“ರೈಲಿನ ಎಂಜಿನ್‌ನಲ್ಲಿ ತಾಂತ್ರಿಕ ದೋಷದಿಂದಾಗಿ ಪರೀಕ್ಷೆಯಿಂದ ಹೊರಗುಳಿದ ಎಲ್ಲಾ ಅಭ್ಯರ್ಥಿಗಳಿಗೆ ವಿಶೇಷ ಮರು ಪರೀಕ್ಷೆ ನಡೆಸಬೇಕು. ಈಗಾಗಲೇ ಶುಲ್ಕ ತುಂಬಿರುವುದರಿಂದ ಮರು ಪರೀಕ್ಷೆಗೆ ಅಭ್ಯರ್ಥಿಗಳಿಂದ ಯಾವುದೇ ಹೆಚ್ಚುವರಿ ಶುಲ್ಕವನ್ನು ಪಡೆಯಬಾರದು. ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ಅಭ್ಯರ್ಥಿಗಳನ್ನು ಗುರುತಿಸಿ, ಅರ್ಹತೆ ಕಳೆದುಕೊಳ್ಳದಂತೆ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಬೇಕು” ಎಂದು ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಒತ್ತಾಯಿಸಿದರು.
ಹಾವೇರಿ ಪಟ್ಟಣದಲ್ಲಿ ಪತ್ರಿಕಾ ಹೇಳಿಕೆ ನೀಡಿರುವ ಅವರು, “ಮರು ಪರೀಕ್ಷೆಯ ದಿನಾಂಕ, ಸಮಯ ಹಾಗೂ ಪರೀಕ್ಷಾ ಕೇಂದ್ರಗಳನ್ನು ಕೂಡಲೇ ಪ್ರಕಟಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.
“ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವತಿಯಿಂದ ನಗರ ಸಶಸ್ತ್ರ ಮೀಸಲು ಪೊಲೀಸ್ ಪಡೆ ಮತ್ತು ಜಿಲ್ಲಾ ಸಶಸ್ತ್ರಮೀಸಲು ಪೊಲೀಸ್ ಪಡೆ ಪರೀಕ್ಷೆಗೆ ತೆರಳುತ್ತಿದ್ದ ಅಭ್ಯರ್ಥಿಗಳು ವಿಜಯಪುರದಿಂದ ಯಶವಂತಪುರಕ್ಕೆ ಹೊರಟಿದ್ದ ವಿಜಯಪುರ-ಯಶವಂತಪುರ (16548) ರೈಲಿನ ಎಂಜಿನ್‌ನಲ್ಲಿ ತಾಂತ್ರಿಕ ದೋಷದಿಂದಾಗಿ ನಾಲ್ಕು ಗಂಟೆಗೂ ಅಧಿಕ ಹೊತ್ತು ಕಾಲವಿಳಂಬವಾದದ್ದರಿಂದ ಸುಮಾರು ಐದನೂರಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಯಿಂದ ವಂಚಿತಗೊಂಡಿರುವುದು ನೋವಿನ ಸಂಗತಿ” ಎಂದು ಹೇಳಿದ್ದಾರೆ.
“ಈ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಲು ವಿಜಾಪೂರ ಮತ್ತು ಸುತ್ತಮುತ್ತಲ ಪ್ರದೇಶಗಳಿಂದ ರೈಲಿನ ಮೂಲಕ ಪ್ರಯಾಣಿಸುತ್ತಿದ್ದ ಸಾವಿರಾರು ಐದುನೂರಕ್ಕೂ ಹೆಚ್ಚು ಅಭ್ಯರ್ಥಿಗಳು ರೈಲ್ವೆ ಇಂಜಿನ್ ದುರಸ್ಥಿ ವ್ಯತ್ಯಯದಿಂದಾಗಿ ಸಮಯಕ್ಕೆ ಪರೀಕ್ಷಾ ಕೇಂದ್ರ ತಲುಪಲಾಗದೆ ಪರೀಕ್ಷೆಯಿಂದ ವಂಚಿತರಾಗಿರುವುದಕ್ಕೆ ಪರೀಕ್ಷಾರ್ಥಿಗಳು ಹೊಣೆಯಲ್ಲ; ರೈಲ್ವೆ ಇಲಾಖೆಯು ನೇರ ಹೊಣೆಯಾಗಿದೆ” ಎಂದು ಆರೋಪಿಸಿದ್ದಾರೆ.
ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ಉದ್ದೇಶದಿಂದ ವರ್ಷಗಟ್ಟಲೆ ಕಷ್ಟಪಟ್ಟು ತಯಾರಿ ನಡೆಸಿ ಪರೀಕ್ಷೆಗೆ ಸಿದ್ಧರಾಗಿದ್ದ ಅಭ್ಯರ್ಥಿಗಳು, ತಮ್ಮ ಯಾವುದೇ ತಪ್ಪಿಲ್ಲದೆ ಪರೀಕ್ಷೆ ಬರೆಯಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದಾರೆ” ಎಂದರು.
“ಈ ಹಿಂದೆಯೂ ರೈಲುಗಳ ಸಮಯಪಾಲನೆ, ಸಂಪರ್ಕ ವ್ಯವಸ್ಥೆ ಹಾಗೂ ತುರ್ತು ದುರಸ್ಥಿಗಳಿಂದಾಗಿ ಸಾವಿರಾರು ಅಭ್ಯರ್ಥಿಗಳು ಪರೀಕ್ಷೆ ಬರೆಯುವುದರಿಂದ ವಂಚಿತಗೊಂಡಿದ್ದಾರೆ. ಆದರೂ ಇಂತಹ ಸಂದರ್ಭಗಳಲ್ಲಿ ಪರ್ಯಾಯ ಸಾರಿಗೆ ವ್ಯವಸ್ಥೆಗಳನ್ನು ಒದಗಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿಫಲವಾಗಿವೆ. ರೈಲು ಅವಘಡಕ್ಕೆ ಕಾರಣರಾದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಪರೀಕ್ಷಾರ್ಥಿಗಳ ಭವಿಷ್ಯದೊಂದಿಗೆ ಈ ರೀತಿಯ ನಿರ್ಲಕ್ಷ್ಯವಹಿಸುವುದನ್ನು ಡಿವೈಎಫ್ಐ ತೀವ್ರವಾಗಿ ಖಂಡಿಸುತ್ತದೆ” ಎಂದಿದ್ದಾರೆ.
ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ಅಭ್ಯರ್ಥಿಗಳ ಭವಿಷ್ಯದ ದೃಷ್ಟಿಯಿಂದ ಮರುಪರೀಕ್ಷೆ ಬರೆಯಲು ಸೂಕ್ತ ಕ್ರಮ ಕೈಗೊಳ್ಳಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ನಿರ್ದೇಶಿಸಿ ತನ್ನ ಬದ್ಧತೆ ಮತ್ತು ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು” ಎಂದು ಒತ್ತಾಯಿಸಿದ್ದಾರೆ.





