ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ತೀರಾ ಕಡಿಮೆ ಮಳೆಯಾಗಿದ್ದು, ಬೆಳೆ ಇಳುವರಿ ತೀವ್ರ ಕುಸಿತ ಕಂಡಿದೆ. ತಾಲೂಕಿನ ರೈತರು ಸಂಕಷ್ಟಕ್ಕೊಳಗಾಗಿದ್ದು, ರಾಜ್ಯ ಸರ್ಕಾರ ರಾಣೇಬೆನ್ನೂರು ತಾಲೂಕನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ(ಕೋಡಿಹಳ್ಳಿ ಚಂದ್ರಶೇಖರ್)ಯ ತಾಲೂಕಾ ಘಟಕ ಆಗ್ರಹಿಸಿದೆ.
ಹಾವೇರಿ ಜಿಲ್ಲೆಯ ರಾಣಿಬೆನ್ನೂರ ಪಟ್ಟಣದಲ್ಲಿ ಇಂದು ತಹಶೀಲ್ದಾರರಿಗೆ ಮನವಿ ಸಲ್ಲಿಸಿ, ತಾಲೂಕಾ ಘಟಕದ ಪದಾಧಿಕಾರಿಗಳು ಹಾಗೂ ರೈತರು ಬರಪೀಡಿತ ತಾಲೂಕುಗಳ ಪಟ್ಟಿಯಿಂದ ರಾಣೇಬೆನ್ನೂರು ತಾಲೂಕನ್ನು ಕೈಬಿಟ್ಟಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಸಿರು ಸೇನೆಯ ತಾಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ ಸು. ಪಾಟೀಲ ಮಾತನಾಡಿ, “ರಾಣೇಬೆನ್ನೂರು ತಾಲೂಕು ಮಲೆನಾಡಿನಿಂದ ಹೊರತಾದ ಬಯಲು ಪ್ರದೇಶವಾಗಿದ್ದು, ಸಹಜವಾಗಿ ಇಲ್ಲಿ ಮಳೆ ಪ್ರಮಾಣ ಕಡಿಮೆ. ಅದರಲ್ಲು ಎರೆ ಜಮೀನಿನ (ಕಪ್ಪು ಭೂಮಿ) ಬೆಳೆಗಳಂತೂ ಸಾಕಷ್ಟು ತೇವಾಂಶವಿಲ್ಲದೇ ಬಾಡುತ್ತಿವೆ. ಇಳುವರಿಯಂತೂ ಸಂಪೂರ್ಣ ನೆಲ ಕಚ್ಚಿದೆ. ತಾಲೂಕಿನಲ್ಲಿ ಮುಂಗಾರಿನಿಂದ ಬರಿ ತುಂತುರು ಮಳೆ ಆಗುತ್ತಿದೆ. ಮಳೆಯಿಂದ ಬೆಳೆ ಏನೋ ಬೆಳೆದಿದೆ. ಇಳುವರಿ ಸಂಪೂರ್ಣ ಕುಸಿಯುವ ಸಾಧ್ಯತೆ ಇದೆ. ಇನ್ನು ಬಿತ್ತಿಗೆ ಹಿಂದೆ ಆದ ರೈತರ ಹೊಲಗಳಿಗಂತೂ ಸಧ್ಯಕ್ಕೆ ದೊಡ್ಡ ಮಳೆಯ ಅವಶ್ಯಕತೆ ಇದೆ. ಆದರೆ, ಕಳೆದ ಒಂದು ವಾರದಿಂದ ಮಳೆ ಹೊಳವುತ್ತಾ ಸಾಗಿದ್ದು ರೈತರು ಚಿಂತೆಗೀಡಾಗಿದ್ದಾರೆ” ಎಂದರು.
“ಕಳೆದೆರಡು ವರ್ಷಗಳಿಂದ ಈ ಭಾಗದಲ್ಲಿ ದೊಡ್ಬಮಳೆ ಬಿದ್ದಿಲ್ಲ. ಕೆರೆಕಟ್ಟೆ ತುಂಬಿ ಹಳ್ಳಕೊಳ್ಳ ತುಂಬಿ ಹರಿದಿಲ್ಲ. ಇದೇ ಸ್ಥಿತಿ ಮುಂದುವರೆದರೆ, ಅಂತರ್ಜಲ ಮಟ್ಟ ಕುಸಿದು ಕುಡಿಯುವ ನೀರಿಗೂ ಅಭಾವ ಸೃಷ್ಪಿಯಾಗುವ ಸಾಧ್ಯತೆ ಇದೆ. ಆದ್ದರಿಂದ ಸರ್ಕಾರ ಕೂಡಲೇ ರಾಣೇಬೆನ್ನೂರು ತಾಲೂಕನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸಬೇಕು” ಎಂದು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಸಂತೋಷ ಅಣಜಿ, ಮಾಲತೇಶ ಪಾಟೀಲ, ಗಂಗಾಧರ ಪಶುಪತಿಹಾಳ, ಭರತ್ ಪಿ, ಬಸವರಾಜ್ ಬನ್ನಿಮಟ್ಟಿ, ಚನಬಸಪ್ಪ ನಾಡಾರ, ಚನ್ನಬಸಪ್ಪ ನಾಡಾರ, ಸಂಜೀವ ಪಾಟೀಲ, ಶಿವರಾಜ ನೆಗಳೂರು, ಸೋಮನಗೌಡ ಪಾಟೀಲ, ನಾಗರಾಜ ಕೆರೆಯಣ್ಣನವರ ಸೇರಿದಂತೆ ಕೂನಬೇವು, ಯಕಲಾಸಪುರ, ರಾಹುತನಕಟ್ಟಿ, ಪತ್ತೇಪುರ, ಹನುಮಾಪುರ, ಹೆಡಿಯಾಲ, ಜೋಯಿಸರಹರಳಹಳ್ಳಿ, ಯತ್ನಳ್ಳಿ ಸೇರದಂತೆ ತಾಲೂಕಿನ ಹಲವು ಗ್ರಾಮಗಳ ರೈತರು ಉಪಸ್ಥಿತರಿದ್ದರು.




