ಶಾಲಾ-ಕಾಲೇಜ್ ಕ್ಯಾಂಪಸ್ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ವಿದ್ಯಾರ್ಥಿನಿಯರು, ಮಹಿಳೆಯರಿಗೆ ಸೂಕ್ತ ರಕ್ಷಣೆ ಇಲ್ಲ ಎಂದು ಆರೋಪಿಸಿ, ಸೂಕ್ತ ರಕ್ಷಣೆ ನೀಡಲು ಮತ್ತು ಸಿಸಿ ಕ್ಯಾಮರಾಗಳನ್ನು ಅಳವಡಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌದರಿ ಅವರಿಗೆ ಭಾರತ ವಿದ್ಯಾರ್ಥಿ ಫೆಡರೇಷನ್ ಮನವಿ ಪತ್ರ ಸಲ್ಲಿಸಿತು.
ವಿವಿಧ ಕಾರ್ಯಕ್ರಮಗಳ ಹಿನ್ನೆಲೆ ಹಾವೇರಿ ನಗರಕ್ಕೆ ಆಗಮಿಸಿದ್ದ ನಾಗಲಕ್ಷ್ಮೀ ಚೌದರಿ ಅವರಿಗೆ ಪರಿವೀಕ್ಷಣಾ ಮಂದಿರದಲ್ಲಿ ವಿದ್ಯಾರ್ಥಿ ಸಮುದಾಯದ ಪರವಾಗಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ಹಾವೇರಿ ಜಿಲ್ಲಾ ಸಮಿತಿಯ ಕಾರ್ಯಕರ್ತರು ಮನವಿ ಸಲ್ಲಿಸಿದರು.
ಹಾವೇರಿ ಜಿಲ್ಲಾ ಕೇಂದ್ರ ಸೇರಿದಂತೆ ತಾಲ್ಲೂಕು ಕೇಂದ್ರದ ಬಸ್ ನಿಲ್ದಾಣ, ಶಾಲಾ – ಕಾಲೇಜು, ಹಾಸ್ಟೆಲ್ ಕಡೆಗಳಲ್ಲಿ ವಿದ್ಯಾರ್ಥಿನಿಯರಿಗೆ, ಮಹಿಳೆಯರಿಗೆ ಚೂಡಾಯಿಸುವುದು, ರೇಗಿಸುವ ಪುಂಡ ಪೋಕರಿಗಳ ಹಾವಳಿ ಹೆಚ್ಚಾಗಿದ್ದು ಒಬ್ಬಂಟಿಯಾಗಿ ಓಡಾಡಲು ವಿದ್ಯಾರ್ಥಿನಿಯರು, ಮಹಿಳೆಯರು ಭಯ ಪಡುವಂತ ವಾತಾವರಣ ನಿರ್ಮಾಣವಾಗಿದೆ ಎಂದು ಕಾರ್ಯಕರ್ತರು ಆರೋಪಿಸಿದರು.
ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ, ಶೋಷಣೆ, ಲೈಂಗಿಕ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ಸೂಕ್ತ ಭದ್ರತೆ,ರಕ್ಷಣೆ ಇಲ್ಲದೆ ಇರುವುದು ಈ ಕೃತ್ಯಗಳಿಗೆ ಕಾರಣವಾಗಿವೆ. ಈ ಪ್ರಕರಣಗಳು ದೇಶಾದ್ಯಂತ, ರಾಜ್ಯಾದ್ಯಂತ ಪ್ರತಿ ದಿನವೂ ನಡೆಯುತ್ತಿದ್ದು ಸರ್ಕಾರ ಇವುಗಳ ಬಗ್ಗೆ ಗಮನ ನೀಡದೆ ಇರುವುದು ಈ ಕೃತ್ಯಗಳು ಹೆಚ್ಚಾಗಿವೆ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಎಲ್ಲಾ ಶಾಲಾ – ಕಾಲೇಜು, ಹಾಸ್ಟೆಲ್ ಗಳಲ್ಲಿ ಲೈಂಗಿಕ ಕಿರುಕುಳ ವಿರೋಧಿ ಸಮಿತಿ ರಚನೆ ಮಾಡಬೇಕು. ಆದರೆ ಇದನ್ನು ಸರ್ಕಾರ ಜಾರಿ ಮಾಡಿಲ್ಲ ತಕ್ಷಣವೇ ರಚನೆ ಮಾಡಬೇಕು ಎಂದು ಒತ್ತಾಯಿಸಿದರು.
ಹಾವೇರಿ ಜಿಲ್ಲೆಯಲ್ಲಿ ಕೂಡ ಪ್ರತಿನಿತ್ಯವೂ ಮಹಿಳೆಯರ ವಿದ್ಯಾರ್ಥಿನಿಯರ ಮೇಲಿನ ದೌರ್ಜನ್ಯ, ಕೊಲೆಗಳು ನಡೆಯುತ್ತಿದ್ದು ಇತರಹದ ಪ್ರಕರಣಗಳ ತಡೆಯುವಲ್ಲಿ ಸರ್ಕಾರ ಮತ್ತು ಅಧಿಕಾರಿಗಳು ನಿರ್ಲಕ್ಷದಿಂದ ದೌರ್ಜನ್ಯಗಳು, ಅತ್ಯಾಚಾರಗಳು ಹೆಚ್ಚುತ್ತಲಿವೆ. ಬಸ್ ನಿಲ್ದಾಣ, ಶಾಲಾ-ಕಾಲೇಜ್ , ಕಾಂಪೌಂಡ್ ಗೋಡೆಯ ಮೇಲೆ ಕುಳಿತುಕೊಂಡು ರೇಗಿಸುವುದು, ಚೂಡಾಯಿಸುವ ಕೃತ್ಯ ಮಾಡುವ ಘಾತುಕರ ವಿರುದ್ಧ ಕ್ರಮಕೈಗೊಳಲು ಹೇಳಿದಾಗ ಪೋಲಿಸ್ ಅಧಿಕಾರಿಗಳು ಸಾಕ್ಷಿ ಕೇಳುತ್ತಾರೆ. ಕಂಪ್ಲೀಟ್ ಕೊಡಿ ಎಂದು ಹೇಳುತ್ತಾರೆ. ಕಾನೂನಾತ್ಮಕವಾಗಿ ಕೇಸ್ ದಾಖಲು ಮಾಡಬೇಕು ಆದರೆ ಕೆಲ ಮನೆತನಗಳಲ್ಲಿ ಹೆಣ್ಣು ಹೊರಗೆ ಓದಲು ಕಳಿಸುವುದ ಕಷ್ಟ ಈ ಸಂದರ್ಭದಲ್ಲಿ ಆ ಮಹಿಳೆ, ವಿದ್ಯಾರ್ಥಿನಿಯರು ಪೋಲಿಸ್ ಠಾಣೆ, ಕೋರ್ಟ್ ಅಂತಾ ಓಡಾಡಲು ಸಾದ್ಯವೇ? ಇಡೀ ಜಿಲ್ಲಾದ್ಯಂತಾ ಪಬ್ಲಿಕ್ ಗಳಲ್ಲಿ ಸಿ ಸಿ ಕ್ಯಾಮರಾಗಳು ಇಲ್ಲ. ಕೆಲವೊಂದು ಕಡೆ ಇದ್ದರೂ ಹೆಸರಿಗೆ ಅಷ್ಟೇ ಕಣ್ಣಿದ್ದು ಕುರುಡುನಂತೆ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಆದರಿಂದ ಈ ಪ್ರಕರಣಗಳನ್ನು ಸೂಕ್ಷ್ಮವಾಗಿ ಅರ್ಥೈಸಿಕೊಂಡು ವಿದ್ಯಾರ್ಥಿನಿಯರಿಗೆ- ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಹಾಗೂ ಕೆಎಸ್ಆರ್ಟಿಸಿ, ಸಮಾಜ ಕಲ್ಯಾಣ, ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಡಿಡಿಪಿಐ, ಡಿಡಿಪಿಯು ಎಲ್ಲಾ ಶಾಲಾ ಕಾಲೇಜುಗಳಿಗೆ ನೋಟಿಸ್ ಹಾಕಿ ವಿದ್ಯಾರ್ಥಿನಿಯರು ರಕ್ಷಣೆಗಾಗಿ ಸಭೆ, ಕಾರ್ಯಕ್ರಮಗಳು ಆಯೋಜನೆ ಮಾಡಬೇಕು ಎಂದು ಎಸ್‌ಎಫ್‌ಐ ಒತ್ತಾಯಿಸುತ್ತದೆ ಎಂದರು.
ಮನವಿ ಪತ್ರ ಸ್ವೀಕರಿಸಿದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌದರಿ ಮಾತನಾಡಿ, “ವಿದ್ಯಾರ್ಥಿನಿಯರಿಗೆ, ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡಲು ಕೂಡಲೇ ಪೋಲಿಸ್ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ನೀವು ಸಲ್ಲಿಸಿದ ಇತರೆ ಬೇಡಿಕೆಗಳನ್ನು ನಾಳೆ ನಡೆಯುವ ಪರಿಶೀಲನಾ ಸಭೆಯಲ್ಲಿ ಚರ್ಚೆ ಮಾಡಿ ಸಂಬಂಧಿಸಿದ ಅಧಿಕಾರಿಗಳಿಗೆ ಕ್ರಮಕೈಗೊಳಲು ನೋಟಿಸ್ ನೀಡುತ್ತೇನೆ” ಎಂದರು.
ಇದನ್ನೂ ಓದಿ: ಹಾವೇರಿ | ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ಲೋಕರ್ಪಾಣೆ
ಎಸ್ ಎಫ್ ಐ ಬೇಡಿಕೆಗಳು ಇಂತಿವೆ:
- ನಗರದ ಹೊರ ವಲಯದಲ್ಲಿರುವ ಶಾಲಾ ಕಾಲೇಜು ವಿವಿ ಹಾಗೂ ವಿದ್ಯಾರ್ಥಿ ವಸತಿ ನಿಲಯಗಳಿಗೆ ಬೀಟ್ ಪೋಲಿಸ್ ರನ್ನು ನೇಮಿಸಬೇಕು.
- ಕೆಎಸ್ಆರ್ಟಿಸಿ, ಸಮಾಜ ಕಲ್ಯಾಣ, ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಡಿಡಿಪಿಐ, ಡಿಡಿಪಿಯು, ಎಲ್ಲಾ ಶಾಲಾ ಕಾಲೇಜುಗಳಿಗೆ ನೋಟಿಸ್ ಹಾಕಿ ವಿದ್ಯಾರ್ಥಿನಿಯರ ರಕ್ಷಣೆಗಾಗಿ ಸಭೆ ನಡೆಸಲು ಸೂಚಿಸಬೇಕು .
- ವರದ ಪಡೆ ತನ್ನ ಕಾರ್ಯವನ್ನು ಇನ್ನಷ್ಟು ಚುರುಕುಗೊಳಿಸಲು ಸೂಚಿಸಬೇಕು.
- ನಗರದ ಹೊರವಲಯ ಹಾಗೂ ನಗರದಲ್ಲಿ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು.
- ದುರಸ್ತಿಯಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಬದಲಾಯಿಸಿ ಹೊಸ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು.
- ಶಾಲಾ-ಕಾಲೇಜು ಹಾಗೂ ಮಹಿಳೆಯರು ಕೆಲಸ ಮಾಡುವಂತಹ ಪದೇಶಗಳಲ್ಲಿ ಲೈಂಗಿಕ ಕಿರುಕುಳ ವಿರೋಧಿ ಸಮಿತಿಯನ್ನು ರಚನೆ ಮಾಡಬೇಕು.
- ಪ್ರೋ ವರ್ಮಾ ಸಮಿತಿಯ ಶಿಪಾರಸುಗಳನ್ನು ಜಾರಿ ಮಾಡಬೇಕು.
- ಬಸ್ ನಿಲ್ದಾಣ, ಹಾಸ್ಟೆಲ್, ಶಾಲಾ – ಕಾಲೇಜು ಗಳಲ್ಲಿ ದೂರ ಪೆಟ್ಟಿಗೆ ಹಾಕಬೇಕು ಸರಿಯಾಗಿ ನಿರ್ವಹಿಸಬೇಕು.
9) ಹಾಸ್ಟೆಲ್ ಗಳಲ್ಲಿ ವಿದ್ಯಾರ್ಥಿನಿಯರನ್ನು ಕೆಲಸಕ್ಕೆ ಬಳಕೆ ಮಾಡಿಕೊಳ್ಳುವುದು ತಡೆಗಟ್ಟಬೇಕು.
10)ಶಾಲಾ-ಕಾಲೇಜ್, ಹಾಸ್ಟೆಲ್ ಗಳಲ್ಲಿ ವಿದ್ಯಾರ್ಥಿನಿಯರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಬೇಕು.
11) ಶಾಲಾ-ಕಾಲೇಜ್, ಹಾಸ್ಟೆಲ್ ಸೇರಿದಂತೆ ಸರ್ಕಾರಿ ಕಚೇರಿಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ಅಗತ್ಯ ಮೂಲಭೂತ ಸೌಕರ್ಯಗಳೊಂದಿಗೆ ಶೌಚಾಲಯ, ವಿಶ್ರಾಂತಿ ಕೊಠಡಿಗಳನ್ನು ಒದಗಿಸಬೇಕು.
ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್, ಮುಖಂಡರಾದ ಅರುಣ್ ನಾಗವತ್, ಚೈತ್ರಾ ಕೊರವರ್, ಗಂಗಾ ಯಲ್ಲಾಪುರ, ಮೇಘನಾ ತುಮ್ಮಿನಕಟ್ಟಿ, ಪ್ರಿಯಾಂಕ್ ಝರಪ್ಲ, ಚಂದನ, ಐಶ್ವರ್ಯ ಬಾರ್ಕಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.