ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿದ ಮಳೆಗೆ ಔರಾದ್ ಹಾಗೂ ಕಮಲನಗರ ತಾಲ್ಲೂಕಿನ ವಿವಿಧೆಡೆ ಹಾನಿಗೊಳಗಾದ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಹಾಗೂ ಜಿಲ್ಲಾ ಪಂಚಾಯತ ಸಿಇಒ ಡಾ.ಗಿರೀಶ ಬದೋಲೆ ಸೋಮವಾರ ಭೇಟಿ ನೀಡಿ ಮಳೆ ಹಾನಿ ಸ್ಥಿತಿಗತಿ ವೀಕ್ಷಿಸಿದರು.
ಔರಾದ್ ತಾಲ್ಲೂಕಿನ ಬೋಂತಿ, ಬಾವಲಗಾಂವ ಹಾಗೂ ಹಂಗರಗಾ ಗ್ರಾಮಗಳ ನೂರಾರು ಎಕರೆ ಹೊಲಗಳಿಗೆ ನೀರು ನುಗ್ಗಿ ವಿವಿಧೆಡೆ ಸಂಪರ್ಕ ಸೇತುವೆಗೆ ಹಾನಿಗೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಭೇಟಿ ನೀಡಿ ವೀಕ್ಷಿಸಿದರು.

ಬೋಂತಿ ಗ್ರಾಮದ ಸಣ್ಣ ನೀರಾವರಿ ಇಲಾಖೆಯ ಕೆರೆಯೊಂದು ಒಡೆದು ಹೋಗಿದ್ದರಿಂದ ಅಪಾರ ಪ್ರಮಾಣದ ನೀರು ಹರಿದು ಬೋಂತಿ, ಬಾವಲಗಾಂವ ಹಾಗೂ ಹಂಗರಗಾ ಗ್ರಾಮಗಳ ಸಂಪರ್ಕ ಸೇತುವೆ ಕುಸಿದು ಬೃಹತ್ ಗುಂಡಿ ನಿರ್ಮಾಣಗೊಂಡ ಹಿನ್ನೆಲೆಯಲ್ಲಿ ಸಾರ್ವಜನಿಕರು ಈ ಕಡೆ ಓಡಾಡದಂತೆ ಎಚ್ಚರಿಕೆ ವಹಿಸುವಂತೆ ಡಂಗೂರ ಸಾರುವಂತೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಔರಾದ್ ತಹಸೀಲ್ದಾರ ಮಹೇಶ ಪಾಟೀಲ ಅವರಿಗೆ ತಿಳಿಸಿದರು.
ಬಾವಲಗಾಂವ ಹಾಗೂ ಹಂಗರಗಾ ಗ್ರಾಮಗಳ ಸಣ್ಣ ನೀರಾವರಿ ಕೆರೆ ಒಡೆದು ನೂರಾರು ಎಕರೆ ಬೆಳೆ ಪ್ರದೇಶಗಳಿಗೆ ನೀರು ನುಗ್ಗಿದೆ. ಬಾವಲಗಾಂವ ಗ್ರಾಮಸ್ಥರಿಗೆ ತಕ್ಷಣವೇ ಸ್ಥಳೀಯ ಶಾಲೆಯಲ್ಲಿ ಕಾಳಜಿ ಕೇಂದ್ರ ಆರಂಭಿಸುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು ನಿರಂತರ ಮಳೆಯಿರುವ ಕಾರಣ ಗ್ರಾಮಸ್ಥರು ಹಾಗೂ ಜನ-ಜಾನುವಾರುಗಳನ್ನು ನೀರಿನ ಮೂಲಗಳ ಹತ್ತಿರ ಬಿಡದಂತೆ ಎಚ್ಚರವಹಿಸುವಂತೆ ಸೂಚಿಸಿದರು.
ʼಆಗಸ್ಟ್ 17 ರಂದು ಒಂದೇ ದಿನ 300 ಮೀ.ಮಿ. ಮಳೆಯಾಗಿದ್ದು, ನಾಲ್ಕು ಸಂಪರ್ಕ ಸೇತುವೆ ಭಾಗಶಃ ಹಾನಿಯಾಗಿವೆ. ಅಂದಾಜು 500 ಎಕರೆ ಬೆಳೆ ಹಾನಿಯಾಗಿದ್ದು ಮಳೆ ನಿಂತ ಮೇಲೆ ಸಮೀಕ್ಷೆ ಕೈಗೊಳ್ಳಲಾಗುವುದು. ಸದ್ಯಕ್ಕೆ ಯಾವುದೇ ರೀತಿಯ ಜೀವ ಹಾನಿ ಸಂಭವಿಸಿರುವುದಿಲ್ಲ. ಮನೆಗಳಿಗೂ ಯಾವುದೇ ರೀತಿಯ ಹಾನಿಯಾಗಿಲ್ಲʼ ಎಂದು ಔರಾದ್ ತಹಸೀಲ್ದಾರ ಮಹೇಶ ಪಾಟೀಲ ತಿಳಿಸಿದರು.

ನಂತರ ಜಿಲ್ಲಾಧಿಕಾರಿಗಳು ಕಮಲನಗರ ತಾಲ್ಲೂಕಿನ ನಂದಿ ಬಿಜಲಗಾಂವ ಗ್ರಾಮದಲ್ಲಿ ಹಾನಿಗೊಳಗಾದ ಸೇತುವೆ, ಬೆಳೆ ಹಾನಿ ವೀಕ್ಷಿಸಿದರು. ಹಲವಾರು ವಿದ್ಯುತ್ ಕಂಬಗಳು ಹಾನಿಗೊಳಗಾಗಿವೆ ಗ್ರಾಮದ ಕೆಲ ಮನೆಗಳಿಗೂ ಭಾಗಶಃ ಹಾನಿಯಾಗಿದ್ದು ಸಮೀಕ್ಷೆ ನಡೆಸಿ ತುರ್ತು ಪರಿಹಾರ ನೀಡುವಂತೆ ತಹಸೀಲ್ದಾರರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಪ್ರೋಬೇಷನರಿ ಐಎಎಸ್ ಅಧಿಕಾರಿ ರಮ್ಯಾ, ಸಹಾಯಕ ಆಯುಕ್ತ ಮಹ್ಮದ ಶಕೀಲ್, ತಾಲ್ಲೂಕ ಪಂಚಾಯತ ಇಒ ಕಿರಣ ಪಾಟೀಲ ಸೇರಿದಂತೆ ಅಧಿಕಾರಿಗಳು, ಗ್ರಾಮಸ್ಥರು ಇದ್ದರು.
ಮಳೆ ಅನಾಹುತ: ಸೂಕ್ತ ಕ್ರಮಕ್ಕೆ ಈಶ್ವರ ಖಂಡ್ರೆ ಸೂಚನೆ
ಬೀದರ್ ಜಿಲ್ಲೆಯ ಕಮಲನಗರ ತಾಲೂಕಿನ ನಂದಿಬಿಜಲಗಾಂವ್ ಮತ್ತು ಇತರ ಕಡೆಗಳಲ್ಲಿ ಭಾನುವಾರ ರಾತ್ರಿಯಿಡೀ ಸುರಿದ ಧಾರಾಕಾರ ಮಳೆಗೆ ಬೆಳೆ ಹಾನಿ ಮತ್ತು 15ಕ್ಕೂ ಹೆಚ್ಚು ಜಾನುವಾರುಗಳು ಸಾವಿಗೀಡಾಗಿರುವ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಕೂಡಲೇ ಪರಿಹಾರ ಮತ್ತು ರಕ್ಷಣಾ ಕಾರ್ಯ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿಗಳಿಗೆ ಸೋಮವಾರ ಅಧಿಕೃತ ಟಿಪ್ಪಣಿ ಕಳಿಸಿರುವ ಸಚಿವರು, ಕೂಡಲೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ, ಕಡಿತಗೊಂಡಿರುವ ರಸ್ತೆ, ವಿದ್ಯುತ್ ಸಂಪರ್ಕ ಮರುಸ್ಥಾಪನೆಗೆ ಕ್ರಮ ಕೈಗೊಳ್ಳಲು ಹಾಗೂ ತತ್‌ಕ್ಷಣದ ಪರಿಹಾರ ಮತ್ತು ರಕ್ಷಣಾ ಕಾರ್ಯ ಕೈಗೊಳ್ಳಲು ಸೂಚಿಸಿದ್ದಾರೆ.

ಜಿಲ್ಲೆಯಲ್ಲಿ ಮಳೆಯಿಂದ ಆಗಿರುವ ಬೆಳೆ ಹಾನಿ ಮತ್ತು ಜಾನುವಾರು ಹಾನಿಯ ಬಗ್ಗೆ 24 ಗಂಟೆಯೊಳಗೆ ಪ್ರಾಥಮಿಕ ವರದಿ ಸಲ್ಲಿಸಲೂ ಸಚಿವ ಈಶ್ವರ ಖಂಡ್ರೆ ಸೂಚಿಸಿದ್ದಾರೆ.
ಕಮಲನಗರನಲ್ಲಿ ಮೇಘಸ್ಪೋಟ, ಪರಿಹಾರಕ್ಕೆ ಬಿಜೆಪಿ ಆಗ್ರಹ
ಔರಾದ ವಿಧಾನಸಭಾ ಕ್ಷೇತ್ರದ ದಾಬಕಾ ಹಾಗೂ ಭಂಡಾರ ಕುಮಟಾ ಭಾಗದಲ್ಲಿ ಮೇಘಸ್ಪೋಟ ಸಂಭವಿಸಿದ್ದು. ಭಾನುವಾರ ಒಂದೇ ರಾತ್ರಿಯಲ್ಲಿ 309ಮೀ.ಮೀ ಕುಂಭದ್ರೋಣ ಮಳೆ ದಾಖಲಾಗಿದೆ. ಒಂದೇ ರಾತ್ರಿಯಲ್ಲಿ ಸುರಿದ ಅಪಾರ ಮಳೆಯಿಂದಾಗಿ ಬೊಂತಿ ಸೇರಿದಂತೆ ಅನೇಕ ಕಡೆ ಕೆರೆ ಕೊಡಿಗಳು ಒಡೆದಿದ್ದು ರೈತರ ಸಾವಿರಾರು ಎಕರೆ ಜಮೀನು ಜಲಾವೃತವಾಗಿ ಬೆಳೆ ಹಾನಿಯಾಗಿದೆ.

ʼರಸ್ತೆ ಹಾಗೂ ಸೇತುವೆಗಳು ನೀರಿನ ರಭಸಕ್ಕೆ ಕೊಚ್ಚಿಕೊಂಡ ಹೋಗಿವೆ, ಬಡವರ ಮನೆಗಳು ನೆಲಸಮವಾಗಿವೆ. ಆದ್ದರಿಂದ ಸಂಕಕಷ್ಟದಲ್ಲಿರುವ ಈ ಭಾಗದ ರೈತರು ಹಾಗೂ ಸಾರ್ವಜನಿಕರ ಸಹಾಯಕ್ಕೆ ಜಿಲ್ಲಾಡಳಿತ ಹಾಗೂ ಸರ್ಕಾರ ಮತ್ತು ಜಿಲ್ಲೆಯ ಉಸ್ತುವಾರಿ ಸಚಿವರು ಸೇರಿದಂತೆ ಇಬ್ಬರು ಸಚಿವರು ಅಲ್ಲಿಯೇ ಠಿಕಾಣಿ ಹೂಡಿ ಸಂತ್ರಸ್ತರಿಗೆ ಪರಿಹಾರ ಒದಗಿಸಿಕೊಡಬೇಕುʼ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ರಾಜ್ಯದಲ್ಲಿ ಅಧಿಕ ಮಳೆ : 4 ತಿಂಗಳಲ್ಲಿ 101 ಜನ, 843 ಜಾನುವಾರು ಸಾವು; 15 ಸಾವಿರ ಹೆಕ್ಟೇರ್ ಬೆಳೆ ಹಾನಿ
ಕಳೆದ ವರ್ಷದ ಪ್ರಧಾನಮಂತ್ರಿ ಫಸಲ ಭೀಮಾ ಯೊಜನೆಯಡಿ ಪಕ್ಕದ ಕಲಬುರಗಿ ಜಿಲ್ಲೆಯ ರೈತರಿಗೆ 650 ಕೋಟಿ ರೂ. ಪರಿಹಾರ ದೊರಕಿದ್ದು, ಈಗಾಗಲೇ 325 ಕೋಟಿ ರೂ. ರೈತರ ಖಾತೆಗೆ ಜಮೆಯಾಗಿದೆ. ಆದರೆ, ಬೀದರ ಜಿಲ್ಲೆಯ ರೈತರಿಗೆ ಯಾವುದೆ ಪರಿಹಾರ ದೊರೆತಿಲ್ಲ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ನಮ್ಮ ಜಿಲ್ಲೆಯ ರೈತರಿಗೂ ಪರಿಹಾರ ದೊರೆಕಿಸಿಕೊಡಲು ಜಿಲ್ಲಾಡಳಿತ ಹಾಗೂ ಉಸ್ತುವಾರಿ ಸಚಿವರು ಶ್ರಮಿಸಬೇಕೆಂದು ಅವರು ಪತ್ರಿಕಾ ಪ್ರಕಟಣೆಯ ಮುಖಾಂತರ
ಒತ್ತಾಯಿಸಿದ್ದಾರೆ.
ಮಳೆ ಹಾನಿಯ ಚಿತ್ರಾವಳಿ :


