ಶಿಗ್ಗಾಂವಿ ವಿಧಾನಸಭಾ ಉಪಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಘೋಷಿಸಿದೆ. ಶಿಗ್ಗಾಂವಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಯಾಸಿರ್ ಅಹ್ಮದ್ ಖಾನ್ ಪಠಾಣ್ ಅವರನ್ನು ಆಯ್ಕೆ ಮಾಡಿ ಎಐಸಿಸಿ ಆದೇಶ ಹೊರಡಿಸಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಆದೇಶದ ಮೇರೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಅವರು ಇಂದು (ಅಕ್ಟೋಬರ್ 24) ಅಧಿಕೃತ ಆದೇಶ ಹೊರಡಿಸಿದ್ದಾರೆ.
ಹಾನಗಲ್ ತಾಲೂಕಿನ ಬೊಮ್ಮನಳ್ಳಿ ಗ್ರಾಮದವರಾದ ಯಾಸೀರ್ ಅಹ್ಮದ್ ಖಾನ್ ಪಠಾಣ್, ವಿಧಾನಸಭಾ ಚುನಾವಣೆಯಲ್ಲಿ ಶಿಗ್ಗಾಂವಿ ಕ್ಷೇತ್ರದಿಂದ ಸ್ಪರ್ಧಿಸಿ ಬಿಜೆಪಿಯ ಬಸವರಾಜ್ ಬೊಮ್ಮಾಯಿ ವಿರುದ್ಧ ಸ್ಪರ್ಧಿಸಿದ್ದರು. ಇದೀಗ ಉಪಚುನಾವಣೆಗೂ ಸಹ ಕಾಂಗ್ರೆಸ್, ಹೈಕಮಾಂಡ್ ಯಾಸೀರ್ ಅಹ್ಮದ್ ಖಾನ್ ಪಠಾಣ್ ಅವರನ್ನೇ ಕಣಕ್ಕಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಈದಿನ ಸಂಪಾದಕೀಯ | ಮಳೆ ನಿರ್ವಹಣೆಗೆ ಬೇಕು 500 ವರ್ಷಗಳ ದೂರದೃಷ್ಟಿ
ಬಸವರಾಜ ಬೊಮ್ಮಾಯಿ ರಾಜೀನಾಮೆಯಿಂದ ತೆರವಾದ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಟಿಕೆಟ್ಗಾಗಿ ಕಾಂಗ್ರೆಸ್ನಲ್ಲಿ ಭಾರಿ ಪೈಪೋಟಿ ನಡೆದಿತ್ತು. ಕಳೆದ ಐದು ಚುನಾವಣೆಗಳಲ್ಲೂ ಸಹ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಲಾಗಿದ್ದು, ಈ ಬಾರಿ ಲಿಂಗಾಯತ ಸಮುದಾಯಕ್ಕೆ ಟಿಕೆಟ್ ನೀಡಬೇಕೆಂಬ ಕೂಗು ಕೇಳಿ ಬಂದಿದ್ದವು.
ಅಲ್ಪಸಂಖ್ಯಾತ ಸಮುದಾಯದಿಂದ ಅಜ್ಜಂಫೀರ್ ಖಾದ್ರಿ ಹಾಗೂ ಯಾಸೀರ್ ಖಾನ್ ಪಠಾಣ್ ನಡುವೆ ಪೈಪೋಟಿ ಇತ್ತು. ಮತ್ತೊಂದೆಡೆ ಲಿಂಗಾಯತ ಸಮುದಾಯದಿಂದ ಸಂಜೀವ್ ನೀರಲಗಿ, ಸೋಮಣ್ಣ ಬೇವಿನಮರ ಅವರು ಟಿಕೆಟ್ಗಾಗಿ ಕಸರತ್ತು ನಡೆಸಿದ್ದರು. ಆದರೆ, ಅಂತಿಮವಾಗಿ ಹೈಕಮಾಂಡ್ ಮತ್ತೆ ಯಾಸೀರ್ ಖಾನ್ ಪಠಾಣ್ ಅವರಿಗೆ ಮಣೆ ಹಾಕಿದೆ.
