ಕಬ್ಬಿಗೆ ಪ್ರತಿ ಟನ್ಗೆ ₹5500 ನೀಡಬೇಕು. ಎಮ್.ಎಸ್.ಪಿ. ದರ 31ರೂ ಇದ್ದದ್ದು, 60ರೂ ಆಗಬೇಕು. ಸ್ವಾಮಿನಾಥನ್ ವರದಿ ಜಾರಿಯಾಗಬೇಕು ಎಂದು ಆಗ್ರಹಿಸಿ ಜಿಲ್ಲೆಯ ಕಬ್ಬು ಬೆಳೆಗಾರರು ಹೋರಾಟ ನಡೆಸುತ್ತಿದ್ದು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಅಣಕು ಶವಯಾತ್ರೆ ನಡೆಸುತ್ತಾ, ಹಾವೇರಿಯಿಂದ ಹುಬ್ಬಳ್ಳಿಗೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ.
ಹಾವೇರಿ ಪಟ್ಟಣದ ಹುಕ್ಕೇರಿ ಮಠದಿಂದ ಇಂದು ಶನಿವಾರ ಪಾದಯಾತ್ರೆ ಆರಂಭಗೊಂಡಿದ್ದು, ಪಾದಯಾತ್ರೆಗೆ ದಿಂಗಾಲೇಶ್ವರ ಸ್ವಾಮೀಜಿ ಚಾಲನೆ ನೀಡಿದರು.

ದೆಹಲಿ ಸಭೆಗೆ ರೈತರನ್ನು ಕರೆಯಿಸಿ ಯಾವುದೇ ಭರವಸೆ ನೀಡದೇ ಅವಮಾನ ಮಾಡಿ ಕಳಿಸಿದ್ದಾರೆ. ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಸಲು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ವಿಫಲರಾಗಿದ್ದಾರೆ. ಎಂದು ಆರೋಪಿಸಿ, ಅವರ ಅಣಕು ಶವಯಾತ್ರೆ ನಡೆಸಲಾಗುತ್ತಿದೆ.
ಹುಕ್ಕೇರಿಮಠದಿಂದ ಶುರುವಾದ ಪಾದಯಾತ್ರೆಯು ಎಂ.ಜಿ.ರಸ್ತೆ, ಹೊಸಮನಿ ಸಿದ್ದಪ್ಪ ವೃತ್ತ, ಹಳೇ ಪಿ.ಬಿ. ರಸ್ತೆಯ ಮೂಲಕ ಸಾಗಿದೆ. ರಾಷ್ಟ್ರೀಯ ಹೆದ್ದಾರಿ ಮೂಲಕ ಶಿಗ್ಗಾವಿ ಮಾರ್ಗವಾಗಿ ಪಾದಯಾತ್ರೆಯನ್ನು ಹುಬ್ಬಳ್ಳಿಗೆ ಸಾಗಲಿದೆ. ಹುಬ್ಬಳ್ಳಿಯಲ್ಲಿ ಸೋಮವಾರ ಪ್ರಹ್ಲಾದ್ ಜೋಷಿ ಮನೆಗೆ ಮುತ್ತಿಗೆ ಕಾರ್ಯಕ್ರಮವಿದೆ ಎಂದು ರೈತರು ತಿಳಿಸಿದರು.





