“ಅಕ್ಟೋಬರ್ 23 ರಂದು ನಡೆಯಲಿರುವ ರಾಜ್ಯ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ ಅಭ್ಯರ್ಥಿಗಳ ವಿರುದ್ಧ ಮತ ಚಲಾಯಿಸಬೇಕು” ಎಂದು ಡಿವೈಎಫ್ಐ ಅಖಿಲ ಭಾರತ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರಾದ ಬಸವರಾಜ ಪೂಜಾರ ತಿಳಿಸಿದ್ದಾರೆ.
ಹಾವೇರಿ ನಗರದಲ್ಲಿ ಬುಧವಾರ ನಡೆದ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ), ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಸಂಘಟನೆಗಳ ಜಂಟಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.
“ಕೇಂದ್ರದ ಬಿಜೆಪಿ ನೇತೃತ್ವದ ಎನ್.ಡಿ.ಎ ಸರ್ಕಾರವು ವರ್ಷಕ್ಕೆ ಎರಡುಕೋಟಿ ಉದ್ಯೋಗಗಳನ್ನು ಸೃಷ್ಟಿಸುವ ಭರವಸೆ ನೀಡಿ ಅಧಿಕಾರ ಬಂದು 12 ವರ್ಷಗಳಾಗಿವೆ ಆದರೆ ಯುವಜನರ ಉದ್ಯೋಗವಕಾಶದ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದ್ದು ಮಾತ್ರವಲ್ಲ ಶಿಕ್ಷಣ ಹಾಗೂ ಉದ್ಯೋಗದ ಹಕ್ಕಿಗಾಗಿ ಹೋರಾಡುತ್ತಿರುವ ಯುವಜನರ ಮೇಲೆ ದೌರ್ಜನ್ಯಗಳನ್ನೇ ಹರಿಯ ಬಿಟ್ಟಿದ್ದು ಯುವಜನರು ಮರೆಯಲು ಸಾಧ್ಯವಿಲ್ಲ” ಎಂದಿದ್ದಾರೆ.
“ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಹಿಂದೆ ಗೆಲುವು ಸಾಧಿಸಿದ್ದ ಬಿಜೆಪಿ ಶಾಸಕರು ಈ ಭಾಗದ ಯುವಜನರ, ನೌಕರರ, ನಿವೃತ್ತ ನೌಕರರ ಸಮಸ್ಯೆಗಳಿಗೆ ಸಮರ್ಪಕವಾಗಿ ನ್ಯಾಯ ಒದಗಿಸಲು ವಿಫಲವಾಗಿದ್ದಾರೆ. ಈ ಹಿನ್ನಲೆಯಲ್ಲಿ ಪಶ್ಚಿಮ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಮೋಹನ ಲಿಂಬಿಕಾಯಿ ಅವರನ್ನು ಬೆಂಬಲಿಸಬೇಕು” ಎಂದು ಮನವಿ ಮಾಡಿದ್ದಾರೆ.
ಪಶ್ಚಿಮ ಪದವೀಧರ ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹಾವೇರಿ ಜಿಲ್ಲೆಯ ಪದವೀಧರರು, ಡಿವೈಎಫ್ಐ-ಎಸ್ಎಫ್ಐ ಕಾರ್ಯಕರ್ತರು, ನೌಕರರು, ಕಾರ್ಮಿಕರು, ನಿವೃತ್ತ ನೌಕರರು ಅಕ್ಟೋಬರ್ 23 ರಂದು ನಡೆಯುವ ಚುನಾವಣೆಯಲ್ಲಿ ಮೋಹನ ಲಿಂಬಿಕಾಯಿ ಅವರನ್ನು ಬೆಂಬಲಿಸಬೇಕೆಂದು ಡಿವೈಎಫ್ಐ, ಎಸ್ಎಫ್ಐ ಸಂಘಟನೆಗಳು ಕೋರುತ್ತವೆ ಎಂದು ಡಿವೈಎಫ್ಐ ಜಿಲ್ಲಾಧ್ಯಕ್ಷರಾದ ಬಸವರಾಜ ಎಸ್ ತಿಳಿಸಿದ್ದಾರೆ.
ಸಭೆಯಲ್ಲಿ ಎಸ್ಎಫ್ಐ ಜಿಲ್ಲಾಧ್ಯಕ್ಷರಾದ ಅರುಣಕುಮಾರ್ ನಗವತ್, ಜಿಲ್ಲಾಕಾರ್ಯದರ್ಶಿ ಚೈತ್ರಾ ಕೊರವರ, ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಖಲಂದರ್ ಅಲ್ಲಿಗೌಡ್ರ, ನಾರಾಯಣ ಕಾಳೆ ಪ್ರಕಟಣೆಯ ಮೂಲಕ ವಿನಂತಿಸಿದ್ದಾರೆ..






