ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿಯಾಗಿ ರವಿಕೃಷ್ಣಾರೆಡ್ಡಿಯವರು ಅಕ್ಟೋಬರ್ 21ರ ಸೋಮವಾರ ನಾಮಪತ್ರ ಸಲ್ಲಿಸಿದ್ದು, “ಈ ಚುನಾವಣಾ ಕಾರ್ಯದಲ್ಲಿ ಕ್ಷೇತ್ರದ ಜನರ ಸಹಭಾಗಿತ್ವ ಮತ್ತು ಬೆಂಬಲ ಅತ್ಯವಶ್ಯಕವಾಗಿದೆ. ಅದನ್ನು ಪಡೆಯುವ ವಿಶ್ವಾಸವಿದೆ” ಎಂದು ಹೇಳಿದರು.
ನಾಮಪತ್ರ ಸಲ್ಲಿಸುವ ಮುನ್ನ ಸವಣೂರಿನಲ್ಲಿ ಪಾದಯಾತ್ರೆ ನಡೆಸಿದರು. ಈ ಸಂದರ್ಭದಲ್ಲಿ ಅಂಬೇಡ್ಕರ್ ಭಾವಚಿತ್ರ ಹಾಗೂ ಗೋಕಾಕ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಶಿಗ್ಗಾವಿ ಪಟ್ಟಣಕ್ಕೆ ಆಗಮಿಸಿ, ಚನ್ನಮ್ಮ ಪ್ರತಿಮೆಗೆ ಗೌರವ ಸಲ್ಲಿಸಿ ಮಾತನಾಡಿ, ಶಿಗ್ಗಾವಿ-ಸವಣೂರು ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡೇ ತೀರುತ್ತೇವೆಂದು ಶಪಥ ಮಾಡಿದರು.
“ಹಾವೇರಿ ಜಿಲ್ಲೆಯ ಶಿಗ್ಗಾವಿ ಕ್ಷೇತ್ರದಲ್ಲಿ ನೂರಾರು ಸಮಸ್ಯೆಗಳಿದ್ದು, ಮಾಜಿ ಮುಖ್ಯಮಂತ್ರಿಗಳ ಕ್ಷೇತ್ರವಾಗಿತ್ತೆಂದು ಹೇಳಲು ನಾಚಿಕೆಯಾಗುತ್ತದೆ. ಆ ಮಟ್ಟದಲ್ಲಿ ಸಮಸ್ಯೆಗಳಿದ್ದು, ಹೆಜ್ಜೆ ಹೆಜ್ಜೆಗೂ ಸಮಸ್ಯೆಗಳು ಎಡತಾಕುತ್ತವೆ. ಜನರು ಸಮಸ್ಯೆಗಳಿಂದ ಬಳಲುತ್ತಿದ್ದರೆ, ಕುಟುಂಬ ರಾಜಕಾರಣದ ಅತಿರೇಕದಲ್ಲಿ ಇತರ ರಾಜಕೀಯ ಪಕ್ಷಗಳು ತೊಡಗಿಕೊಂಡಿವೆ” ಎಂದು ರವಿಕೃಷ್ಣಾರೆಡ್ಡಿ ಹೇಳಿದರು.
“ಈ ಕ್ಷೇತ್ರದ ಜನ ಅತಿವೃಷ್ಠಿಯಿಂದ ಬೆಳೆ ಮತ್ತು ಮನೆಗಳಿಗೆ ಹಾನಿಯಾಗಿದ್ದು, ಜನರು ಪರದಾಡುತ್ತಿದ್ದಾರೆ. ಈ ಎಲ್ಲ ಬವಣೆಗಳನ್ನು ತೀರಿಸುವ ಮತ್ತು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅಭಿವೃದ್ಧಿ ಸಾಧಿಸಬೇಕಾಗಿದ್ದು, ಇದನ್ನು ಸಾಧಿಸಿಯೇ ತೀರುತ್ತೇನೆಂದು ಮತ್ತು ಅದು ಇಡೀ ರಾಷ್ಟ್ರಕ್ಕೆ ಮಾದರಿಯಾಗುವಂತಹ ಕನಸುಗಳು ತಮ್ಮಲ್ಲಿವೆ ಹಾಗೂ ರಾಜ್ಯದ ರಾಜಕಾರಣದ ದಿಕ್ಕನ್ನು ಬದಲಾಯಿಸಲು ಈ ಚುನಾವಣೆ ಕಾರಣವಾಗುತ್ತದೆ” ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಯಾದಗಿರಿ | ಬೆಳೆ ಖರೀದಿ ಕೇಂದ್ರ ಸ್ಥಾಪಿಸಿ, ವೈಜ್ಞಾನಿಕ ಬೆಲೆ ನಿಗದಿಪಡಿಸಿ: ರೈತ ಸಂಘ ಆಗ್ರಹ
ಪಾದಯಾತ್ರೆಯ ಮೂಲಕ ಶಿಗ್ಗಾವಿ ಶಹರದ ಪ್ರಮುಖ ಬೀದಿಗಳಲ್ಲಿ ಸಾಗಿ ಜನರ ಬೆಂಬಲ ಕೋರಿ, ಚುನಾವಣಾಧಿಕಾರಿಗಳ ಕಚೇರಿ ತಲುಪಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭಕ್ಕೆ ಸಾಕ್ಷಿಯಾಗಲು ಮತ್ತು ಬೆಂಬಲ ನೀಡಲು ಕ್ಷೇತ್ರದ ಜನರು ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಸಾಮಾಜಿಕ ಹೋರಾಟಗಾರರು, ಪಕ್ಷದ ಕಾರ್ಯಕರ್ತರು ಇದ್ದರು. ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಪಟೇಲ್ ಆಗಮಿಸಿ ಶುಭ ಕೋರಿದರು.