ಸುಪ್ರೀಂ ಕೋರ್ಟ್ ತೀರ್ಪು ಬಂದು ನಾಲ್ಕು ತಿಂಗಳಾದರೂ ಒಳಮೀಸಲಾತಿ ಜಾರಿ ಮಾಡದೇ ಕಾಲಾಹರಣ ರಾಜಕೀಯ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರದ ನೀತಿಯನ್ನು ಖಂಡಿಸಿದ್ದು, ಬೆಳಗಾವಿಯಲ್ಲಿ ಜರುಗುವ ಅಧಿವೇಶನದಲ್ಲಿ ಒಳಮೀಸಲಾತಿ ಜಾರಿಗೆ ಧ್ವನಿ ಎತ್ತಬೇಕು ಎಂದು ಮಾದಿಗ ಮತ್ತು ಮಾದಿಗ ಉಪಜಾತಿಗಳ ಸಂಘಟನೆಗಳ ಒಕ್ಕೂಟ ಒತ್ತಾಯಿಸಿದೆ.
ಹಾವೇರಿ ಪಟ್ಟಣದ ವಿಧಾನಸಭಾ ಉಪಸಭಾಧ್ಯಕ್ಷ ಹಾಗೂ ಸ್ಥಳೀಯ ಶಾಸಕ ರುದ್ರಪ್ಪ ಲಮಾಣಿಯವರ ಕಚೇರಿ ಮುಂದೆ ಮಾದಿಗ ಮತ್ತು ಮಾದಿಗ ಉಪಜಾತಿಗಳ ಸಂಘಟನೆಗಳ ಒಕ್ಕೂಟದಿಂದ ತಮಟೆ ಚಳವಳಿ ಮಾಡುವ ಮೂಲಕ ಮನವಿ ಸಲ್ಲಿಸಿದರು.
ರಾಜ್ಯ ಸಂಘಟನಾ ಸಂಚಾಲಕ ಉಡಚಪ್ಪ ಮಾಳಗಿ ಮಾತನಾಡಿ, “ಆಗಸ್ಟ್ 1ರಂದು ಸುಪ್ರೀಂ ಕೋರ್ಟಿನ ಸಂವಿಧಾನ ಪೀಠವು, ಒಳಮೀಸಲಾತಿ ಜಾರಿಮಾಡುವ ಅಧಿಕಾರವನ್ನು ರಾಜ್ಯಗಳಿಗೇ ಕೊಡುವ ಮೂಲಕ ಐತಿಹಾಸಿಕ ತೀರ್ಪು ಪ್ರಕಟಿಸಿತ್ತು. ತೀರ್ಪು ಬಂದು ನಾಲ್ಕು ತಿಂಗಳಾದರೂ ಕರ್ನಾಟಕ ಸರ್ಕಾರ ಅಮೆಗತಿಯಲ್ಲಿ ಸಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಕಾಟಾಚಾರಕ್ಕೆ ನ್ಯಾ ನಾಗಮೋಹನ್ ದಾಸ್ ಆಯೋಗ ರಚಿಸಿದ್ದನ್ನು ಬಿಟ್ಟರೆ ಈವರೆಗೆ ಬೇರೆ ಏನನ್ನೂ ಮಾಡಿಲ್ಲ. ʼಎರಡು ತಿಂಗಳಲ್ಲಿ ಆಯೋಗ ವರದಿ ಕೊಡುತ್ತದೆ’ ಎಂದು ಸರ್ಕಾರ ಹೇಳಿತ್ತು. ಆದರೆ 45 ದಿನವಾದರೂ ಆಯೋಗ ಕೆಲಸ ಆರಂಭಿಸಿಲ್ಲ. ಆಯೋಗಕ್ಕೆ ಬೇಕಾದ ಕಚೇರಿ, ಸಿಬ್ಬಂದಿ, ಹಣಕಾಸಿನ ನೆರವುಕೊಡದೆ ಕಾಲಾಹರಣ ನೆಡೆಸಲಾಗುತ್ತಿದೆ. ಆಯೋಗ ರಚಿಸಬೇಕು ಎನ್ನುವುದು ಮಾದಿಗ ಸಮಾಜದ ಯಾರೊಬ್ಬರ ಬೇಡಿಕೆಯೂ ಆಗಿರಲಿಲ್ಲ. ಸರ್ಕಾರದ ಮುಂದೆ ನ್ಯಾ. ಸದಾಶಿವ ಆಯೋಗ, ಮಾಧುಸ್ವಾಮಿ ಸಮಿತಿ ವರದಿ ಇದೆ. ಮಾಧುಸ್ವಾಮಿಯವರ ಸಮಿತಿ ಏಕೆ? ಎಂದು ಪ್ರಶ್ನಿಸಿದರು.
“2011ರ ಜನಗಣತಿಯ ಅಂಕಿ ಅಂಶಗಳ ಆಧಾರದಲ್ಲಿ ವರ್ಗೀಕರಣ ಮಾಡಿದೆ. ಈಗ ಮತ್ತೆ ನಾಗಮೋಹನ್ ದಾಸ್ ಆಯೋಗಕ್ಕೆ ಅದೇ ಕೆಲಸ ಕೊಡಲಾಗಿದೆ. ಸರ್ಕಾರದ ಈ ನಿಧಾನಗತಿಯ ನಿರ್ಲಕ್ಷ್ಯದ ಧೋರಣೆ ನೋಡಿದರೆ ಇವರಿಗೆ ಅವಕಾಶ ವಂಚಿತ ದಲಿತ ಸಮುದಾಯಗಳಿಗೆ ಒಳಮೀಸಲಾತಿ ಕೊಡುವ ಮನಸ್ಸಿಲ್ಲವೆಂಬುದು ಸ್ಪಷ್ಟವಾಗುತ್ತದೆ. ಒಳಮೀಸಲಾತಿ ಜಾರಿಯಾಗುವವರೆಗೆ ಸರ್ಕಾರ ಯಾವುದೇ ಉದ್ಯೋಗ ನೇಮಕಾತಿ ಮಾಡುವುದಿಲ್ಲವೆಂದು ಭರವಸೆ ಕೊಟ್ಟಿತ್ತು. ಆದರೆ ಈ ಭರವಸೆ ಜಾರಿಯಾಗಿಲ್ಲ. ವಿವಿಧ ಇಲಾಖೆಯಿಂದ ನೇಮಕಾತಿಯ ಘೋಷಣೆಗಳು ಬರುತ್ತಲೇ ಇವೆ” ಎಂದು ಉಡಚಪ್ಪ ಮಾಳಗಿ ಖಂಡಿಸಿದರು.
ಈ ಸುದ್ದಿ ಓದಿದ್ದೀರಾ? ಹಾವೇರಿ | ಜೆಎಂಎಫ್‌ಸಿ ನ್ಯಾಯಾಲಯ ಉದ್ಘಾಟನೆ
ಮುಖಂಡ ಗವಿಸಿದ್ದಪ್ಪ ದ್ಯಾಮಣ್ಣನವರ ಮಾತನಾಡಿ, “ಹರಿಯಾಣದ ಬಿಜೆಪಿ ಸರ್ಕಾರ ಸುಪ್ರೀಂ ಕೋರ್ಟಿನ ತೀರ್ಪು ಬಂದ ಮೊದಲ ವಾರದಲ್ಲೇ ಒಳಮೀಸಲಾತಿಯನ್ನು ಜಾರಿಮಾಡಿದೆ. ಆದರೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಬದ್ಧತೆ ತೋರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಅಧಿಕಾರಕ್ಕೆ ಬಂದ ಮೊದಲ ವಾರದಲ್ಲೇ ಒಳಮೀಸಲಾತಿ ಜಾರಿ ಮಾಡುತ್ತೇವೆಂದು ಹಸಿಸುಳ್ಳು ಹೇಳಿದ ಕಾಂಗ್ರೆಸ್ ನಾಯಕರು ಮಾದಿಗ ಜನತೆಯ ವಿಶ್ವಾಸ ಕಳೆದುಕೊಂಡಿದ್ದಾರೆ. ಹಾಗಾಗಿ ಮಾದಿಗ ಮತ್ತು ಉಪಜಾತಿಗಳ ಈ ಹೋರಾಟಕ್ಕೆ ಸಹಕಾರ ಕೊಡಬೇಕು” ಎಂದು ಶಾಸಕ ರುದ್ರಪ್ಪ ಲಮಾಣಿಯವರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮುಖಂಡರಾದ ಎಂ ಆಂಜನೇಯ, ಮಂಜಪ್ಪ ಮರೋಳ, ಕಿಟ್ಟಪ್ಪ ಕರ್ಜಗಿ, ಬಸಣ್ಣ ಮುಗಳಿ, ಅಶೋಕ ಮರೆಣ್ಣನವರ, ನೀಲಮ್ಮ ಪೂಜಾರ, ಹನಮಂತಪ್ಪ ಸಿ ಡಿ, ಮಹೇಶಪ್ಪ ಹರಿಜನ, ಶಿವು ಮುದಿಮಲ್ಲಣ್ಣನವರ, ಚಂದ್ರಪ್ಪ ದಾಸನಕೇರಿ, ಶಂಭುಲಿಂಗಪ್ಪ ದೀವಟರ, ರಘು ಮಾಳಗಿ, ಮಹಾಂತೇಶಪ್ಪ ಚಿನ್ನಿಕಟ್ಟಿ, ಮುತ್ತಪ್ಪ ದೊಡ್ಡಮನಿ, ಅರುಣ ಭೋವಿ, ಮಂಜುನಾಥ ಸಿದ್ದಣ್ಣನವರ, ಅಶೋಕ ಅರೆಕಟ್ಟಿ, ಸುಭಾಷ ದೊಡ್ಡಮನಿ, ಮುತ್ತಣ್ಣ ಮುಷ್ಠಿ, ಗುಡ್ಡಪ್ಪ ಕನವಳ್ಳಿ ಸೇರಿದಂತೆ ಅನೇಕ ಮುಖಂಡರು ಇದ್ದರು.