ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವ ವಸತಿ ನಿಲಯಗಳಲ್ಲಿ ಉತ್ತಮ ಗುಣಮಟ್ಟದ ಆಹಾರ ನೀಡದೆ, ಕೊಳೆತ ತರಕಾರಿಗಳಿಂದ ತಯಾರಿಸಿದ ಆಹಾರ ಪೂರೈಕೆ ಮಾಡಲಾಗುತ್ತಿದೆ ಎಂದು ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ಆರೋಪಿಸಿದೆ.
ಅನುದಾನ ಕೊರತೆ ನೆಪವೊಡ್ಡಿ ಊಟ ಕಡಿತ ಮಾಡಿದ್ದಾರೆ. ಪುಸ್ತಕಗಳು, ಮೂರು ವರ್ಷ ಕಳೆದರೂ ಆಟದ ಸಾಮಗ್ರಿಗಳನ್ನು ನೀಡಿಲ್ಲ. ಮೆನ್ಯೂ ಚಾರ್ಟ್ ಪ್ರಕಾರ ಊಟ ನೀಡುತ್ತಿಲ್ಲ. ಗ್ರಂಥಾಲಯವನ್ನು ಬಳಕೆಗೆ ನೀಡುತ್ತಿಲ್ಲ. ಇಲಾಖೆಯ ಅಧಿಕಾರಿಗಳಾಗಲೀ ಜಿಲ್ಲಾಧಿಕಾರಿಗಳಾಗಲೀ ವಸತಿ ನಿಲಯಕ್ಕೆ ಬರುವುದಿಲ್ಲ. ಕೂಡಲೇ ವಸತಿ ನಿಲಯಗಳಲ್ಲಿ ಮೂಲ ಸೌಕರ್ಯದ ಜತೆ ಉತ್ತಮ ಆಹಾರ ಒದಗಿಸಲು ಕ್ರಮವಹಿಸಬೇಕು. ವಸತಿ ನಿಲಯಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ತನಿಖೆ ಮಾಡಬೇಕು ಎಂದು ಜಿಪಂ ಸಿಇಒ ರುಚಿ ಬಿಂದಲ್ ಅವರಿಗೆ ಎಸ್ಎಫ್ಐ ಮನವಿ ಪತ್ರ ಸಲ್ಲಿಸಿತು.
ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಮಾತನಾಡಿ, “ನೂರಾರು ವಿದ್ಯಾರ್ಥಿಗಳು ದೂರದ ಊರಿನಿಂದ ಬಂದು ವಸತಿ ನಿಲಯದಲ್ಲಿ ಆಶ್ರಯ ಪಡೆದು ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಅವರಿಗೆ ಉತ್ತಮ ಗುಣಮಟ್ಟದ ಆಹಾರ ನೀಡುವಂತೆ ಹಾಗೂ ಮೂಲ ಸೌಕರ್ಯಗಳಿಗಾಗಿ ಪ್ರತಿ ಆರು ತಿಂಗಳಿಗೊಮ್ಮೆ ಹೋರಾಟ ಮಾಡಲಾಗುತ್ತಿರುವುದು ವಿಷಾದ. ಶಾಶ್ವತ ಪರಿಹಾರಕ್ಕಾಗಿ ಯಾವೊಬ್ಬ ಅಧಿಕಾರಿಯೂ ಮುಂದಾಗುತ್ತಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಸತಿ ನಿಲಯಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತುಕೊಂಡಿದ್ದಾರೆ. ಉಪ ಲೋಕಾಯುಕ್ತರು ಜಿಲ್ಲೆಗೆ ಆಗಮಿಸಿದ ಸಂದರ್ಭದಲ್ಲಿ ಎಲ್ಲಾ ವ್ಯವಸ್ಥೆ ಮಾಡಿಕೊಂಡು ತಮ್ಮ ಮನೆಯಲ್ಲಿದ್ದ ತಟ್ಟೆ, ಲೋಟ ತಂದಿದ್ದಾರೆ. ಅಲ್ಲದೆ ವಿದ್ಯಾರ್ಥಿನಿಯರ ಹಾಸ್ಟೆಲ್ ಗಳಲ್ಲಿ ಪ್ರೆಶ್ನೆ ಮಾಡುವವರನ್ನು ಟಾರ್ಗೆಟ್ ಮಾಡಲಾಗುತ್ತದೆ. ಹಾಗಾಗು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಬೇಕೆಂದು” ಅವರು ಒತ್ತಾಯಿಸಿದರು.
ಹಾಸ್ಟೆಲ್ ವಿದ್ಯಾರ್ಥಿಗಳ ಮಾಸಿಕ ಆಹಾರ ಭತ್ಯೆಯನ್ನು ಕನಿಷ್ಠ ರೂ.3500 ಗಳಿಗೆ ಹೆಚ್ಚಿಸಬೇಕು. ರಾಜ್ಯದಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಪ್ರತಿದಿನದ ಮೂರೊತ್ತಿನ ಊಟಕ್ಕೆ ಕೇವಲ 60-70 ರೂಗಳಂತೆ ತಿಂಗಳಿಗೆ 1850 ರೂಗಳನ್ನು ಮಾತ್ರ ನೀಡಲಾಗುತ್ತಿದೆ. ಎಲ್ಲ ಆಹಾರ ಪದಾರ್ಥ, ಗ್ಯಾಸ್ ಬೆಲೆ ಏರಿಕೆ ಆಗಿದೆ. ಆದರೂ ಹಾಸ್ಟೆಲ್ ವಿದ್ಯಾರ್ಥಿಗಳ ಆಹಾರ ಭತ್ಯೆಯನ್ನು ಸರ್ಕಾರ ಹೆಚ್ಚಿಸಿಲ್ಲ. ಇದರಿಂದ ರಾಜ್ಯದ ವಿದ್ಯಾರ್ಥಿಗಳು ಪೌಷ್ಠಿಕ ಆಹಾರದಿಂದ ವಂಚಿತರಾಗುತ್ತಿದ್ದಾರೆ. ಜೈಲಿನಲ್ಲಿರುವ ಕೈದಿಗಳಿಗಳ ಆಹಾರಕ್ಕೆ ಪ್ರತಿದಿನ 450 ರಂತೆ ಒಂದು ತಿಂಗಳಿಗೆ ಸಾವಿರಾರು ರೂಪಾಯಿ ಖರ್ಚು ಮಾಡುವ ಸರ್ಕಾರ ಹಾಸ್ಟೆಲ್ ವಿದ್ಯಾರ್ಥಿಗಳ ಆಹಾರ ಭತ್ಯೆಯನ್ನು ಕನಿಷ್ಠ ಮಾಸಿಕ 3500 ರೂಗಳಿಗೆ ಹೆಚ್ಚಿಸಬೇಕೆಂದು ಆಗ್ರಹಿಸಿದರು.
ಇದನ್ನೂ ಓದಿ: ಹಾವೇರಿ | ಸಾಮಾಜಿಕ ನ್ಯಾಯದ ಹರಿಕಾರ ಬಾಬೂಜಿ: ಪರಶುರಾಮ ಖಂಡನವರ
ಸುನಿಲ್ ಕುಮಾರ್ ಎಲ್, ಪ್ರಶಾಂತ್ ಎಚ್, ಗುಡ್ಡಪ್ಪ ಎನ್ ಜಿ, ಪ್ರವೀಣ ಕೆ, ಕೃಷ್ಣ ಎಸ್, ಬಸವನಗೌಡ ಕೆ, ಮಧುಸೂದನ್ ಎಮ್ ಸಿದ್ದಲಿಂಗೇಶ ಆರ್, ಕಲ್ಲನಗೌಡ ಡಿ, ವಿನಯ್ ಹೆಚ್,ರವಿ ಆರ್ ಡಿ, ಸಚಿನ್ ಎಲ್ ಸಿ, ಅಭಿಷೇಕ್ ಎಸ್ ಡಿ, ಸಂದೀಪ್ ಎ ಕೆ, ಸುನೀಲಗೌಡ್ರು ಉಪಸ್ಥಿತರಿದ್ದರು.