“ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಂಗಾರು ಮಳೆ ಕೈಕೊಟ್ಟಿದ್ದರಿಂದ, ಹಿಂಗಾರು ಬಿತ್ತನೆಯೂ ಕಷ್ಟವಾಗಿದೆ. ಬರಗಾಲ ಪೀಡಿತ ಹಾವೇರಿ ಜಿಲ್ಲೆಯ ರೈತರಿಗೆ ರಾಜ್ಯ ಸರಕಾರ ಎರಡುವರೆ ಸಾವಿರ ಕೊಡಲು ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ. ಕೂಡಲೇ ಮಧ್ಯಂತರವಾಗಿ ಎಕರೆಗೆ ₹ 30,000 ಪರಿಹಾರ ನೀಡಬೇಕು”ಎಂದು ರೈತರು ಆಗ್ರಹಿಸಿದ್ದಾರೆ.
ಹಾವೇರಿ ನಗರದ ಹೊರವಲಯದಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ನಿಯೋಗದ ಮೂಲಕ ಶುಕ್ರವಾರ ಭೇಟಿ ನೀಡಿ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ರಾಜ್ಯ-ಕೇಂದ್ರ ಸರ್ಕಾರಕ್ಕೆ ಮನವಿ ಪತ್ರ ರವಾನಿಸಿದರು. ತಮ್ಮ ಬೇಡಿಕೆ ಈಡೇರದಿದ್ದರೆ, ಅನಿರ್ದಿಷ್ಟಾವಧಿ ಹೋರಾಟ ಆರಂಭಿಸುವ ಎಚ್ಚರಿಕೆ ನೀಡಿದರು.
“ಮೂರ್ನಾಲ್ಕು ವರ್ಷಗಳಿಂದ ನಿರಂತರವಾಗಿ ಅತೀವೃಷ್ಟಿ ಹಾಗೂ ಅನಾವೃಷ್ಟಿಯಿಂದ ರೈತರು ಕಂಗಾಲಾಗಿದ್ದಾರೆ. ಈಗ ಬರಗಾಲದಿಂದ ರೈತ ಸಮುದಾಯ ತತ್ತರಿಸಿದೆ. ಯಾವುದೇ ಸರ್ಕಾರಗಳು ರೈತರ ನೆರವಿಗೆ ಬರುತ್ತಿಲ್ಲ. ರಾಜ್ಯ ಸರ್ಕಾರವು ಹಾವೇರಿ ಜಿಲ್ಲೆ ಎಲ್ಲ ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಿಸಿದೆ. ಆದರೆ, ಇದುವರೆಗೂ ರೈತರಿಗೆ ಯಾವುದೇ ಪರಿಹಾರ ನೀಡಿಲ್ಲ” ಎಂದು ದೂರಿದರು.
“ಜಿಲ್ಲೆಯ ಎಲ್ಲ ಕೆರೆಗಳನ್ನು ತುಂಬಿಸಲು ಹಾಗೂ ಹೂಳೆತ್ತಲು ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು. ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಪ್ರಥಮ ಆದ್ಯತೆ ನೀಡಿ ಶೀಘ್ರವಾಗಿ ಅನುಷ್ಠಾನಗೊಳಿಸಬೇಕು. ಬೇಡ್ತಿ ಮತ್ತು ವರದಾ ನದಿ ಜೋಡಣೆಯಲ್ಲಿ ಬರುವ ನೈಸರ್ಗಿಕ ಮತ್ತು ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ, ಯೋಜನೆಯನ್ನು ತ್ವರಿತವಾಗಿ ಜಾರಿಗೊಳಿಸಬೇಕು. ತುಂಗಾ ಮೇಲ್ದಂಡೆ ಯೋಜನೆಯ ಎರಡನೇ ಹಂತದ ಕಾಮಗಾರಿಗಳನ್ನು ಶೀಘ್ರವಾಗಿ ಪ್ರಾರಂಭಿಸಬೇಕು” ಎಂದು ರೈತರು ಆಗ್ರಹಿಸಿದರು.
“ಬೆಳೆ ವಿಮೆ ನೀತಿಯನ್ನು ಬದಲಾವಣೆ ಮಾಡಿ, ವಿಮಾ ಕಂತು ಪಾವತಿಗೆ ಕೊನೆ ದಿನಾಂಕ ನಿಗದಿಪಡಿಸುವ ರೀತಿಯಲ್ಲೇ ಕೇಮ್ಗೂ ದಿನಾಂಕ ನಿಗದಿಪಡಿಸಬೇಕು. ಮದಗ ಮಾಸೂರು ಕೆರೆಗೆ ಕ್ರಸ್ಟ್ ಗೇಟ್ ಅಳವಡಿಸಬೇಕು. ಬಾಕಿ ಇರುವ ಬೆಳೆವಿಮೆ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು. ಬರಗಾಲ ಘೋಷಣೆಯಾಗಿರುವುದರಿಂದ, ಬೆಳೆ ವಿಮೆ ತುಂಬಿದ ರೈತರಿಗೆ ಯಾವುದೇ ಷರತ್ತು ಇಲ್ಲದೇ ಕ್ಷೇಮ್ ಮೊತ್ತ ನೀಡಬೇಕು. ರೈತರ ಎಲ್ಲ ಕೃಷಿ ಸಾಲವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮನ್ನಾ ಮಾಡಬೇಕು. ಸ್ವಾಮಿನಾಥನ್ ಹಾಗೂ ರಂಗರಾಜನ್ ವರದಿಯನ್ನು ಶೀಘ್ರವೇ ಜಾರಿ ಮಾಡಬೇಕು. ಬಿತ್ತನೆ ಬೀಜಗಳಿಗೆ ಏಕರೂಪದ ದರ ನಿಗದಿಪಡಿಸಬೇಕು. ಕಬ್ಬು ಬೆಳೆಗಾರರ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು” ಎಂದು ರೈತರು ಒತ್ತಾಯಿಸಿದರು.
“ರಾಜ್ಯದಲ್ಲಿ ಎಸ್ಐಆರ್ ಮೂಲಕ ಬಡವರ ಮತದಾನದ ಹಕ್ಕನ್ನು ಕಿತ್ತುಕೊಳ್ಳುವ ಹುನ್ನಾರ ನಡೆದಿದೆ. ಸತ್ತವರು, ಡಬಲ್ ಓಟಿಂಗ್ ಇದ್ದವರನ್ನು ತಗೆದು ಹಾಕಲಿ. ಮೂವತ್ತು ನಲವತ್ತು ವರ್ಷಗಳಿಂದ ಇಲ್ಲಯೇ ಇದ್ದು, ಮತದಾನ ಮಾಡಿದವರಿಗೆ ನೋಟಿಸ್ ನೀಡಿ, ದಾಖಲೆಗಳನ್ನು ಕೇಳುತ್ತಿದೆ. ಅವರು ಎಲ್ಲಿಂದ ದಾಖಲೆಗಳನ್ನು ಕೊಡಬೇಕು. ಹಾಗಾಗಿ ಈ ಕ್ರಮ ಸರಿಯಾದುದಲ್ಲ. ಕೂಡಲೇ ಕೇಂದ್ರ ಚುನಾವಣಾ ಆಯೋಗ ಎಸ್ಐಆರ್ ಪ್ರಕ್ರಿಯೆಯಲ್ಲಿ ಬದಲಾವಣೆ ಮಾಡಿ, ಎಲ್ಲರಿಗೂ ಮತದಾನದ ಪಟ್ಟಿಯಲ್ಲಿ ಇರಬೇಕು” ಎಂದು ಒತ್ತಾಯಿಸಿದರು.
ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ಶಿವಬಸಪ್ಪ ಗೋವಿ, ಎಚ್.ಎಚ್. ಮುಲ್ಲಾ, ಶಿವಯೋಗಿ ಹೊಸಗೌಡ್ರ, ದಿಳ್ಳೆಪ್ಪ ಮಣ್ಣೂರ, ಮರಿಗೌಡ ಪಾಟೀಲ, ರುದ್ರಗೌಡ ಕಾಡನಗೌಡ್ರ, ಸುರೇಶ ಹೊನ್ನಪ್ಪನವರ, ರಾಜು ತರ್ಲಗಟ್ಟ, ಚನ್ನಪ್ಪ ಮರಡೂರ, ಸುರೇಶ ಚಲವಾದಿ, ಗುಡ್ಡನಗೌಡ ಪ್ಯಾಟಿಗೌಡ್ರ, ರಮೇಶ ದಡ್ಡರ, ರುದ್ರಪ್ಪ ಅಣ್ಣಿ, ಅಬ್ದುಲ್ ಖಾದರ್ ಬುಡಂದಿ ಹಾಗೂ ಇತರರು ಭಾಗವಹಿಸಿದ್ದರು.





