ಶಾಸಕ ರುದ್ರಪ್ಪ ಲಮಾಣಿ ಕಾಣೆಯಾಗಿದ್ದಾರೆಂದು ಆರೋಪಿಸಿರುವ ಹಾವೇರಿ ಕ್ಷೇತ್ರದ ಕೆಲ ಮತದಾರರು, “ನಿಮಗಾಗಿ ರೈಲಿನ ವಿಂಡೋ ಸೀಟ್ ಟಿಕೆಟ್ ಕಾಯ್ದಿರಿಸಲಾಗಿದೆ. ದಯವಿಟ್ಟು ಹಾವೇರಿಗೆ ಬನ್ನಿ” ಎಂದು ಆಹ್ವಾನಿಸಿದ್ದಾರೆ.
“ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಅಪಾರ ಹಾನಿಯಾಗಿದೆ. ಹಾವೇರಿಯಲ್ಲಿ ಕಾಲುವೆಯ ನೀರಿನಲ್ಲಿ ಕೊಚ್ಚಿ ಹೋಗಿ ಬಾಲಕ ಮೃತಪಟ್ಟಿದ್ದಾನೆ. ಇಷ್ಟಾದರೂ ಶಾಸಕ ರುದ್ರಪ್ಪ ಲಮಾಣಿ ಸ್ಥಳಕ್ಕೆ ಭೇಟಿ ನೀಡಿಲ್ಲ. ನೊಂದವರ ಅಳಲು ಆಲಿಸಿಲ್ಲ” ಎಂದು ಮತದಾರರು ದೂರಿದ್ದಾರೆ.
“ವಿಧಾನಸಭೆ ಉಪಸಭಾಪತಿಯೂ ಆಗಿರುವ ಶಾಸಕ ರುದ್ರಪ್ಪ ಲಮಾಣಿ ಹಾವೇರಿಯತ್ತ ಬರುತ್ತಿಲ್ಲ. ಬೆಂಗಳೂರಿನಲ್ಲೇ ಬೀಡು ಬಿಟ್ಟಿದ್ದಾರೆ. ಮತದಾರರ ಗೋಳು ಕೇಳುವವರು ಯಾರು?” ಎಂದು ಮತದಾರರು ಅಳಲು ತೋಡಿಕೊಂಡಿದ್ದಾರೆ.

ಬೆಂಗಳೂರಿನಿಂದ ಹಾವೇರಿಗೆ ಹೊರಡುವ ಜನಶತಾಬ್ದಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಅಕ್ಟೋಬರ್ 25ರಂದು ರುದ್ರಪ್ಪ ಲಮಾಣಿಯವರ ಹೆಸರಿನಲ್ಲಿ ಸಿಎನ್ಎಎಫ್ ಡಿ-9 ಬೋಗಿಯಲ್ಲಿ 37ನೇ ಸೀಟ್ ಕಾಯ್ದಿರಿಸಲಾಗಿದೆ. ಲಮಾಣಿಯವರ ಮೊಬೈಲ್ ವಾಟ್ಸ್‌ಆ್ಯಪ್‌ಗೆ ಟಿಕೆಟ್ ಕಳುಹಿಸಲಾಗಿದೆ. ಇದೇ ಟಿಕೆಟ್‌ನ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಕಾಂಗ್ರೆಸ್ ರಾಜ್ಯದಲ್ಲಿಯೇ ಹೆಚ್ಚು ಬಲಿಷ್ಠ ಭದ್ರಕೋಟೆಯಾಗಿದೆ: ಎ ಎನ್ ನಟರಾಜ್ ಗೌಡ
ಟಿಕೆಟ್‌ನ ಚಿತ್ರ ಅಪ್‌ಲೋಡ್ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಪ್ರಕಟಿಸಿರುವ ಕೆಲ ಮತದಾರರು, “ಸನ್ಮಾನ್ಯ ಶಾಸಕರಿಗೆ ದುಡ್ಡಿನ ಅಭಾವವೆಂದು ತಿಳಿದು, ಹಾವೇರಿ ವಿಧಾನಸಭಾ ಕ್ಷೇತ್ರದ ಜನತೆಯೇ ಅವರಿಗೆ ರೈಲಿನ ಟಿಕೆಟ್ ಕಾಯ್ದಿರಿಸಿದೆ. ಈ ರೈಲು ಏರಿ ಹಾವೇರಿಗೆ ಬಂದರೆ, ಇಲ್ಲಿ ಜನರ ಸಮಸ್ಯೆಗಳನ್ನು ನೋಡಿ. ಸಾಧ್ಯವಾದರೆ ಪರಿಹರಿಸಿ, ಬೇಕಾದಲ್ಲಿ ಅವರಿಗೆ ಹಾವೇರಿಯಿಂದ ಬೆಂಗಳೂರಿಗೆ ವಾಪಸ್ ಹೋಗಲು ನಾವೇ ರೈಲು ಟಿಕೆಟ್ ಕಾಯ್ದಿರಿಕೊಡುತ್ತೇವೆ. ಇಂತಿ ನಿಮ್ಮ ಬಡಪಾಯಿ ಮತದಾರರು” ಎಂದು ಪೋಸ್ಟ್‌ನಲ್ಲಿ ಬರೆದಿದ್ದಾರೆ.