ಮಹಿಳೆಯರು ನಾಯಕತ್ವ ಬೆಳೆಸಿಕೊಂಡು, ಮುಂದಾಳತ್ವದೊಂದಿಗೆ ಸಮುದಾಯದ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸಿದರೆ, ಜನರು ನಮ್ಮನ್ನು ಗುರುತಿಸಿ ನಮ್ಮ ಜೊತೆ ಇರುತ್ತಾರೆ ಮತ್ತು ನಮ್ಮ ನಾಯಕತ್ವವನ್ನು ಒಪ್ಪಿಕೊಳ್ಳುತ್ತಾರೆ. ಆದ್ದರಿಂದ ಒಕ್ಕೂಟದ ಪದಾಧಿಕಾರಿಗಳು ಪ್ರತಿಯೊಬ್ಬರೂ ಮಹಿಳೆಯರ ಏಳಿಗೆಗೆ ಶ್ರದ್ಧೆಯಿಂದ ಶ್ರಮಿಸಿದರೆ ಅವರ ಕುಟುಂಬದ ಏಳಿಗೆಗೆ ಶ್ರಮಿಸಿದಂತಾಗುತ್ತದೆ ಎಂದು ರೋಶನಿ ಸಮಾಜ ಸೇವಾ ಸಂಸ್ಥೆಯ ಸಹ ನಿರ್ದೇಶಕಿ ಸಿಸ್ಟರ್ ಶಾಂತಿ ಡಿಸೋಜಾ ಹೇಳಿದರು.
ರೋಶನಿ ಸಮಾಜ ಸೇವಾ ಸಂಸ್ಥೆ ಹಾನಗಲ್‌ನಲ್ಲಿ ಹಮ್ಮಿಕೊಂಡಿದ್ದ ಆದರ್ಶ ತಾಲೂಕು ಮಹಿಳಾ ಒಕ್ಕೂಟದ ಸಭೆಗೆ ಮಾರ್ಗದರ್ಶಕರಾಗಿ ಆಗಮಿಸಿದ್ದ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಒಕ್ಕೂಟದ ಅಧ್ಯಕ್ಷೆ ಪ್ರೇಮಾ ಕಾಳೇರ ಮಾತನಾಡಿ, “ಮಹಿಳೆಯರ ಆರ್ಥಿಕ, ಸಾಮಾಜಿಕ ಸಬಲೀಕರಣದ ಸರ್ವತೋಮುಖ ಬೆಳವಣಿಗೆ ಅವಕಾಶಗಳನ್ನು ನೀಡಲು ಈ ವೇದಿಕೆ ಯಾವಾಗಲು ಸಿದ್ದವಾಗಿರುತ್ತದೆ” ಎಂದು ಹೇಳಿದರು.
ಜನವೇದಿಕೆ ಮುಖಂಡ ಪಕ್ಕಿರಪ್ಪ ಬಾಳೂರ ಮಾತನಾಡಿ, “ಹಳ್ಳಿಗಳಲ್ಲಿ ಇರುವ ನಮ್ಮನ್ನು ಗುರುತಿಸಿ ನಾಯಕತ್ವ ಬೆಳೆಸಿ ಇಂತಹ ಕಾರ್ಯಕ್ರಮಗಳಲ್ಲಿ ಸನ್ಮಾನಿಸುತ್ತಿರುವುದು ಸಂತೋಷವಾಗುತ್ತದೆ. ಸಮುದಾಯದಲ್ಲಿರುವ ನೂರಾರು ವೃದ್ದರು, ಬಡವರು, ವಿಧವೆಯರನ್ನು ಗುರುತಿಸಿ ಅವರಿಗೆ ಸಿಗಬೇಕಾದ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಮನವರಿಕೆ ಮಾಡಿ ಅವುಗಳನ್ನು ದೊರಕಿಸಿ ಕೊಡುವಲ್ಲಿ ನಾವು ಶ್ರಮಿಸುತ್ತಿದ್ದೇವೆ” ಎಂದು ಹೇಳಿದರು.
ಕಾರ್ಯಕ್ರಮಕ್ಕೂ ಮುನ್ನ ಸಂಸ್ಥೆಯ ರಜತ ಮಹೋತ್ಸವದ ಪ್ರಯುಕ್ತ 25 ವರ್ಷಗಳಿಂದ ಮಹಿಳೆಯರ ಸಬಲೀಕರಣದಲ್ಲಿ ತೊಡಗಿರುವ ಹಿರೇಕಣಗಿ ವಲಯದ ಮಹಿಳಾ ಸ್ವಸಹಾಯ ಸಂಘಗಳ ಲಕ್ಷ್ಮವ್ವ ಬೈಲವಾಡ, ಪವಿತ್ರಾ ಬೈಲವಾಡ, ಲಕ್ಷ್ಮವ್ವ ಓಣೀಕರಿ, ಗಂಗವ್ವ ಕಾಳೇರ ಮತ್ತು ಜನವೇದಿಕೆ ಮುಖಂಡ ಫಕ್ಕಿರಪ್ಪ ಬಾಳೂರ, ಪಾಲಾಕ್ಷಯ್ಯ ಹಿರೇಮಠ, ರಾಮಚಂದ್ರ ಶಿಡ್ಲಾಪುರ, ಪದ್ಮಾವತಿ ಕೊಳ್ಳೂರ ಹಾಗೂ ಲಕ್ಷ್ಮವ್ವ ಲಮಾಣಿ ಎಂಬುವವರನ್ನು ಸನ್ಮಾನಿಸಿ ಗೌರವಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ರಷ್ಯಾದ ಮಹಾ ಕ್ರಾಂತಿಗೆ 106 ವರ್ಷ
ಸಭೆಯಲ್ಲಿ ಉಪಾಧ್ಯಕ್ಷೆ ಕಮಲಾಕ್ಷಿ ಬೆಳಗಲಿ, ಖಜಾಂಚಿ ಚಂಪಾ ಕರ್ಜಗಿ, ಸಮುದಾಯ ಸಂಘಟನೆ ಸಂಯೋಜಕ ಕಲ್ಲಪ್ಪ ನಾಯ್ಕರ, ಮಹಿಳಾ ಸಬಲೀಕರಣದ ಸಂಯೋಜಕ ಡಿಗ್ಗಪ್ಪ ಲಮಾಣಿ, ಸಿಬ್ಬಂದಿ ರೂಪಾ ರಜಪೂತ, ಶೀಲಾ ಮ್ಯಾಗಳಮನಿ ಮತ್ತು ಒಕ್ಕೂಟದ ಸರ್ವ ಸದಸ್ಯರು ಇದ್ದರು.