ಶಟಲ್ ಬ್ಯಾಡ್ಮಿಂಟನ್ ಆಡುತ್ತಿದ್ದ ವೇಳೆ ಹೃದಯಾಘಾತದಿಂದ ಯುವಕನೋರ್ವ ಮೃತಪಟ್ಟ ದಾರುಣ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದಲ್ಲಿ ಬುಧವಾರ ಸಂಜೆ ನಡೆದಿದೆ.
ಮೃತಪಟ್ಟ ಯುವಕನನ್ನು ಮಂಗಳೂರು ನಗರದ ನಿವಾಸಿ, ಅನಿವಾಸಿ ಭಾರತೀಯ ಶರೀಫ್ ಬಾವಾ ಅದೂರು ಎಂಬವರ ಪುತ್ರ ಕೆ. ಅಹ್ಮದ್ ಶಹೀಮ್ ಶರೀಫ್ (21) ಎಂದು ಗುರುತಿಸಲಾಗಿದೆ.
ಬುಧವಾರ ಸಂಜೆ ಯುವಕ ಶಹೀಮ್ ಶಟಲ್ ಬ್ಯಾಡ್ಮಿಂಟನ್ ಆಡುತ್ತಿದ್ದ ವೇಳೆ ಏಕಾಏಕಿ ಕುಸಿದು ಬಿದ್ದಿದ್ದಾರೆ. ಕೂಡಲೇ ಮಂಗಳೂರು ನಗರದ ಫಳ್ನೀರ್‌ನಲ್ಲಿರುವ ಖಾಸಗಿ ಯುನಿಟಿ ಆಸ್ಪತ್ರೆಗೆ ಸೇರಿಸಲಾಯಿತಾದರೂ ಅಷ್ಟೊತ್ತಿಗಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಪರೀಕ್ಷೆ ಮಾಡಿದ ಬಳಿಕ ತಿಳಿಸಿದ್ದಾರೆ.
ಯುವಕನ ತಂದೆ ಶರೀಫ್ ಅವರು ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನಲ್ಲಿ ಉದ್ಯೋಗದಲ್ಲಿದ್ದು, ಮಗನ ಸಾವಿನ ವಿಚಾರ ತಿಳಿದ ಹಿನ್ನೆಲೆಯಲ್ಲಿ ಊರಿಗೆ ಮರಳುತ್ತಿದ್ದಾರೆ. ತಂದೆಯ ಆಗಮನದ ನಂತರ ಶಹೀಮ್ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದ ಶಹೀಮ್,
ಮಂಗಳೂರಿನ ಸಾಮಾಜಿಕ ಸಂಘಟನೆಯಾದ ಹೈಲ್ಯಾಂಡ್ ಇಸ್ಲಾಮಿಕ್ ಫಾರಂನಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು. ಶಹೀಮ್ ಅಗಲುವಿಕೆ ನಮಗೆ ತುಂಬಲಾರದ ನಷ್ಟ ಎಂದು ಎಚ್‌ಐಎಫ್ ಸಂತಾಪ ಸೂಚಿಸಿದೆ.
ಯುವಕ ಶಹೀಮ್ ಅವರ ಅಂತ್ಯಕ್ರಿಯೆಯು ಗುರುವಾರ(ಜ.16) ಝುಹರ್ ನಮಾಜಿನ ಬಳಿಕ ಬೋಳಾರದ ಜುಮಾ ಮಸೀದಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಸದಸ್ಯರು ಮಾಹಿತಿ ನೀಡಿದ್ದಾರೆ.
