ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಮಲಕನಹಳ್ಳಿಯಲ್ಲಿ ಶಾಸಕರ ಅನುದಾನದಲ್ಲಿ ನಿರ್ಮಿಸಿರುವ ರಸ್ತೆಯಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ವಾಲ್ಮೀಕಿ ಜನಾಂಗದವರು ಅಡ್ಡಾಡುವುದಕ್ಕೆ ಗ್ರಾಮಸ್ಥರು ನಿರ್ಬಂಧ ವಿಧಿಸಿ ರಸ್ತೆಗೆ ಕಲ್ಲುಮುಳ್ಳು ಹಾಕಿ ಬಂದ್ ಮಾಡಿದ್ದನ್ನು ವಿರೋಧಿಸಿ ಸ್ಥಳೀಯರು ಬುಧವಾರ(ಡಿ.20) ಅಹೋರಾತ್ರಿ ಪ್ರತಿಭಟನೆ ನಡೆಸಿದ್ದಾರೆ.
ಮಲಕನಹಳ್ಳಿ ಗ್ರಾಮದಲ್ಲಿ ವಾಲ್ಮೀಕಿ ಮತ್ತು ಕುರುಬ ಸಮಾಜಕ್ಕೆ ಸೇರಿದ ಜನರೇ ಹೆಚ್ಚು ವಾಸವಾಗಿದ್ದಾರೆ. ಹಿಂದಿನ ಶಾಸಕರ ಅನುದಾನದಲ್ಲಿ ನಿರ್ಮಿಸಿದ ಸಿ.ಸಿ ರಸ್ತೆಯಲ್ಲಿ ವಾಲ್ಮೀಕಿ ಜನಾಂಗಕ್ಕೆ ಪ್ರವೇಶವಿಲ್ಲ ಎಂದು ನಿರ್ಬಂಧ ಹಾಕಿದ್ದು ಈ ಪ್ರತಿಭಟನೆಗೆ ಕಾರಣವಾಗಿದೆ.
ರೈತ ಮುಖಂಡ ರವೀಂದ್ರಗೌಡ ಪಾಟೀಲ ಮಾತನಾಡಿ, ವಾಲ್ಮೀಕಿ ಸಮಾಜದ ಜನತೆ ಅಡ್ಡಾಡಲು ಅನುಕೂಲವಾಗಲಿ ಎಂದು ಸರ್ಕಾರ ಕಳೆದ ಬಾರಿ ಶಾಸಕರ ಅನುದಾನದಲ್ಲಿ ಲಕ್ಷಾಂತರ ಹಣ ಖರ್ಚು ಮಾಡಿ ಸಿ.ಸಿ ರಸ್ತೆ ನಿರ್ಮಿಸಿದೆ. ಆದರೆ, ಸಾರ್ವಜನಿಕ ರಸ್ತೆಯಲ್ಲಿ ವಾಲ್ಮೀಕಿ ಜನಾಂಗದವರು ಓಡಾಡಬಾರದೆಂದು ಬಹಿಷ್ಕಾರ ಹಾಕಿ ಮುಳ್ಳು, ಕಲ್ಲುಗಳನ್ನು ಹಾಕಿ ಬಂದ್ ಮಾಡಿದ್ದರಿಂದ ಇಲ್ಲಿನ ನಿವಾಸಿಗಳಿಗೆ ತೊಂದರೆಯಾಗಿದೆ ಎಂದು ದೂರಿದರು.
ಇದನ್ನು ಖಂಡಿಸಿ ಇಲ್ಲಿನ ಪರಿಶಿಷ್ಟ ಜನಾಂಗದ ಮಹಿಳೆಯರು, ಮಕ್ಕಳು ನ್ಯಾಯಕ್ಕಾಗಿ ಆಗ್ರಹಿಸಿ ಅಹೋರಾತ್ರಿ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡರು. ಈ ಬಗ್ಗೆ ಜಿಲ್ಲಾಧಿಕಾರಿ, ತಹಸೀಲ್ದಾರ್, ಸಮಾಜ ಕಲ್ಯಾಣಾಧಿಕಾರಿ ಮತ್ತು ಪೊಲೀಸ್ ಇಲಾಖೆ ಗಮನಕ್ಕೆ ತಂದರೂ ಇದುವರೆಗೂ ಏನೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ್ದಾರೆ. ನಮಗೆ ನ್ಯಾಯ ಸಿಗುವವರೆಗೂ ಧರಣಿ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.