು ತುಂತುರು ನೀರಾವರಿ ಪರಿಕರಗಳನ್ನು ಪಡೆಯಲು NOC ಕೇಳುವುದನ್ನು ರದ್ದುಪಡಿಸುವಂತೆ ಹಾಗೂ ರೈತ ವಿರೋಧಿ ನೀತಿಗಳನ್ನು ವಿರೋಧಿಸಿ ಜಿಲ್ಲಾ ಕಛೇರಿ ಎದುರಿಗೆ ಅಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದೇವೆ” ಎಂದರು.
ಪ್ರತಿಭಟನಾಕಾರರ ಹಕ್ಕೊತ್ತಾಯಗಳು
- ಬರಗಾಲದಿಂದ ಬೆಳೆ ಕಳೆದುಕೊಂಡ ರೈತರಿಗೆ ಪ್ರತಿ ಎಕರೆಗೆ ರೂ. 25 ಸಾವಿರ ಪರಿಹಾರ ಕೊಡಬೇಕು.
- ಹೆಸ್ಕಾಂ ಕಂಪನಿ ಹೊಸ ಬೇರ್ ವೆಲ್ ಗಳಿಗೆ ಅರ್ಜಿಯನ್ನು ಪಡೆದು ವಿದ್ಯುತ್ ಪೂರೈಸಬೇಕು.
- ಓವರ್ ಲೋಡ್ ಆದ ಟಿಸಿ 25 ಕೆವಿಯಿಂದ 63 ಕೆವಿ ಹಾಗೂ 63 ರಿಂದ 100 ಕೆ.ವಿ ಯಾಗಿ ಪರಿವರ್ತಸಬೇಕು. ಹಾಗೂ ಅಕ್ರಮ-ಸಕ್ರಮ ಯೋಜನೆಯನ್ನು ಪೂರ್ಣಗೊಳಿಸಬೇಕು.
- ಬೆಳೆ ವಿಮಾ ತುಂಬಿದ ರೈತರಿಗೆ ವಿಮಾ ತಕ್ಷಣ ಮಂಜೂರ ಮಾಡಬೇಕು.
- ಹಾವೇರಿ ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ ಸ್ಥಾಪಿಸಬೇಕು.
- ರೈತರ ಕೃಷಿ ಸಾಲ ಸಿಬಿಲ್ ನಿಂದ ಹೊರಗಿಡಬೇಕು ಮತ್ತು ಬಲವಂತದ ಸಾಲ ವಸೂಲಿ ಮಾಡುವುದುನ್ನು ನಿಲ್ಲಿಸಬೇಕು.
- ರೈತರು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಸೌಲಭ್ಯ ಪಡೆಯಲು NOC ಕೇಳುವುದನ್ನು ರದ್ದುಪಡಿಸಬೇಕು.
- ಅಣೂರ ಹಾಗೂ ಬುಡಪಪನಹಳ್ಳಿ ಕೆರೆ ತುಂಬಿಸುವ ಯೋಜನೆಗೆ ಶೀಘ್ರ ಬಾಂದರ ನಿರ್ಮಿಸಿ ಕೆರೆ ತುಂಬಿಸುವಂತಾಗಬೇಕು.
ಪ್ರತಿಭಟನೆಯಲ್ಲಿ ರೈತ ಮುಖಂಡ ಸುರೇಶ ಚಲವಾದಿ, ಕಾಡನಗೌಡ ರುದ್ರಗೌಡ್ರ, ಮಂಜುನಾಥ ಕದಂ, ಗಂಗಣ್ಣ ಎಲಿ ಕರಿಬಸಪ್ಪ, ಅಡಿವೆಪ್ಪ ಆಲದಕಟ್ಟಿ ಹಾಗೂ ವಿವಿಧ ತಾಲೂಕು ಹಳ್ಳಿಗಳ ರೈತರು ಇದ್ದರು.