ಬೇಸಿಗೆಗೂ ಮುನ್ನವೇ ತುಂಗಭದ್ರಾ ನದಿಯ ನೀರು ಖಾಲಿಯಾಗುತ್ತಿದ್ದು ಶಿವಮೊಗ್ಗ, ದಾವಣಗೆರೆ, ಹಾವೇರಿ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ರೈತರಲ್ಲಿ ಆತಂಕ ಮನೆಮಾಡಿದೆ.
ಡಿಸೆಂಬರ್‌ನಿಂದ ಫೆಬ್ರುವರಿ ತಿಂಗಳಷ್ಟರಲ್ಲಿ ರೈತರು ಕಬ್ಬು, ಭತ್ತ ನಾಟಿ ಮಾಡುತ್ತಾರೆ. ಎಲ್ಲೆಡೆಯಲ್ಲೂ ನಾಟಿ ಕಾರ್ಯ ಭರದಿಂದ ಸಾಗಿದೆ. ಗೋವಿನಜೋಳ, ಶೇಂಗಾ, ಬಾಳೆ, ಅಡಿಕೆ, ಹೈಬ್ರಿಡ್ ಜೋಳ, ಈಗಾಗಲೆ ಬಿತ್ತನೆ ಮಾಡಿದ್ದಾರೆ. ಆದರೆ, ತುಂಗಭದ್ರಾ ನದಿಯಲ್ಲಿ ನೀರು ಖಾಲಿಯಾಗುತ್ತಿರುವುದು ಕಂಡು ರೈತರು ಚಿಂತೆಗೀಡಾಗಿದ್ದಾರೆ.
ಬೀಕರ ಬರಗಾಲದಿಂದ ರೈತರು ತತ್ತರಿಸಿದ್ದಾರೆ. ಸಾವಿರಾರು ಎಕರೆ ಪ್ರದೇಶದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೀಜ ಗೊಬ್ಬರಗಳನ್ನು ಹಾಕಿ ಬೆಳೆ ಬೆಳೆಯುತ್ತಿದ್ದಾರೆ. ಆದರೆ, ತುಂಗಭದ್ರಾ ನದಿಯಲ್ಲಿ ನೀರು ಖಾಲಿಯಾಗುತ್ತಿರುವುದು ರೈತರನ್ನು ನಿದ್ದೆಗೆಡಿಸಿದೆ. ಸರ್ಕಾರ ತುಂಗಭದ್ರಾ ನದಿಗೆ ನೀರು ಹರಿಸುವುದಕ್ಕೆ ವ್ಯವಸ್ಥೆ ಮಾಡಬೇಕು ಎಂದು ರೈತರು ಆಗ್ರಹಿಸುತ್ತಿದ್ದಾರೆ.
ಹಾವನೂರ, ಮೈಲಾರ ಹಾಗೂ ಕುರವತ್ತಿ ಗ್ರಾಮಗಳ ದೊಡ್ಡ ಜಾತ್ರೆಗಳು ಫೆಬ್ರುವರಿಯಿಂದ ನಡೆಯುತ್ತಿವೆ. ಈ ಜಾತ್ರೆಗಳಿಗೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಭಕ್ತರಿಗೆ ಕುಡಿಯುವ ನೀರಿನ ಅನುಕೂಲಕ್ಕೆ ಕೂಡಲೇ ತುಂಗಭದ್ರಾ ನದಿಗೆ ನೀರು ಬಿಡಬೇಕೆಂಬುದು ಜನರ ಬೇಡಿಕೆ.
ತುಂಗಭದ್ರಾ ನದಿ ಖಾಲಿ ಆಗುತ್ತಿರುವುದರಿಂದ ಗುತ್ತಲ ಪಟ್ಟಣಕ್ಕೆ ತುಂಗಭದ್ರಾ ನದಿಯ ನೀರನ್ನು 20ರಿಂದ 25ದಿನಗಳಿಗೆ ಪೊರೈಕೆ ಮಾಡಲಾಗುತ್ತಿತ್ತು. ಆದರೆ, ಈಗ ನದಿ ನೀರು ಖಾಲಿ ಆಗಿರುವುದರಿಂದ ಪಟ್ಟಣಕ್ಕೆ ಕುಡಿಯುವ ನೀರು ಸ್ಥಗಿತಗೊಳಿಸಲಾಗಿದೆ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಸಂಜಯ ಬಡ್ಡಿವಡ್ಡರ ಮಾಹಿತಿ ನೀಡಿದ್ದಾರೆ.