ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಕೊನೆಯ ಗ್ರಾಮ ಬಸವನಕೊಪ್ಪದಲ್ಲಿ ಶುದ್ಧ ಕುಡಿಯುವ ನೀರು, ಚರಂಡಿ ವ್ಯವಸ್ಥೆ, ಸ್ವಚ್ಛತೆಯಿಲ್ಲದೆ ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು ಪ್ರತೀ ನಿತ್ಯ ಜೀವನವನ್ನು ಸಾಗಿಸುವಂತ ಸ್ಥಿತಿ ಇದೆ.
ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಇದ್ದರೂ ಕೂಡಾ ಒಂದು ವರ್ಷದಿಂದ ಅದು ಕಾರ್ಯವನ್ನು ನಿರ್ವಹಿಸುತ್ತಿಲ್ಲ. ಶುದ್ಧ ಕುಡಿಯುವ ನೀರಿಗಾಗಿ ನಿತ್ಯ ಪಕ್ಕದ ಕಡಕೋಳ ಹಾಗೂ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮಕ್ಕೆ ಹೋಗಿ ಶುದ್ಧ ಕುಡಿಯುವ ನೀರು ತರುವಂತಹ ಪರಿಸ್ಥಿತಿ ಗ್ರಾಮಸ್ಥರದ್ದು.
ಮನೆಯಲ್ಲಿ ನೀರು ತರಲು ಜನ ಇಲ್ಲದಂತ ಮನೆಗಳಲ್ಲಿ ನಿತ್ಯ ಬರುವ ಪ್ಲೋರೈಡ್‌ಯುಕ್ತ ನೀರು ಕುಡಿದು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿ ಆಸ್ಪತ್ರೆಗಳಿಗೆ ಅಲೆದಾಡುವ ಸ್ಥೀತಿಯಲ್ಲಿವೆ ಕೆಲ ಕುಟುಂಬಗಳು.
ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಕೊಳಚೇನೀರು ರಸ್ತೆಯಲ್ಲಿಯೇ ನಿಲ್ಲುತ್ತಿದೆ. ಇದರಿಂದ ರಸ್ತೆಗಳೆಲ್ಲ ಹಾಳಾಗಿ ಹೋಗಿದ್ದು, ಅವುಗಳ ದುರಸ್ತಿಗೆ ಪಂಚಾಯಿತಿ ಮುಂದಾಗಿಲ್ಲ. ಸಾರ್ವಜನಿಕರು ಇದರಲ್ಲಿಯೇ ಓಡಾಡುತ್ತಾರೆ.
ಗ್ರಾಮದ ಅಭಿವೃದ್ಧಿ ಹಾಗೂ ಸ್ವಚ್ಛತೆ, ಸಾರ್ವಜನಿಕರ ಆರೋಗ್ಯ ಕಾಯಲು ಕೈಗೊಳ್ಳುವ ಕೆಲಸಕ್ಕೆ ಸರ್ಕಾರ ಗ್ರಾಮ ಪಂಚಾಯ್ತಿಗೆ ಅನುಧಾನದ ಅನುಕೂಲ ಕಲ್ಪಿಸಿದೆ. ಅದನ್ನು ಸಮರ್ಪಕವಾಗಿ ಬಳಕೆ ಮಾಡದೇ ಗ್ರಾಮದ ಅಭಿವೃದ್ಧಿ ಹಾಗೂ ಸ್ವಚ್ಛತೆ ಕೈಗೊಳ್ಳಬೇಕಾಗಿದ್ದ ಗ್ರಾಮ ಪಂಚಾಯ್ತಿ ಅಧಿಕಾರಿಕಾರಿಗಳು ಮತ್ತು ಜನ ಪ್ರತಿನಿಧಿಗಳು ಮಾತ್ರ ವರ್ಷಕ್ಕೊಮ್ಮೆ ಕರವಸೂಲಿ ಮಾಡುತ್ತಾರೆ ಹೊರೆತು, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ನಮ್ಮ ಊರಿನ ಸಮಸ್ಯೆಗಳನ್ನು ಬೇಗ ಬಗೆಹರಿಸಿ ಶೂದ್ಧ ನೀರು, ರಸ್ತೆ, ಚರಂಡಿ ವ್ಯವಸ್ಥೆ ಕಲ್ಪಿಸಿ ಎಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.