ಶಿವಮೊಗ್ಗದಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (KSOU) ಪ್ರಾದೇಶಿಕ ಪರೀಕ್ಷಾ ಕೇಂದ್ರದಲ್ಲಿ ನಡೆಯುತ್ತಿರುವ ಪದವಿ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಗಳಲ್ಲಿ ದೊಡ್ಡ ಮಟ್ಟದ ಅಕ್ರಮ ಮತ್ತು ಸಾಮೂಹಿಕ ನಕಲು ದಂಧೆ ನಡೆದಿರುವುದು ಬೆಳಕಿಗೆ ಬಂದಿದೆ. ಪರೀಕ್ಷೆಯ ವೇಳೆ ವಿದ್ಯಾರ್ಥಿಗಳು ಯಾವುದೇ ಭಯವಿಲ್ಲದೆ ಮೊಬೈಲ್ ಫೋನ್‌ಗಳು ಮತ್ತು ಪುಸ್ತಕಗಳನ್ನು ಬಳಸಿ ಉತ್ತರಗಳನ್ನು ‘ಕಾಪಿ’ ಬರೆಯುತ್ತಿರುವ ಆಘಾತಕಾರಿ ದೃಶ್ಯಗಳುಳ್ಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿವೆ.
ಲಭ್ಯವಿರುವ ಮಾಹಿತಿಯ ಪ್ರಕಾರ, ಈ ಪರೀಕ್ಷಾ ಕೇಂದ್ರದಲ್ಲಿ ಹಣ ನೀಡಿದ ಮತ್ತು ನೀಡದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸುವ ಮೂಲಕ ಭ್ರಷ್ಟ ವ್ಯವಸ್ಥೆ ನಡೆಸಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಪರೀಕ್ಷೆಯಲ್ಲಿ ಪಾಸ್ ಆಗಲು ಅಥವಾ ಸುಲಭವಾಗಿ ಪರೀಕ್ಷೆ ಬರೆಯಲು ಪ್ರತಿ ವಿಷಯಕ್ಕೆ ನಿರ್ದಿಷ್ಟವಾಗಿ ಹಣವನ್ನು ವಸೂಲಿ ಮಾಡಲಾಗುತ್ತಿದ್ದು, ಹಣ ಪಾವತಿಸುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರದ ಎರಡನೇ ಮಹಡಿಯಲ್ಲಿ ವಿಐಪಿ ರೀತಿಯಲ್ಲಿ ಆಸನ ವ್ಯವಸ್ಥೆ ಕಲ್ಪಿಸಿಕೊಡಲಾಗುತ್ತದೆ. ಈ ವಿದ್ಯಾರ್ಥಿಗಳು ಯಾವುದೇ ಅಂಜಿಕೆ ಇಲ್ಲದೆ ಮೊಬೈಲ್ ಫೋನ್‌ಗಳು, ಗೈಡ್‌ಗಳು ಹಾಗೂ ಪುಸ್ತಕಗಳನ್ನು ಮೇಜಿನ ಮೇಲೆ ಇಟ್ಟುಕೊಂಡು ಮುಕ್ತವಾಗಿ ಕಾಪಿ ಮಾಡಿ ಉತ್ತರ ಬರೆಯಲು ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂದು ಆರೋಪಿಸಲಾಗಿದೆ.
ಇದಕ್ಕೆ ತದ್ವಿರುದ್ಧವಾಗಿ, ಯಾವುದೇ ಲಂಚ ನೀಡದೆ ಪ್ರಾಮಾಣಿಕವಾಗಿ ಕಷ್ಟಪಟ್ಟು ಪರೀಕ್ಷೆ ಬರೆಯಲು ಬರುವ ಬಡ ಮತ್ತು ಸಾಮಾನ್ಯ ವಿದ್ಯಾರ್ಥಿಗಳನ್ನು ಮಾತ್ರ ಮೊದಲ ಮಹಡಿಯಲ್ಲಿ ಕಟ್ಟುನಿಟ್ಟಿನ ನಿಗಾದಡಿ ಕೂರಿಸಿ ಪರೀಕ್ಷೆ ಬರೆಸಲಾಗುತ್ತಿದೆ ಎಂಬ ದೂರುಗಳು ಸಾರ್ವಜನಿಕ ವಲಯದಿಂದ ವ್ಯಕ್ತವಾಗಿವೆ.
ಈ ಅಕ್ರಮ ಜಾಲವು ಪ್ರಾದೇಶಿಕ ನಿರ್ದೇಶಕರ ನೇತೃತ್ವದಲ್ಲೇ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ಆರೋಪಿಸಲಾಗಿದೆ. ಪರೀಕ್ಷೆ ಆರಂಭವಾದ ಸುಮಾರು ಅರ್ಧ ಗಂಟೆಯ ಬಳಿಕ ಪರೀಕ್ಷಾ ಕೊಠಡಿಗಳಿಗೆ ಭೇಟಿ ನೀಡುವ ಪ್ರಾದೇಶಿಕ ನಿರ್ದೇಶಕ ಬಿ.ಎಂ. ಸ್ವಾಮಿ ಅವರು ಎಷ್ಟು ಮಂದಿ ವಿದ್ಯಾರ್ಥಿಗಳು ನಕಲು ಮಾಡುತ್ತಿದ್ದಾರೆ ಎಂಬುದನ್ನು ಪರಿಶೀಲಿಸಿ ಲೆಕ್ಕ ಹಾಕುತ್ತಾರೆ. ಆ ಬಳಿಕ ಅಲ್ಲಿನ ಅಧೀನ ಸಿಬ್ಬಂದಿಗಳಾದ (ಎಸ್‌ಡಿಸಿ) ವಿನಯಾ ಕೆ.ಜೆ., ನಿಂಗಾ ನಾಯ್ಕ್, ಅಟೆಂಡರ್ ಯೋಗೇಶ್ ಗೌಡ ಹಾಗೂ ಡೇಟಾ ಎಂಟ್ರಿ ಆಪರೇಟರ್ ಹರೀಶ್ ಮುಂತಾದವರನ್ನು ಬಳಸಿ ಹಣ ವಸೂಲಿ ಮಾಡಲಾಗುತ್ತದೆ ಎಂದು ಆರೋಪಿಸಲಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತ ಸಂಪೂರ್ಣ ಹಳ್ಳ ಹಿಡಿದಿದೆ! ಶಿವಮೊಗ್ಗದ ಕೆಎಸ್‌ಒಯು (KSOU) ಕೇಂದ್ರದಲ್ಲಿ ‘ಪರೀಕ್ಷಾ ದಂಧೆ’ ಬಯಲಾಗಿರುವುದು ರಾಜ್ಯದ ಶೈಕ್ಷಣಿಕ ವ್ಯವಸ್ಥೆಯ ಅವನತಿಗೆ ಸಾಕ್ಷಿ. ಕಾಂಗ್ರೆಸ್ ಆಡಳಿತದ ಭ್ರಷ್ಟಾಚಾರದ ಕರಾಳ ಮುಖ: ಪ್ರತಿ ಪರೀಕ್ಷೆಗೆ ₹1,000 ಕೊಟ್ಟರೆ ಸಾಕು, ಮೊಬೈಲ್ ಮತ್ತು ಪುಸ್ತಕ ಮುಂದಿಟ್ಟುಕೊಂಡೇ ಪರೀಕ್ಷೆ ಬರೆಯುವ ‘ಮುಕ್ತ ನಕಲು ಭಾಗ್ಯ’! ಹಣ ನೀಡಿದವರಿಗೆ 2ನೇ ಮಹಡಿಯಲ್ಲಿ ನಕಲು ಮಾಡಲು ರಾಜಾತಿಥ್ಯ; ಕಷ್ಟಪಟ್ಟು ಓದುವ ಬಡ ವಿದ್ಯಾರ್ಥಿಗಳಿಗೆ 1ನೇ ಮಹಡಿಯಲ್ಲಿ ಕಟ್ಟುನಿಟ್ಟಿನ ನಿಯಮ. ವಿದ್ಯಾರ್ಥಿಗಳಿಂದ PhonePe, Google Pay ಮೂಲಕ ಹಣ ವಸೂಲಿ! ಉನ್ನತ ಶಿಕ್ಷಣ ಇಲಾಖೆ ಸಂಪೂರ್ಣ ನಿಷ್ಕ್ರಿಯವಾಗಿದ್ದು, ಸಚಿವರು ಕುಂಭಕರ್ಣ ನಿದ್ದೆಯಲ್ಲಿದ್ದಾರೆ. ಕಷ್ಟಪಟ್ಟು ಓದುವ ಪ್ರತಿಭಾವಂತ ಯುವಜನರ ಶ್ರಮವನ್ನು ಲಂಚದಾಸೆಗೆ ಬಲಿಕೊಡುತ್ತಿರುವ @INCKarnataka ಸರ್ಕಾರಕ್ಕೆ ನಾಚಿಕೆಯಾಗಬೇಕು! ಶಿಕ್ಷಣವನ್ನೇ ಹರಾಜಿಗಿಟ್ಟ ಈ ದುರಾಡಳಿತಕ್ಕೆ ರಾಜ್ಯದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ. #CongressFailsKarnataka #KSOUScam
— BJP Karnataka (@BJP4Karnataka) October 23, 2026
ಪ್ರತಿದಿನ ಪರೀಕ್ಷೆ ಮುಗಿದ ತಕ್ಷಣ ಸುಮಾರು 70 ರಿಂದ 100 ವಿದ್ಯಾರ್ಥಿಗಳಿಂದ ಫೋನ್‌ಪೇ ಮತ್ತು ಗೂಗಲ್ ಪೇ ಮುಖಾಂತರ ಸ್ಥಳದಲ್ಲೇ ಹಣ ವರ್ಗಾವಣೆ ಮಾಡಿಸಿಕೊಳ್ಳಲಾಗುತ್ತದೆ ಎಂಬ ಮಾಹಿತಿ ಹೊರಬಿದ್ದಿದೆ.
ಅಕ್ಟೋಬರ್ 7ರಂದು ಆರಂಭವಾಗಿರುವ ಕೆಎಸ್‌ಒಯು ಪದವಿ ಮತ್ತು ಸ್ನಾತಕೋತ್ತರ ಸೆಮಿಸ್ಟರ್ ಪರೀಕ್ಷೆಗಳು ನವೆಂಬರ್ 20ರವರೆಗೆ ಮುಂದುವರಿಯಲಿವೆ. ದಿನರಾತ್ರಿ ಕಷ್ಟಪಟ್ಟು ಓದಿ ಪರೀಕ್ಷೆ ಎದುರಿಸುವ ಪ್ರಾಮಾಣಿಕ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಈ ವ್ಯವಸ್ಥೆಯು ಚೆಲ್ಲಾಟವಾಡುತ್ತಿದೆ ಎಂದು ವಿದ್ಯಾರ್ಥಿ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಆದರೆ, ಈ ಎಲ್ಲ ಗಂಭೀರ ಆರೋಪಗಳನ್ನು ಕೆಎಸ್‌ಒಯು ಪ್ರಾದೇಶಿಕ ನಿರ್ದೇಶಕ ಬಿ.ಎಂ. ಸ್ವಾಮಿ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಶಿವಮೊಗ್ಗ ಕೇಂದ್ರದಲ್ಲಿ ಯಾವುದೇ ರೀತಿಯ ಅಕ್ರಮಗಳಿಗೆ ಅಥವಾ ನಕಲು ಮಾಡಲು ಅವಕಾಶ ನೀಡಿಲ್ಲ. ಮುಕ್ತ ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ಅತ್ಯಂತ ಕಟ್ಟುನಿಟ್ಟಿನ ನಿಯಮಗಳಡಿ ನಡೆಸಲಾಗುತ್ತಿದ್ದು, ಬೆಳಿಗ್ಗೆ ಸರಿಯಾದ ಸಮಯಕ್ಕೆ ಪ್ರಶ್ನೆ ಪತ್ರಿಕೆ ವಿತರಿಸುವ ಮುನ್ನವೇ ವಿದ್ಯಾರ್ಥಿಗಳ ಸ್ಮಾರ್ಟ್‌ವಾಚ್ ಮತ್ತು ಮೊಬೈಲ್ ಫೋನ್‌ಗಳನ್ನು ಕಡ್ಡಾಯವಾಗಿ ಹೊರಗೆ ತೆಗೆದಿರಿಸಿಕೊಳ್ಳಲಾಗುತ್ತದೆ” ಎಂದಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋಗಳ ಕುರಿತು ಪ್ರತಿಕ್ರಿಯಿಸಿದ ಅವರು, “ಇಂದಿನ ದಿನಗಳಲ್ಲಿ ತಂತ್ರಜ್ಞಾನ ಬಳಸಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ಮೂಲಕ ಇಂತಹ ನಕಲಿ ವಿಡಿಯೋಗಳನ್ನು ಸೃಷ್ಟಿಸುವುದು ಸುಲಭ. ಇದು ನಮ್ಮ ಕೇಂದ್ರದ ಹೆಸರನ್ನು ಕೆಡಿಸಲು ನಡೆದಿರುವ ದುಷ್ಪ್ರಯತ್ನವಾಗಿರಬಹುದು” ಎಂದು ಸಮರ್ಥನೆ ನೀಡಿದ್ದಾರೆ.





