ಸಾಮಾನ್ಯವಾಗಿ ಆರೋಗ್ಯ ಕೇಂದ್ರಕ್ಕೆ ಎಲ್ಲರೂ ಬರುವುದು ಅನಾರೋಗ್ಯದಿಂದ ಮುಕ್ತರಾಗುವುದಕ್ಕೆ. ಆದರೆ; ಈ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ವಾತಾವರಣ ಹೊಸ ರೋಗವನ್ನು ತಂದೊಡ್ಡುವಂತಿದೆ. ಅಷ್ಟಕ್ಕೂ ಈ ಗ್ರಾಮ ಯಾವುದು ಗೊತ್ತೇ? ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜನಿಸಿದ ಕಮಡೊಳ್ಳಿ ಗ್ರಾಮ.
ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಈ ಗ್ರಾಮದ ಆರೋಗ್ಯ ಕೇಂದ್ರದಲ್ಲಿ ಖಾಯಂ ಆರೋಗ್ಯಾಧಿಕಾರಿಯಿಲ್ಲ. ಒಬ್ಬರೆ ನರ್ಸ್ ಇದ್ದು, ಅವರೂ ತಿಳಿದಾಗೊಮ್ಮೆ ಬಂದು ಹೋಗುತ್ತಾರೆ. ರೋಗಿಗಳು ಹೆಚ್ಚಿನ ಚಿಕಿತ್ಸೆಗಾಗಿ ಕುಂದಗೋಳದ ತಾಲೂಕು ಸರ್ಕಾರಿ ಆಸ್ಪತ್ರಗೆ ಹೋಗಬೇಕಾದ ಅನಿವಾರ್ಯತೆ ಉಂಟಾಗಿದೆ. ನಮ್ಮೂರಿನ ಆರೋಗ್ಯ ಕೇಂದ್ರದ ಸಮಸ್ಯೆ ಯಾವತ್ತು ಬಗೆಹರಿಯುವುದೊ? ಎಂದು ನಿಟ್ಟುಸಿರು ಬಿಡುತ್ತಾರೆ ಗ್ರಾಮಸ್ಥರು.
“ಆರೋಗ್ಯ ಕೇಂದ್ರದ ಸುತ್ತಲೂ ಗಿಡಗಂಟಿ ಕಸದಂತೆ ಬೆಳೆದಿದೆ. ಆಸ್ಪತ್ರೆ ಬಳಿಯೇ ಬಸ್ ನಿಲ್ದಾಣವಿದ್ದು, ಅದರ ಕಟ್ಟೆಯ ಮೇಲೆ ಕುಡುಕರು ಮದ್ಯಪಾನ ಮಾಡಿ ವಾತಾವರಣ ಕಲುಸಿತಗೊಳಿಸುತ್ತಾರೆ. ಈ ದಾವಾಖಾನೆಯ ಹಿಂದೆಯೆ ಸ್ಥಳಿಯರು ಮಲ, ಮೂತ್ರ ವಿಸರ್ಜನೆ ಮಾಡುತ್ತಾರೆ. ಸ್ಥಳೀಯರೂ ಗ್ರಾಮದ ಆರೋಗ್ಯ ಕೇಂದ್ರವನ್ನು ಉಳಿಸಿಕೊಳ್ಳುವ ಜವಾಬ್ದಾರಿ ಮರೆತಿದ್ದಾರೆ” ಎಂದು ಗ್ರಾಮ ಪಂಚಾಯತಿ ಉಪಾಧ್ಯಕ್ಷ ದಾದಾಪೀರ ಗುಡಗೇರಿ ಬೇಸರ ವ್ಯಕ್ತಪಡಿಸಿದರು.
ಈ ಕುರಿತು ಗ್ರಾಮ ಪಂಚಾಯತಿ ಅಧ್ಯಕ್ಷೆ ಮಾತನಾಡಿ, “ಆರೋಗ್ಯ ಕೇಮದ್ರದ ಹಳೆ ಕಟ್ಟಡವು ಸಂಪೂರ್ಣ ಹಾಳಾಗಿದ್ದು ನಮ್ಮೂರಿಗೆ ಒಂದು ಪ್ರತ್ಯೇಕ ಆರೋಗ್ಯ ಕೇಂದ್ರದ ಅವಶ್ಯಕತೆಯಿದೆ. ಈ ಗ್ರಾಮದ ನಿವಾಸಿಗಳಲ್ಲಿ ಅತಿಹೆಚ್ಚು ಬಡವರಿದ್ದಾರೆ. ಅದ್ದರಿಂದ ಅವರಿಗೆಲ್ಲ ಅನುಕೂಲ ಮಾಡಿಕೊಡಲು ಅಧಿಕಾರಿಗಳೊಂದಿಗೆ ಮಾತನಾಡಿ ದಾವಾಖಾನೆಯನ್ನು ಸ್ವಚ್ಛಗೊಳಸಲಾಗುವುದು” ಎಂದರು.
ಈ ಸುದ್ದಿ ಓದಿದ್ದೀರಾ?: ಮೈಸೂರು | ‘ಸೋಮಾರಿ ಸಿದ್ದ’ ಎಂದ ಬಿಜೆಪಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್‌ಐಆರ್
“ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನಮ್ಮೂರಿನವರೆ ಆದಕಾರಣ; ಅವರ ಅಧಿಕಾರಾವಧಿಯಲ್ಲಿ ಆರೋಗ್ಯ ಕೇಂದ್ರಕ್ಕಾಗಿ ಎರಡು ಎಕರೆ ಜಮೀನನ್ನು ದಾನವನ್ನಾಗಿ ನೀಡಿದ್ದಾರೆ. ಆದರೆ, ಇಂದಿಗೂ ಆ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಗ್ರಾಮ ಪಂಚಾಯತಿ ಸದಸ್ಯರೂ ಸಹಿತ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವುದಿಲ್ಲ. ದಾವಾಖಾನೆಯಲ್ಲೂ ಕೂಡಾ ರೋಗಿಗಳಿಗೆ ಸರಿಯಾದ ವ್ಯವಸ್ಥೆಯಿಲ್ಲ” ಎಂದು ಸ್ಥಳಿಯರು ಹೇಳುತ್ತಾರೆ.
ಮಾಜಿ ಗ್ರಾಮಪಂಚಾಯತಿ ಉಪಾಧ್ಯಕ್ಷ ಶಂಭಯ್ಯ ನೀರಲಗಿಮಠ ಮಾತನಾಡಿ, “ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಸರ್ಕಾರ ಅನುಮತಿ ನೀಡಿದೆ ಎಂದು ಬಸವರಾಜ ಬೊಮ್ಮಾಯಿಯವರೆ ಹೇಳಿದ್ದರು. ಮುಖ್ಯ ಆರೋಗ್ಯ ಅಧಿಕಾರಿಗಳಿಂದಲೂ ಈ ಹಿಂದೆ ಸರ್ಕಾರದಿಂದ ಅನುದಾನವೂ ಬಿಡುಗಡೆಯಾಗಿದೆ. ನಾವು ಜಾಗೆ ನೋಡಲು ಬರುತ್ತೇವೆ ಎಂದು ಹೇಳಿದ್ದರು. ಅನಿವಾರ್ಯ ಕಾರಣದಿಂದ ಯಾರೂ ಬರಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರಿಗೆ, ಆರೋಗ್ಯ ಸಚಿವರಿಗೆ, ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೂ ಮನವಿ ಸಲ್ಲಿಸಿದ್ದೇವೆ. ಒಂದು ವೇಳೆ ಸರ್ಕಾರ ಅನುದಾನ ಬಿಡುಗಡೆಗೊಳಿಸಿದರೆ; ಆರೋಗ್ಯ ಕೆಂದ್ರದ ಸುಸಜ್ಜಿತ ಕಟ್ಟಡ ನಿರ್ಮಿಸಲು ಮುಂದಾಗುತ್ತೇವೆ” ಎಂದು ತಿಳಿಸಿದರು.