ವಸತಿ ಸೌಲಭ್ಯಕ್ಕಾಗಿ ಪುರಸಭೆ ವಂತಿಗೆ ಕಟ್ಟಿರುವ ಬಡ ಫಲಾನುಭವಿಗಳಿಗೆ ಎರಡು ವರ್ಷಗಳ ಹಿಂದೆಯೇ ನಿರ್ಮಾಣಗೊಂಡಿರುವ ಜಿ+1 ಮನೆಗಳನ್ನು ವಿತರಣೆ ಮಾಡಲು ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಪುರಸಭೆ ಎದುರು ಮನೆ ನೀಡುವವರೆಗೆ ಅನಿರ್ದಿಷ್ಟಾವಧಿ ಪ್ರತಿಭಟನಾ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಎಚ್ಚರಿಸಿದರು.
ಹಾವೇರಿ ಜಿಲ್ಲೆಯ ಶಿಗ್ಗಾಂವಿ ನಗರದ ಪುರಸಭೆ ಕಚೇರಿಯಲ್ಲಿ ಶನಿವಾರ ಜಿ+1 ಮನೆ ಫಲಾನುಭವಿಗಳ ಹೋರಾಟ ಸಮಿತಿ ಹಾಗೂ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್(ಡಿವೈಎಫ್ಐ) ವತಿಯಿಂದ ಪುರಸಭೆ ಅಧ್ಯಕ್ಷರು ಹಾಗೂ ಮುಖ್ಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು.
“ನಗರದಲ್ಲಿ ವಾಸ ಮಾಡಲು ಮನೆಗಳಿಲ್ಲದ ಬಡಜನರು ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ವಾಸಯೋಗ್ಯ ಮನೆಗಳ ಸೌಲಭ್ಯಕ್ಕಾಗಿ ಹತ್ತು ಹನ್ನೆರಡು ವರ್ಷಗಳ ಹಿಂದೆ ಪುರಸಭೆಗೆ ಫಲಾನುಭವಿ ವಂತಿಗೆ ಹಣಕಟ್ಟಿ ಮನೆ ನೀಡುವಂತೆ ಮನವಿ ಮಾಡುತ್ತಿದ್ದಾರೆ. 2023ರಲ್ಲಿ ಆಗ ಮುಖ್ಯಮಂತ್ರಿಗಳಾಗಿದ್ದ ಮಾನ್ಯ ಬಸವರಾಜ ಬೊಮ್ಮಾಯಿಯವರು ನಿರ್ಮಾಣಗೊಂಡಿರುವ ಮನೆಗಳನ್ನು ಉದ್ಘಾಟನೆ ಕೂಡ ಮಾಡಿದ್ದಾರೆ. ಆದರೂ ಮನೆಗಳನ್ನು ವಿತರಿಸದೇ ಬಡವರಿಗೆ ಸಂಕಷ್ಟವನ್ನುಂಟು ಮಾಡುತ್ತಿರುವುದು ನೋವಿನ ಸಂಗತಿ” ಎಂದರು.
“ಹಲವು ವರ್ಷಗಳಿಂದ ಹಣ ಕಟ್ಟಿರುವ ಬಡಜನರು ಮನೆಸಿಗುತ್ತೆ ಅಂತ ಪುರಸಭೆಗೆ ಅಲೆದಾಡುತ್ತಲೇ ಇದ್ದಾರೆ. ಈಗ ಮನೆ ಕೊಡುತ್ತೇವೆ. ಆಗ ಮನೆ ಕೊಡುತ್ತೇವಿ ಅಂತ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉತ್ತರ ಕೊಡುತ್ತಲೇ ಬರುತ್ತಿದ್ದಾರೆಯೇ ವಿನಃ ಮನೆ ಹಂಚಿಕೆ ಮಾಡಲು ಕ್ರಮ ಕೈಗೊಳ್ಳದಿರುವುದು ಖೇದಕರವಾದುದು” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಬಡ ಜನರು ವಾಸ ಮಾಡಲು ನಿರ್ಮಾಣಗೊಂಡ ಮನೆಗಳು ಇದೀಗ ಖಾಲಿ ಬಿದ್ದಿರುವ ಪರಿಣಾಮ ಅನೈತಿಕ ಚಟುವಟಿಗಳ ತಾಣವಾಗಿ ಮಾರ್ಪಟ್ಟಿವೆ. ವಾಸಯೋಗ್ಯ ಮನೆಗಳು ಅನೈತಿಕ ಚಟುವಟಿಕೆ ತಾಣವಾಗಲು ಸಂಬಂಧಿಸಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೇ ಹೊಣೆಗಾರರು” ಎಂದು ಆರೋಪಿಸಿದರು.
ಮನವಿ ಸ್ವೀಕರಿಸಿದ ಪುರಸಭೆ ಅಧ್ಯಕ್ಷ ಸಿದ್ಧಾರ್ಥಗೌಡ ಪಾಟೀಲ ಮಾತನಾಡಿ, “ಮನೆ ವಿತರಣೆ ಮಾಡಲು ಪುರಸಭೆಯು ಸಿದ್ಧವಿದೆ. ಆದರೆ ಆಶ್ರಯ ಯೋಜನೆ ಸಮಿತಿಗೆ ಮಾನ್ಯ ಶಾಸಕರು ಅಧ್ಯಕ್ಷರಾಗಿದ್ದಾರೆ. ಗುತ್ತಿಗೆದಾರರು ಇದರಲ್ಲಿ ವಿಳಂಬ ಮಾಡುತ್ತಿದ್ದಾರೆ. ಫಲಾನುಭವಿಗಳಿಗೆ ಮನೆ ವಿತರಿಸಲು ಶಾಸಕರ ಜೊತೆಯಲ್ಲಿ ಈಗಾಗಲೇ ಚರ್ಚಿಸಿದ್ದೇವೆ. ಅದಾಗ್ಯೂ ಈ ವಿಷಯವನ್ನು ಶಾಸಕರ ಗಮನಕ್ಕೆ ತರುತ್ತೇವೆ. ಶಾಸಕರು ಈ ಕುರಿತು ಕ್ರಮ ಕೈಗೊಳ್ಳುವ ಭರವಸೆಯಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಸಾಲಿಡಾರಿಟಿ ಯೂತ್ ಮೂವ್ಮೆಂಟ್ ರಾಜ್ಯಾಧ್ಯಕ್ಷರಾಗಿ ಡಾ.ನಸೀಮ್ ಅಹ್ಮದ್ ನೇಮಕ
ಪುರಸಭೆ ಮುಖ್ಯಾಧಿಕಾರಿ ಕೆ ಮಲ್ಲೇಶ್ ಮಾತನಾಡಿ, “ಶಾಸಕರು ಇನ್ನು ಕೆಲವೇ ದಿನಗಳಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಈ ವಿಷಯವನ್ನು ಅಂತಿಮಗೊಳಿಸಿ ಫಲಾನುಭವಿಗಳಿಗೆ ಮನೆ ವಿತರಿಸಲಾಗುವುದು” ಎಂದರು.
ಈ ಸಂದರ್ಭದಲ್ಲಿ ಜಿ+1 ಮನೆ ಫಲಾನುಭವಿಗಳ ಹೋರಾಟ ಸಮಿತಿ ಹಾಗೂ ಡಿವೈಎಫ್ಐ ಮುಖಂಡರಾದ ವಿಠ್ಠಲ ಮಾಳೋಧೆ, ವೀರಣ್ಣ ಗಡ್ಡಿಯವರ, ಅಸ್ಮಾ ದೇವಸೂರು, ಭಾರತಿ ಪೂಜಾರ, ಕಿಶೋರ ದೋತ್ರದ, ಶಾಂತಕ್ಕ ಗಡ್ಡಿಯವರ, ಮಂಜುಳಾ ತಡಸ, ದಾಯಿ ಹಲೀಮಾ ನವಲಗುಂದ, ಪಾವನಾ ಮ್ಯಾದರ, ಸಾವಿತ್ರಿ ಚೌಹಾಣ, ಕಸ್ತೂರಿ ಗಣೇಶ ವಡ್ಡರ, ಗಾಯಿತ್ರಿ ಮಾಳೋಧೆ, ಮೌಲಾಲಿ ನವಲಗುಂದ, ನಾರಾಯಣ ಶಿಡ್ಲಾಪುರ, ಅಲ್ಲಾವುದ್ದೀನ ಜಮಾದಾರ, ಮಧುಕರ ಕೇದಾರಿ, ನಾಸೀರ್ ಬಡಿಗೇರ, ಹೊನ್ನವ್ವ ಹೋತನಳ್ಳಿ, ಹನಮಂತಪ್ಪ ತಡಸಿನಕೊಪ್ಪ ಸೇರಿದಂತೆ ಇತರರು ಇದ್ದರು.