ದೆಹಲಿ ಸೇರಿದಂತೆ ಭಾರತದ ವಿವಿಧ ಭಾಗಗಳಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಗಳ ವೇಳೆ ಅತಿಯಾದ ಬಲಪ್ರಯೋಗ ನಡೆಸಲಾಗಿದೆ ಎಂಬ ಆರೋಪಗಳ ಕುರಿತು ಭಾರತದ ನಾಯಕರೊಂದಿಗೆ ಚರ್ಚಿಸುವಂತೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರಿಗೆ 6 ಮಂದಿ ಡೆಮಾಕ್ರಟಿಕ್ ಸಂಸದರು ಮನವಿ ಮಾಡಿದ್ದಾರೆ.
ಪ್ರಮೀಳಾ ಜಯಪಾಲ್, ಇಲ್ಹಾನ್ ಓಮರ್, ಜಿಮ್ ಮೆಕ್ಗವರ್ನ್, ರಶೀದಾ ತ್ಲೈಬ್, ಎಲಿನಾರ್ ಹೋಮ್ಸ್ ನಾರ್ಟನ್ ಮತ್ತು ಜೀಸಸ್ ಗಾರ್ಸಿಯಾ ಅವರು ಶುಕ್ರವಾರ ರೂಬಿಯೊ ಅವರಿಗೆ ಬರೆದ ಪತ್ರದಲ್ಲಿ, ವಿದ್ಯಾರ್ಥಿಗಳ ಪ್ರತಿಭಟನೆಗಳ ಸಂದರ್ಭದಲ್ಲಿ ದಮನಕಾರಿ ಕ್ರಮಗಳು, ಅಕ್ರಮ ಬಂಧನಗಳು ಮತ್ತು ಭದ್ರತಾ ಪಡೆಗಳ ಅತಿಯಾದ ಬಲಪ್ರಯೋಗ ನಡೆದಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಮುಂದಿನ ವಾರ ಭಾರತಕ್ಕೆ ಭೇಟಿ ನೀಡಲಿರುವ ರೂಬಿಯೊ, ಮುಂಬೈನಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರನ್ನು ಭೇಟಿಯಾಗಲಿದ್ದಾರೆ. ಈ ಭೇಟಿಯ ಸಂದರ್ಭದಲ್ಲಿ ಎರಡೂ ದೇಶಗಳ ಜನರಿಗೆ ಸಂಬಂಧಿಸಿದ ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸುವಂತೆ ಸಂಸದರು ಒತ್ತಾಯಿಸಿದ್ದಾರೆ.
ಮಾಜಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವಿರುದ್ಧ ನಡೆದಿದ್ದ ಸಿಜೆಪಿ ಪ್ರತಿಭಟನೆಗಳು ಹಾಗೂ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಗಳನ್ನು ಸಂಸದರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ಪ್ರತಿಭಟನೆಗಳ ಸಂದರ್ಭದಲ್ಲಿ ಪ್ರತಿಭಟನಾಕಾರರ ವಿರುದ್ಧ ಅತಿಯಾದ ಬಲಪ್ರಯೋಗ ನಡೆದಿದೆ ಎಂಬ ಆರೋಪಗಳ ಕುರಿತು ತನಿಖೆ ನಡೆಸಬೇಕೆಂದು ಅವರು ಆಗ್ರಹಿಸಿದ್ದಾರೆ.
ಅಮೆರಿಕದಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಇತರ ನಗರಗಳಲ್ಲಿನ ಭಾರತೀಯ ದೂತಾವಾಸಗಳು ಸಿಜೆಪಿ ಪರ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ನಿಗಾ ಇಡಲು ಛಾಯಾಗ್ರಾಹಕರನ್ನು ನಿಯೋಜಿಸಿದ್ದವು ಎಂದೂ ಸಂಸದರು ಆರೋಪಿಸಿದ್ದಾರೆ. ಅಮೆರಿಕದಲ್ಲಿರುವ ಭಾರತೀಯ ರಾಜತಾಂತ್ರಿಕ ಕಚೇರಿಗಳು ಪ್ರತಿಭಟನಾಕಾರರ ಮೇಲೆ ನಿಗಾ ಇರಿಸಿ ಬೆದರಿಕೆ ಹಾಕಿದೆಯೇ ಎಂಬ ವರದಿಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆಯೂ ಅವರು ಮನವಿ ಮಾಡಿದ್ದಾರೆ.
ಭಾರತದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯ ಬಗ್ಗೆಯೂ ಪ್ರಮೀಳಾ ಜಯಪಾಲ್ ಕಳವಳ ವ್ಯಕ್ತಪಡಿಸಿದ್ದಾರೆ. ಕರಡು ಮತದಾರರ ಪಟ್ಟಿಯಿಂದ 13 ಕೋಟಿ ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ ಎಂದು ಅವರು ಆರೋಪಿಸಿದ್ದು, ಈ ವಿಚಾರದಲ್ಲಿ ಸಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಮೂಲಭೂತ ಸ್ವಾತಂತ್ರ್ಯಗಳ ಮುಕ್ತ ಬಳಕೆ ಮತ್ತು ಮತದಾನದ ಹಕ್ಕು ಅಮೆರಿಕ ಹಾಗೂ ಭಾರತದ ಪ್ರಜಾಸತ್ತಾತ್ಮಕ ಗುರುತಿನ ಪ್ರಮುಖ ಭಾಗಗಳಾಗಿವೆ ಎಂದು ಸಂಸದರು ಪತ್ರದಲ್ಲಿ ತಿಳಿಸಿದ್ದಾರೆ.
ಪ್ರತಿಭಟನೆಗಳ ಸಂದರ್ಭದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂಬ ಆರೋಪಗಳ ಕುರಿತು ಸಮಗ್ರ, ಪಾರದರ್ಶಕ ಮತ್ತು ಸ್ವತಂತ್ರ ತನಿಖೆ ನಡೆಸುವಂತೆ ಭಾರತೀಯ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಶಾಂತಿಯುತವಾಗಿ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಭೆ ಸೇರುವ ಹಕ್ಕುಗಳನ್ನು ಚಲಾಯಿಸಿದ್ದಕ್ಕಾಗಿ ಭಾರತೀಯ ಹಾಗೂ ಅಂತಾರಾಷ್ಟ್ರೀಯ ಕಾನೂನುಗಳ ಉಲ್ಲಂಘನೆಯಡಿ ಬಂಧಿತರಾಗಿರುವವರನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಬೇಕು ಎಂದು ಅವರು ರೂಬಿಯೊ ಅವರನ್ನು ಒತ್ತಾಯಿಸಿದ್ದಾರೆ.
ಅಮೆರಿಕದಲ್ಲಿನ ಭಾರತದ ರಾಯಭಾರಿ ವಿನಯ್ ಮೋಹನ್ ಕ್ವಾತ್ರಾ ಅವರು ಈ ಹಿಂದೆ ಪ್ರಮೀಳಾ ಜಯಪಾಲ್ ಅವರ ಹೇಳಿಕೆಗಳನ್ನು ಖಂಡಿಸಿ, ಅವುಗಳನ್ನು ಭಾರತದ ಆಂತರಿಕ ವ್ಯವಹಾರಗಳಲ್ಲಿ ಸ್ವೀಕಾರಾರ್ಹವಲ್ಲದ ಹಸ್ತಕ್ಷೇಪ ಎಂದಿದ್ದರು.
ಇನ್ನೊಂದೆಡೆ, ಅಮೆರಿಕದ ಡೆಮಾಕ್ರಟಿಕ್ ನಾಯಕ ಹಾಗೂ ಮಾಜಿ ಅಧ್ಯಕ್ಷ ಜೋ ಬೈಡನ್ ಅವರ ಆಡಳಿತದಲ್ಲಿ ಶ್ವೇತಭವನದ ಸಲಹೆಗಾರರಾಗಿದ್ದ ಅಜಯ್ ಜೈನ್ ಭುಟೋರಿಯಾ ಅವರು ಜಯಪಾಲ್ ಅವರ ಪತ್ರವನ್ನು ಟೀಕಿಸಿದ್ದಾರೆ.
“ಭಾರತವು ತನ್ನದೇ ಆದ ನ್ಯಾಯಾಲಯಗಳು, ಸ್ವತಂತ್ರ ಪತ್ರಿಕಾ ವ್ಯವಸ್ಥೆ ಮತ್ತು 90 ಕೋಟಿಗೂ ಅಧಿಕ ಮತದಾರರನ್ನು ಹೊಂದಿರುವ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಭಾರತದ ಆಂತರಿಕ ವ್ಯವಹಾರಗಳ ಬಗ್ಗೆ ಉಪದೇಶ ನೀಡಲು ಅಮೆರಿಕದ ಕಾಂಗ್ರೆಸ್ಗೆ ಯಾವುದೇ ಅಧಿಕಾರವಿಲ್ಲ. ಇಂತಹ ಕ್ರಮಗಳು ಅಮೆರಿಕ-ಭಾರತದ ಮಹತ್ವದ ಪಾಲುದಾರಿಕೆಯನ್ನು ದುರ್ಬಲಗೊಳಿಸುತ್ತವೆ. ಅಮೆರಿಕದ ಸಮಸ್ಯೆಗಳತ್ತ ಗಮನಹರಿಸಲಿ” ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: CEC ರಾಜೀನಾಮೆಗೆ ಆಗ್ರಹ; ಅ.23ರಂದು ಸಂಯುಕ್ತ ಕಿಸಾನ್ ಮೋರ್ಚಾದಿಂದ ದೆಹಲಿ ಚಲೋ
ಅಮೆರಿಕದಲ್ಲಿರುವ ವ್ಯಕ್ತಿಗಳ ವಿರುದ್ಧ ಭಾರತ ನಿರಂತರವಾಗಿ ಬೆದರಿಕೆ ಅಥವಾ ಕಿರುಕುಳ ನೀಡಿದೆಯೇ ಎಂಬುದನ್ನು ಪರಿಶೀಲಿಸುವಂತೆ ಸಂಸದರು ಅಮೆರಿಕ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಇಂತಹ ಕೃತ್ಯಗಳು ನಡೆದಿರುವುದು ದೃಢಪಟ್ಟರೆ, ಶಸ್ತ್ರಾಸ್ತ್ರ ರಫ್ತು ನಿಯಂತ್ರಣ ಕಾಯ್ದೆಯಡಿ ಭಾರತಕ್ಕೆ ಶಸ್ತ್ರಾಸ್ತ್ರ ಮಾರಾಟ ಮಾಡುವ ಅರ್ಹತೆಯ ಕುರಿತು ಪರಿಶೀಲನೆ ನಡೆಸಬೇಕು ಎಂದೂ ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಪತ್ರದಲ್ಲಿ ಅಮೆರಿಕದ ‘ಆರ್ಮ್ಸ್ ಎಕ್ಸ್ಪೋರ್ಟ್ ಕಂಟ್ರೋಲ್ ಆಕ್ಟ್’ ಉಲ್ಲೇಖಿಸಿರುವುದು ಒಂದು ಗಮನಾರ್ಹ ಕಾನೂನಾತ್ಮಕ ಅಂಶ. ಅಮೆರಿಕದ ಈ ಕಾಯ್ದೆಯು ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆ ಮಾಡುವ ಅಥವಾ ವಿದೇಶಗಳಲ್ಲಿ ಅಸಮರ್ಪಕ ಚಟುವಟಿಕೆ ನಡೆಸುವ ರಾಷ್ಟ್ರಗಳಿಗೆ ಶಸ್ತ್ರಾಸ್ತ್ರ ಮಾರಾಟವನ್ನು ನಿರ್ಬಂಧಿಸಲು ಅವಕಾಶ ನೀಡುತ್ತದೆ. ಆದಾಗ್ಯೂ, ಪ್ರಸ್ತುತ ಭಾರತದೊಂದಿಗೆ ಶತಕೋಟಿ ಡಾಲರ್ ಮೌಲ್ಯದ ರಕ್ಷಣಾ ಒಪ್ಪಂದಗಳು ಜಾರಿಯಲ್ಲಿರುವುದರಿಂದ, ಈ ಕಾನೂನನ್ನು ಭಾರತದ ವಿರುದ್ಧ ಪ್ರಯೋಗಿಸುವ ಸಾಧ್ಯತೆ ಅತ್ಯಂತ ಕ್ಷೀಣವಾಗಿದೆ.





