15 ವರ್ಷಗಳಿಂದ ದುಡಿಯುತ್ತಿದ್ದ ಹಾವೇರಿ ಆಸ್ಪತ್ರೆಯ ಕೊರೊನಾ ನೌಕರರನ್ನು ಸರ್ಕಾರ ಅನುದಾನದ ಕೊರತೆ ಹೆಸರಿನಲ್ಲಿ ಸೇವೆಯಿಂದ ವಜಾ ಮಾಡಲು ಹೊರಟಿರುವುದು ವಿಪರ್ಯಾಸವೇ ಸರಿ. ಸರ್ಕಾರ ಅವರ ಸೇವೆಗೆ ಬೆಲೆ ಕೊಟ್ಟು ಅವರ ಕಷ್ಟಕ್ಕೆ ಸ್ಪಂದಿಸುವ ಕೇಲಸ ಆಗಬೇಕಿದೆ ಎಂದು ದಸಂಸ ಹಾವೇರಿ ಜಿಲ್ಲಾ ಸಂಚಾಲಕ ಉಡಚಪ್ಪ ಮಾಳಗಿ ಆಗ್ರಹಿಸಿದರು.
ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿದ್ದ 26 ಮಂದಿ ನೌಕರರನ್ನು ಅಮಾನತುಗೊಳಿಸಿರುವುದನ್ನು ಖಂಡಿಸಿ ಹಾವೇರಿ ಜಿಲ್ಲಾಸ್ಪತ್ರೆ ಎದುರು ನೌಕರದಾರರಿಂದ ನಡೆಯುತ್ತಿರುವ ಎರಡನೇ ದಿನದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದರು.
“ಆಸ್ಪತ್ರೆ ನೌಕರರು ಕೊರೊನಾ ಕಾಲದಲ್ಲಿ ದೇಶದ ಜನತೆಗೆ ದೇವರಾಗಿ ಕಂಡಿದ್ದರು. ಆದರೆ ಇಂದು ಅವರಿಗೆ ವೇತನ ನೀಡಲು ಅನುದಾನ ಇಲ್ಲ ಎನ್ನುವ ಕಾರಣ ನೀಡಿ ಸರ್ಕಾರ ಅವರನ್ನು ವಜಾ ಮಾಡಲು ಹೊರಟಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಗುತ್ತಿಗೆ ನೌಕರರೆಲ್ಲರು 15 ವರ್ಷಗಳಿಂದ ಅಲ್ಲಿ ದುಡಿಯುತ್ತಿದ್ದರು. ಆ ದುಡಿಮೆ ನಚ್ಚಿಕೊಂಡು ತಮ್ಮ ಬದುಕು ಕಟ್ಟಿಕೊಂಡಿದ್ದರು. ಆದರೆ ಇದೀಗ ಸರ್ಕಾರ ಅವರ ಬದುಕಿಗೆ ಕೊಳ್ಳಿ ಇಡುವ ಕೆಲಸ ಮಾಡಿದೆ. ಎಲ್ಲ ಕಾರ್ಮಿಕರ ಕುರಿತಾಗಿಯೂ ಮಾತನಾಡುತ್ತಾರೆ,. ಆದರೆ, ಗುತ್ತಿಗೆ ಕಾರ್ಮಿಕರ ಕುರಿತು ಯಾವುದೇ ಜನಪ್ರತಿನಿದಿಯೂ ಸೊಲ್ಲೆತ್ತುವುದಿಲ್ಲ. ಈಗಲಾದರೂ ಡಿಸೆಂಬರ್ 14ರಂದು ನಡೆಯುವ ಬೆಳಗಾವಿ ಅಧಿವೇಶನದಲ್ಲಿ ಶಾಸಕರು ಗುತ್ತಿಗೆ ಕಾರ್ಮಿಕರ ಕುರಿತು ದನಿ ಎತ್ತಬೇಕು” ಎಂದು ಆಗ್ರಹಿಸಿದರು.
“ಕಳೆದ ಹದಿನೈದು ವರ್ಷಗಳಿಂದ ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ 75 ಮಂದಿ ಡಿ ದರ್ಜೆ ನೌಕರರು ಕೆಲಸ ಮಾಡುತ್ತಿದ್ದರು. ಅದರಲ್ಲಿ 14 ಮಂದಿ ಡಿ ದರ್ಜೆ ನೌಕರರು ಸರ್ಕಾರದಿಂದ ನೇಮಕ ಆದವರು. ಆದರೆ ಇದೀಗ ಅನುದಾನದ ಕೊರತೆಯಿಂದ 35 ಮಂದಿ ಕಾರ್ಮಿಕರನ್ನು ಕೆಲಸದಿಂದ ಕಿತ್ತುಹಾಕಿರುವುದು ಖಂಡನೀಯ. ಈ ಕೆಲಸವನ್ನೇ ನಂಬಿಕೊಂಡು ಬದುಕುತ್ತಿರುವ ಕಾರ್ಮಿಕರು ಬೀದಿಗೆ ಬರುಂತಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಕೆಗೆ ಎಐಡಿಎಸ್‌ಒ ಆಗ್ರಹ
“ಏಕಾಏಕಿ ನೌಕರರನ್ನು ವಜಾ ಮಾಡಿದ್ದರಿಂದ 35 ಕುಟುಂಬಗಳು ಬೀದಿಗೆ ಬರುವ ಸಂದರ್ಭ ಬಂದೊದಗಿದೆ. ಹಾಗಾಗಿ ಗುತ್ತಿಗೆ ಕಾರ್ಮಿಕರನ್ನು ಕೂಡಲೇ ಖಾಯಂ ಮಾಡಿಕೊಂಡು, ಸೂಕ್ತ ವೇತನ ನೀಡುವಂತಾಗಬೇಕು. ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ತೀವ್ರ ಹೋರಾಟ ಮಾಡಲಾಗುವುದು” ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ವರದಿ: ಮೀಡಿಯಾ ವಾಲೆಂಟಿಯರ್ ಜಗದೀಶ್ ಹರಿಜನ