ರಾಜ್ಯದಲ್ಲಿ ಹರಳು ರೂಪದ ಯೂರಿಯಾ ರಸಗೊಬ್ಬರದ ಅಭಾವ ಸೃಷ್ಟಿಯಾದ ಬೆನ್ನಲ್ಲೇ ದ್ರವ ರೂಪದ ‘ನ್ಯಾನೋ ಯೂರಿಯಾ’ ಗೊಬ್ಬರ ಬಳಕೆಗೆ ರೈತರು ಮುಂದಾಗುತ್ತಿದ್ದಾರೆ.
ಯೂರಿಯಾ ರಸಗೊಬ್ಬರದ ಬೇಡಿಕೆ ತಗ್ಗಿಸುವ ಉದ್ದೇಶದಿಂದ ದ್ರವ ರೂಪದ ‘ನ್ಯಾನೋ ಯೂರಿಯಾ’ ಬಳಸುವಂತೆ ಕೃಷಿ ತಜ್ಞರು ರೈತರಿಗೆ ಸಲಹೆ ನೀಡುತ್ತಿದ್ದಾರೆ. ಹಾವೇರಿ ಜಿಲ್ಲೆಯ, ಸವಣೂರು ತಾಲೂಕಿನ ಕೆಲವು ರೈತರು ಯೂರಿಯಾ ಗೊಬ್ಬರದ ಬದಲಿಗೆ ‘ನ್ಯಾನೋ ಯೂರಿಯಾ’ದ ಬಳಕೆಗೆ ಮುಂದಾಗಿದ್ದಾರೆ.
ಹಾವೇರಿ ಜಿಲ್ಲೆಯಲ್ಲಿ 1 ಲಕ್ಷದ 93 ಸಾವಿರ ಹೆಕ್ಟೇರ್ ಗೋವಿನಜೋಳ ಬೆಳೆಯಲಾಗಿದೆ. ನಿರಂತರ ಮಳೆಯಿಂದ ಬೆಳೆಗಳು ಹಳದಿ ಬಣ್ಣಕ್ಕೆ ತಿರುಗಿದ್ದರಿಂದ ಹರಳುರೂಪದ ಯೂರಿಯಾ ರಸಗೊಬ್ಬರಕ್ಕಾಗಿ ಪರದಾಡುತ್ತಿದ್ದರು. ನಿರೀಕ್ಷಿತ ಪ್ರಮಾಣದಷ್ಟು ಯೂರಿಯಾ ಗೊಬ್ಬರದ ಲಭ್ಯತೆ ಇಲ್ಲದ ಕಾರಣ ಕೃಷಿ ಇಲಾಖೆಯ ಅಧಿಕಾರಿಗಳು ಪರ್ಯಾಯವಾಗಿ ‘ದ್ರವ ರೂಪದ ನ್ಯಾನೋ ಯೂರಿಯಾ’ ಗೊಬ್ಬರಕ್ಕೆ ಪ್ರೋತ್ಸಾಹ ನೀಡಿದ್ದರು.
ಕೃಷಿ ತಜ್ಞರ ಸಲಹೆ ಮೇರೆಗೆ ಸವಣೂರು ಭಾಗದ ರೈತರು ಯೂರಿಯಾ ಪರ್ಯಾಯವಾಗಿ ‘ನ್ಯಾನೋ ಡಿಎಪಿ’ ಹಾಗೂ ‘ನ್ಯಾನೋ ಯೂರಿಯಾ’ ಎಂಬ ದ್ರವ ರೂಪದ ಗೊಬ್ಬರದ ಮೊರೆ ಹೋಗಿದ್ದಾರೆ.
ಹಾವೇರಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ್ ಸುದ್ದಿಗಾರರೊಂದಿಗೆ ಮಾತನಾಡಿ, “ನ್ಯಾನೋ ಗೊಬ್ಬರವನ್ನು ಕಡಿಮೆ ಕೂಲಿಕಾರ್ಮಿಕರಿಂದ ಬಳಿಸಬಹುದು. ನೇರವಾಗಿ ಗಿಡಗಳ ಎಲೆಮೂಲಕ ನ್ಯಾನೋ ಯೂರಿಯಾ ಗಿಡಗಳಿಗೆ ತಲುಪುತ್ತದೆ. ಕಳೆಗಳಿಗೆ ತಲುಪದಂತೆ ನೋಡಿಕೊಳ್ಳಬಹುದು. ಭೂಮಿ ಸಹ ಫಲವತ್ತತೆಯಿಂದ ಇರುತ್ತೆ. ಸಾಗಾಣಿಕೆ, ಸಿಂಪಡಣೆ ಎರಡೂ ಸುಲಭ. ಮಾರುಕಟ್ಟೆಯಲ್ಲಿ ಹೆಚ್ಚು ನ್ಯಾನೋ ಯೂರಿಯಾ ಗೊಬ್ಬರ ಸಿಗುತ್ತಿದ್ದು, ರೈತರು ಹರಳು ಯೂರಿಯಾ ಗೊಬ್ಬರ ಬಿಟ್ಟು ನ್ಯಾನೋ ಯೂರಿಯಾದ ಕಡೆ ಗಮನ ಹರಿಸಿದರೆ ಯೂರಿಯಾದ ಕೊರತೆ ಸಮಸ್ಯೆಯಾಗುವುದಿಲ್ಲ” ಎನ್ನುತ್ತಾರೆ.