ವಿಜಯಪುರ ಜಿಲ್ಲೆಯನ್ನು 371(ಜೆ) ಮೀಸಲಾತಿಯಿಂದ ಹೊರಗಿಟ್ಟಿರುವುದು ದೊಡ್ಡ ಅನ್ಯಾಯವಾಗಿದ್ದು, ರಾಜ್ಯ ಸರ್ಕಾರ ಕೂಡಲೇ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿ ಜಿಲ್ಲೆಯ ಜನರಿಗೆ ನ್ಯಾಯ ಒದಗಿಸಬೇಕು ಎಂದು ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಆಗ್ರಹಿಸಿದರು.
ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದಲ್ಲಿ ವಿಜಯಪುರ ಜಿಲ್ಲಾ 371(ಜೆ) ಹೋರಾಟ ಸಮಿತಿ ಆಯೋಜಿಸಿದ್ದ ಜನಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಮಕ್ಕಳ ಶಿಕ್ಷಣ ಹಾಗೂ ಯುವಜನರ ಉದ್ಯೋಗಾವಕಾಶಗಳಿಗಾಗಿ 371(ಜೆ) ಮೀಸಲಾತಿ ಅಗತ್ಯವಿದೆ. ಹೀಗಾಗಿ ಬಸವನಬಾಗೇವಾಡಿ, ಕೊಲ್ಹಾರ, ನಿಡಗುಂದಿ ಸೇರಿದಂತೆ ಜಿಲ್ಲೆಯ ಜನರು ಹೋರಾಟಕ್ಕೆ ಬೆಂಬಲಿಸಬೇಕು ಎಂದರು.
ಸಮಿತಿ ಮುಖಂಡ ಅನಿಲ ಇಕ್ಕಡೆ ಮಾತನಾಡಿ, ಮೀಸಲಾತಿಯಿಂದ ಜಿಲ್ಲೆಯನ್ನು ಹೊರಗಿಟ್ಟಿರುವುದು ಅಭಿವೃದ್ಧಿಗೆ ಹಿನ್ನಡೆಯಾಗಿದ್ದು, ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಎಲ್ಲರೂ ಹೋರಾಟಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಮಲ್ಲಿಕಾರ್ಜುನ ಬೆಳ್ಳುಬ್ಬಿ, ಪ್ರಶಾಂತ ಪವಾರ, ಜಿ.ಆರ್. ನ್ಯಾಮಗೌಡ, ಓಂಕಾರಪ್ಪಗೌಡ ಪಾಟೀಲ, ಇಸ್ಮಾಯಿಲ್ ತಹಸೀಲ್ದಾರ, ಅಪ್ಪುಗೌಡ ಪಾಟೀಲ ಸೇರಿದಂತೆ ನೂರಾರು ಜನರು ಉಪಸ್ಥಿತರಿದ್ದರು.





